ಈರುಳ್ಳಿ ಕಣ್ಣೀರು ತರಿಸುತ್ತಿರುವ ಬೆನ್ನಲ್ಲೇ ಗಗನಕ್ಕೇರಿದ ತರಕಾರಿ ಬೆಲೆ..!

Spread the love

ಬೆಂಗಳೂರು,ಡಿ.16- ಬೆಲೆ ಏರಿಕೆಯಿಂದ ಹಲವು ದಿನಗಳಿಂದ ಈರುಳ್ಳಿ ಕಣ್ಣೀರು ತರಿಸುತ್ತಿರುವ ಬೆನ್ನಲ್ಲೇ ಇದೀಗ ಎಲ್ಲಾ ತರಕಾರಿಗಳ ಬೆಲೆಯೂ ಗಗನಕ್ಕೆ ಏರಿದ್ದು ಜನಸಾಮಾನ್ಯರ ಬದುಕಿಗೆ ಬರೆ ಎಳೆದಂತಾಗಿದೆ. ಕಳೆದ ಒಂದು ತಿಂಗಳಿನಿಂದ ಈರುಳ್ಳಿ ಮಾರುಕಟ್ಟೆಯಲ್ಲಿ 100ರೂ ಗಿಂತ ಕಡಿಮೆಯಾಗಿಲ್ಲ. 10ರಿಂದ 20 ರೂಗೆ ಸಿಗುತ್ತಿದ್ದ ಉತ್ತಮ ಗುಣಮಟ್ಟದ ಈರುಳ್ಳಿಗೆ ಈಗ 100ರಿಂದ 180 ರೂ.ಗಳನ್ನು ಕೊಟ್ಟು ತರುವುದು ಅನಿವಾರ್ಯವಾಗಿದೆ.

ಬೆಲೆ ಏರಿಕೆ ನಿಯಂತ್ರಕ್ಕೆ ಬರುತ್ತಿಲ್ಲ ಎಂದು ಗೊಣಗುತ್ತಲೇ ಈರುಳ್ಳಿ ಕೊಳ್ಳುತ್ತಿದ್ದ ಗ್ರಾಹಕರ ಬದುಕಿಗೆ ಈಗ ಇನ್ನಿತರ ತರಕಾರಿಗಳ ಬೆಲೆ ಏರಿಕೆಯೂ ಕೊಳ್ಳಿ ಇಟ್ಟಿದೆ. ದಿನಬಳಕೆಯ ಆಲೂಗಡ್ಡೆ, ಕ್ಯಾರೆಟ್, ತೊಂಡೆಕಾಯಿ, ಬೆಂಡೇ ಕಾಯಿ, ಬೀನ್ಸ್, ನುಗ್ಗೇಕಾಯಿ, ಹೂಕೋಸು, ಬದನೇ ಕಾಯಿ ಬೆಲೆ ಕೂಡ ಏರಿಕೆಯಾಗಿದೆ. ನಗರದ ಮಾರುಕಟ್ಟೆಯಲ್ಲಿ ಬಟಾಣಿ ಮತ್ತು ಟೊಮೆಟೋ ಹೊರತುಪಡಿಸಿದರೆ ಬಹುತೇಕ ತರಕಾರಿಗಳ ದರದಲ್ಲಿ ದುಬಾರಿಯಾಗಿದ್ದು ನುಗ್ಗೇಕಾಯಿ ಬೆಲೆಯಂತೂ ಗಗನಕ್ಕೆ ಹೋಗಿದೆ. 10ರೂ.ಗೆ ಎರಡು ನುಗ್ಗೇಕಾಯಿ ಈಗ ಕೆ.ಜಿಯೊಂದಕ್ಕೆ 400ರೂ ಆಗಿ ದಾಖಲೆ ಬರೆದಿದೆ.

ತರಕಾರಿಗಳ ಬೆಲೆ ಎಷ್ಟು? ಬಟಾಣಿ ಮಾತ್ರ ಕೆಜಿಗೆ 40-50 ರೂ. ಟೊಮೆಟೋ ಕೆಜಿ 20 ರೂ.ಗೆ ಖರೀದಿಯಾಗುತ್ತಿವೆ. ಕೆಲ ದಿನಗಳಿಂದ ಬಹುಬೇಡಿಕೆ ಇದ್ದ ಈರುಳ್ಳಿ ಸಗಟು ಮಾರುಕಟ್ಟೆಯಲ್ಲಿ ಕೆಜಿಗೆ 60ರೂ.ನಿಂದ 100 ರೂ. ನಿಗದಿಯಾಗಿದೆ. ವಿವಿಧ ಸೊಪ್ಪುಗಳ ದರದಲ್ಲಿ ಇಳಿಕೆಯಾಗಿದ್ದರೆ, ಸಬ್ಬಕ್ಕಿ ಸೊಪ್ಪು ಪೂರೈಕೆ ಇಲ್ಲದೆ ಬೆಲೆ ಏರಿಕೆ ಕಂಡಿದೆ.

ಈವರೆಗೆ ಮದುವೆ, ಗೃಹಪ್ರವೇಶದಂತಹ ಶುಭ ಕಾರ್ಯಗಳು ಹೆಚ್ಚಾಗಿದ್ದವು. ಹೀಗಾಗಿ ತರಕಾರಿಗಳಿಗೆ ಬೇಡಿಕೆ ಹೆಚ್ಚಾಗಿ ಬೆಲೆಗಳು ದುಬಾರಿಯಾಗಿವೆ. ನಾಳೆಯಿಂದ ಧನುರ್ಮಾಸ. ಈ ಮಾಸದಲ್ಲಿ ಶುಭ ಕಾರ್ಯಗಳು ನಡೆಯುವುದು ಕಡಿಮೆ. ಹೀಗಾಗಿ ಮುಂದಿನ ದಿನಗಳಲ್ಲಿ ತರಕಾರಿಗಳ ದರ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ನುಗ್ಗೆಕಾಯಿ ಒಂದು ಕೆಜಿಗೆ 440 ರೂ. ಏರಿಕೆಯಾಗಿದೆ. ಪೂರೈಕೆ ಕೊರತೆಯಿಂದ ಕೆಲ ದಿನಗಳಿಂದ ಬೆಲೆ ಹೆಚ್ಚಾಗಿದ್ದ ನುಗ್ಗೆಕಾಯಿಗೆ ಬಹುಬೇಡಿಕೆ ಕುದುರಿದೆ. ಮಾರುಕಟ್ಟೆಯಲ್ಲಿ ಹುಡುಕಿದರೂ ನುಗ್ಗೆಕಾಯಿ ಸಿಗುತ್ತಿಲ್ಲ. ಹೀಗಾಗಿ ದರ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಕಳೆದ ತಿಂಗಳು ಹಾಪ್‍ಕಾಮ್ಸ್‍ನಲ್ಲಿ ನುಗ್ಗೆಕಾಯಿ ಕೆಜಿಗೆ 299 ರೂ. ಇದ್ದಿದ್ದು, 440 ರೂ. ಆಗಿದೆ.

ಒಂದು ನುಗ್ಗೆಕಾಯಿ 35 ರೂ. ರಿಂದ 40 ರೂಗೆ ಮಾರಾಟವಾಗುತ್ತದೆ. ತಮಿಳುನಾಡು, ಆಂಧ್ರ ಮತ್ತಿತರೆ ಪ್ರದೇಶಗಳಲ್ಲಿ ಮಳೆಗೆ ನುಗ್ಗೆ ಮರದ ಹೂಗಳು ನೆಲ ಕಚ್ಚಿದ ಪರಿಣಾಮ ನುಗ್ಗೇಕಾಯಿ ಮಾರುಕಟ್ಟೆಗೆ ಬರುವುದು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಬೆಲೆ ಹೆಚ್ಚಾಗಿದೆ ಎಂದು ವರ್ತಕರು ಹೇಳುತ್ತಾರೆ.

ಕಾರಣಗಳು ಏನೇ ಇರಲಿ ದಿನಸಿ ಪದಾರ್ಥಗಳು, ಹಣ್ಣು, ತರಕಾರಿಗಳು ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯಲ್ಲಿ ಸಿಗುವಂತಿರಬೇಕು. ಆದರೆ ಮಿತಿ ಮೀರಿದ ಬೆಲೆ ಏರಿಕೆಯಾದರೆ ಬದುಕು ಕಷ್ಟವಾಗುತ್ತದೆ. ಬೆಳೆದ ರೈತರಿಗಾದರೂ ಈ ಬೆಲೆ ಸಿಕ್ಕರೆ ಅನುಕೂಲವಾಗುತ್ತದೆ. ಆದರೆ ಮಧ್ಯವರ್ತಿಗಳ ಪಾಲಾಗುವುದೇ ಹೆಚ್ಚು.

Facebook Comments