‘ಡಾ.ವೀರೇಂದ್ರ ಹೆಗಡೆ ಅವರ ಮೇಲೆ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು’

ಬೆಂಗಳೂರು, ಮಾ.31- ಧರ್ಮ ಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರು ಸಾವಿರಾರು ಎಕರೆ ಜಮೀನು ಕಬಳಿಸುವ ಹುನ್ನಾರ ಮಾಡಿದ್ದಾರೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ ಎಂದಿರುವ ಜಾಗೃತ ಭಕ್ತ ಸಮುದಾಯ ಇದನ್ನು ತೀವ್ರವಾಗಿ ಖಂಡಿಸಿದೆ. ಗುರುವಾಯನಕೆರೆಯ ಸೋಮನಾಥ ನಾಯಕ್ ಎಂಬಾತ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣ ಮತ್ತು ಕೆಲವು ಪತ್ರಿಕೆಗಳಲ್ಲಿ ಧರ್ಮಸ್ಥಳದ ಜಮೀನಿನ ಕುರಿತು ಅನಗತ್ಯ ಹಾಗೂ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಆದರೆ ಡಾ.ವೀರೇಂದ್ರ ಹೆಗಡೆಯವರು ಇಂತಹ ಯಾವುದೇ ಹುನ್ನಾರ ಮಾಡಿಲ್ಲ ಎಂದು ಕನಕ ಸದ್ಭಾವನ ಜ್ಯೋತಿ ರಥಯಾತ್ರೆ ಸಮಿತಿ ರಾಜ್ಯಾಧ್ಯಕ್ಷ ಎಂ. ಕೃಷ್ಣಮೂರ್ತಿ ಹೇಳಿದ್ದಾರೆ.

ಇಂತಹ ಅಪಪ್ರಚಾರದ ಬಗ್ಗೆ ಸತ್ಯಾಂಶವನ್ನು ತಿಳಿಸಿಕೊಡುವುದೇ ನಮ್ಮ ಉದ್ದೇಶ. ಈ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಸಂಬಂಧಿಸಿದ ಜಮೀನುಗಳ ಪಹಣಿ ಪತ್ರಿಕೆಗಳನ್ನು ಪರಿಶೀಲಿಸಿದ್ದು , ಎಲ್ಲಿಯೂ ದೇವರ ಹೆಸರಿನ ಆಸ್ತಿಯನ್ನು ಹೆಗ್ಗಡೆಯವರು ತಮ್ಮ ಹೆಸರಿಗೆ ಬರೆಸಿಕೊಂಡಿರುವುದು ಕಂಡು ಬಂದಿಲ್ಲ.

ಬೆಳ್ತಂಗಡಿ ಭೂ ನ್ಯಾಯ ಮಂಡಳಿಯ ಆದೇಶದ ಪ್ರತಿಯನ್ನೂ ಪಡೆದು ಅವಲೋಕಿಸಲಾಗಿದ್ದು, ಹೆಗ್ಗಡೆಯವರು ತಮ್ಮ ಹೆಸರಿಗೆ ಆಸ್ತಿ ನೋಂದಾಯಿಸಿಕೊಂಡಿರುವ ಯಾವುದೇ ಉಲ್ಲೇಖ ಇಲ್ಲ. ಬದಲಾಗಿ ಹೆಗ್ಗಡೆಯವರಲ್ಲಿ ಹೆಚ್ಚುವರಿ ಜಮೀನೇ ಇಲ್ಲ . ಎಲ್ಲವೂ ಪಾರದರ್ಶಕವಾಗಿದ್ದು ಸೋಮನಾಥ ನಾಯಕ್ ಅವರು ನಿರಾಧಾರ ರಹಿತ ಆರೋಪ ಮಾಡಿದ್ದಾರೆ ಎಂದು ಆಕ್ಷೇಪಿಸಿದ್ದಾರೆ.

ಭಾರತದ ಸರ್ವೋಚ್ಛ ನ್ಯಾಯಾಲಯ ಹಾಗೂ ಮೈಸೂರು ಹೈಕೋರ್ಟ್ ಆದೇಶದಡಿಯು ಹೆಗ್ಗಡೆಯವರು ಪರಂಪರಾಗತವಾಗಿ ಸಾವಿರಾರು ಎಕರೆ ಜಮೀನು ಹೊಂದಿದವರಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಹೆಗ್ಗಡೆಯವರು ತಮ್ಮ ಸಾವಿರಾರು ಎಕರೆ ಭೂಮಿಯನ್ನು ಈಗಾಗಲೇ ಬಡವರಿಗೆ ಹಂಚಿದ್ದಾರೆ. ಈ ಮೂಲಕ ಜಾತ್ಯಾತೀತೆಯಿಂದ ಧರ್ಮೋದ್ಧಾರಕರಾಗಿದ್ದಾರೆ.

ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆಯವರ ಮೇಲೆ ಅನಗತ್ಯ ಆರೋಪ ಮಾಡುತ್ತಿರುವ ಇವರ ಉದ್ದೇಶ ಬೇರೆಯದೇ ಇದೆ. ಮತ್ತೊಮ್ಮೆ ಇಂತಹ ಸತ್ಯಕ್ಕೆ ದೂರವಾದ ಆರೋಪ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ್ ಕತ್ತಲ್ ಸಾರ್, ಕರವೇ ನಗರ ಅಧ್ಯಕ್ಷ ಶಿವಾನಂದ ಶೆಟ್ಟಿ ಹಾಗೂ ಹೋರಾಟಗಾರ ಎನ್.ವಿ. ಲಕ್ಷ್ಮೀನಾರಾಯಣ್ ಮತ್ತಿತರರು ಹಾಜರಿದ್ದರು.