ವೀರೇನ್‍ಖನ್ನಾ ಮೊಬೈಲ್‍ನಲ್ಲಿ ಪ್ರಾಬಲ್ಯರ ಸಂಪರ್ಕ ಮಾಹಿತಿ..!

Spread the love

ಬೆಂಗಳೂರು, ಸೆ.23- ಡ್ರಗ್ಸ್ ಜಾಲದ ಬಗ್ಗೆ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ತನಿಖೆಯನ್ನು ಆಳವಾಗಿ ನಡೆಸಿದಷ್ಟೂ ಮತ್ತಷ್ಟು ಮಹತ್ವದ ಮಾಹಿತಿಗಳು ಆರೋಪಿಗಳ ಮೊಬೈಲ್‍ಗಳಿಂದ ಲಭ್ಯವಾಗುತ್ತಿದೆ. ಈಗಾಗಲೇ ಬಂಧಿಸಲಾಗಿರುವ ದೆಹಲಿ ಮೂಲದ ಪಾರ್ಟಿ ಆಯೋಜಕ ವೀರೇನ್ ಖನ್ನಾ ಅವರ ಮೊಬೈಲ್ ರಿಟ್ರೈವ್ ಆಗಿದ್ದು, ಅದರಲ್ಲಿ ಬಹಳಷ್ಟು ಮಾಹಿತಿಗಳು ಲಭ್ಯವಾಗಿವೆ.

ವೀರೇನ್ ಖನ್ನಾ ಬಂಧನ ಸಂದರ್ಭದಲ್ಲಿ ಆತನ ಮೊಬೈಲನ್ನು ಪೊಲೀಸರು ವಶಪಡಿಸಿಕೊಂಡು ಎಫ್‍ಎಸ್‍ಎಲ್‍ಗೆ ಕಳುಹಿಸಿದ್ದರು. ಇದೀಗ ಮೊಬೈಲ್ ರಿಟ್ರೈವ್ ಆಗಿದೆ. ಅದರಲ್ಲಿ ನಟ-ನಟಿಯರಲ್ಲದೆ ರಾಜಕಾರಣಿ, ಉದ್ಯಮಿ ಮತ್ತು ಗಣ್ಯ ವ್ಯಕ್ತಿಗಳ ಮಕ್ಕಳ ಸಂಪರ್ಕ ಇರುವುದು ವೀರೇನ್ ಖನ್ನಾ ಮೊಬೈಲ್‍ನಿಂದ ತಿಳಿದು ಬಂದಿದೆ.

ಈಗ ಅವರುಗಳನ್ನು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೊಡಲು ಸಿಸಿಬಿ ಸಿದ್ದತೆ ಮಾಡಿಕೊಂಡಿದೆ. ಇದೇ ರೀತಿ ಈಗಾಗಲೇ ಬಂಧಿತರಾಗಿರುವ ನಟಿಯರಾದ ಸಂಜನಾ, ರಾಗಿಣಿ, ಪಾರ್ಟಿ ಆಯೋಜಕರಾದ ರವಿಶಂಕರ್, ರಾಹುಲ್ ಮುಂತಾದವರ ಮೊಬೈಲ್‍ಗಳಿಂದ ಹಲವು ಮಾಹಿತಿ ಸಿಸಿಬಿ ಪೊಲೀಸರಿಗೆ ಲಭ್ಯವಾಗಿದ್ದು, ಅವರು ಯಾರ್ಯಾರ ಜತೆ ಸಂಪರ್ಕ ಇಟ್ಟುಕೊಂಡಿದ್ದರು ಎಂಬುದು ಸಹ ಗೊತ್ತಾಗಿದೆ.

ಕೆಲವು ಆರೋಪಿಗಳು ಹವಾಲಾ ದಂಧೆಯಲ್ಲೂ ಸಹ ಭಾಗಿಯಾಗಿರುವುದು ಮೊಬೈಲ್‍ನಿಂದ ಮಾಹಿತಿ ಲಭಿಸಿದೆ. ಸಿಸಿಬಿ ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ತೀವ್ರಗೊಳಿಸಿದ್ದಾರೆ.

Facebook Comments