ಪೊಲೀಸರ ಅತಿರೇಕದ ವರ್ತನೆ ಸಹಿಸಲ್ಲ : ಸಿಎಂ ಎಚ್ಚರಿಕೆ

Social Share

ಬೆಂಗಳೂರು,ಜ.30- ವಾಹನಗಳ ಟೋಯಿಂಗ್ ಮಾಡುವ ವ್ಯವಸ್ಥೆ ಕುರಿತಂತೆ ನಾಳೆ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ವಿಧಾನಸೌಧ-ವಿಕಾಸಸೌಧ ನಡುವೆ ಇರುವ ಮಹಾತ್ಮ ಗಾಂಧೀಜಿ ಪ್ರತಿಮೆ ಬಳಿ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದವರ ಸ್ಮರಣಾರ್ಥ ಮಹಾತ್ಮ ಗಾಂೀಜಿಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡಿದ ನಂತರ ಮುಖ್ಯಮಂತ್ರಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಟೋಯಿಂಗ್ ಮಾಡುವಾಗ ಅತಿರೇಕದ ವರ್ತನೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ರಕ್ಷಣೆ ಮಾಡಬೇಕಾದವರೇ ಆ ರೀತಿ ವರ್ತಿಸುವುದು ಸರಿಯಲ್ಲ. ಸಾರ್ವಜನಿಕರು ಕೂಡ ಕಾನೂನು ರೀತಿ ನಡೆದುಕೊಳ್ಳಬೇಕು ಎಂದರು. ಟೋಯಿಂಗ್‍ನಲ್ಲಿರುವ ವ್ಯವಸ್ಥೆ ಪುನರ್ ಪರಿಶೀಲನೆ ಮಾಡಲು ನಾಳೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು, ನಗರ ಪೊಲೀಸ್ ಆಯುಕ್ತರು ಹಾಗೂ ಸಂಚಾರ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಹಲವು ಬದಲಾವಣೆಗಳನ್ನು ಮಾಡುವುದರ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಜೊತೆಗೆ ಜನಸ್ನೇಹಿ ತೀರ್ಮಾನಗಳನ್ನು ಮಾಡಲಾಗುವುದು ಎಂದು ಹೇಳಿದರು.
# ಸಾರ್ವಜನಿಕ ಚರ್ಚೆ ಸಲ್ಲದು:
ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಸಾರ್ವಜನಿಕವಾಗಿ ಚರ್ಚೆ ಮಾಡಲು ಆಗುವುದಿಲ್ಲ. ಪಕ್ಷದ ವರಿಷ್ಠರು ಯಾವಾಗ ಹೇಳುತ್ತಾರೋ ಆಗ ದೆಹಲಿಗೆ ಹೋಗುವುದಾಗಿ ತಿಳಿಸಿದರು. ಸಂಪುಟ ವಿಸ್ತರಣೆ ಕುರಿತಂತೆ ವರಿಷ್ಠರು ಯಾವಾಗ ಕರೆದರೂ ಹೋಗಲೂ ಸಿದ್ದ ಎಂದರು. ನಿಗಮ ಮಂಡಳಿ ನೇಮಕಕ್ಕೆ ಸಂಬಂಧಿಸಿದಂತೆ ಪಕ್ಷದಲ್ಲಿ ಆಂತರಿಕವಾಗಿ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದರು.
ವರ್ಷ ಆರಂಭದಲ್ಲ ಎಲ್ಲ ಸಂಸದರನ್ನು ಭೇಟಿ ಮಾಡುವುದು ವಾಡಿಕೆ. ಹೀಗಾ ಆದಷ್ಟು ಬೇಗ ನವದೆಹಲಿಯಲ್ಲಿ ರಾಜ್ಯದ ಸಂಸದರ ಸಭೆಯನ್ನು ಮಾಡಲಾಗುವುದು ಎಂದು ಹೇಳಿದರು. ಇವರು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರಿಂದ ಟೀಕೆ ಹೊರತು ಬೇರೆ ಏನೂ ನಿರೀಕ್ಷಿಸಲಾಗದು. ಚುನಾವಣೆ ಪ್ರಣಾಳಿಕೆಯಲ್ಲಿ ಶೇ.90ರಷ್ಟು ಭರವಸೆ ಈಡೇರಿಸಿದ್ದೇವೆ ಎಂದು ಹೇಳಿದ್ದರು. ಆದರೂ ನಾಡಿನ ಜನ ಅವರನ್ನು ಮನೆಗೆ ಕಳುಹಿಸಲಿಲ್ಲವೇ ಎಂದು ಪ್ರಶ್ನಿಸಿದರು.
ಸರ್ಕಾರದ ಆರು ತಿಂಗಳ ಸಾಧನೆ ಬಗ್ಗೆ ಸಿದ್ದರಾಮಯ್ಯ ಅವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬಾರದು. ಜನಹಿತಕ್ಕಾಗಿ ಏನು ಕೆಲಸವಾಗಿದೆ ಎಂಬುದನ್ನು ನೋಡಬೇಕು. ಯಾವ ಕಾರ್ಯಕ್ರಮವನ್ನು ಯಾವ ರೀತಿ ಅನುಷ್ಠಾನ ಮಾಡಿ ಯಾರಿಗೆ ಅನುಕೂಲ ಮಾಡಿಕೊಡಬೇಕು ಎಂಬ ಅರಿವಿದ್ದು ಆ ದಿಕ್ಕಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ನಾವು ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸುವ ಕೆಲಸ ಮಾಡುತ್ತಿದ್ದೇವೆ. ಜನರಿಗೆ ಏನು ಬೇಕು ಎಂಬುದು ಮುಖ್ಯವಾಗಿದ್ದು, ಅದರಂತೆ ಕೆಲಸ ಮಾಡುತ್ತಿದ್ದೇವೆ. ಜನಹಿತದ ಆಡಳಿತ ನೀಡುತ್ತಿದ್ದೇವೆ ಎಂದರು.
ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಒಳಜಗಳ ಎಲ್ಲರಿಗೂ ಗೊತ್ತಿರುವ ವಿಚಾರ. ಇದೊಂದೇ ಪ್ರಸಂಗವಲ್ಲ. ಹಲವು ಸಂದರ್ಭಗಳಲ್ಲಿ ಈ ರೀತಿ ಆಗಿದೆ ಎಂದು ಸಿದ್ದರಾಮಯ್ಯ ಹಾಗೂ ಮಾಜಿ ಶಾಸಕ ಅಶೋಕ್ ಪಟ್ಟಣ್ ಅವರ ಪಿಸುಮಾತಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದರು.
ಕಾಂಗ್ರೆಸ್ ಯಾವಾಗಲೂ ಕೂಡ ಜನಹಿತವಾಗಿ ಕೆಲಸ ಮಾಡಿಲ್ಲ. ಅಧಿಕಾರವನ್ನು ಸ್ವಾರ್ಥಕ್ಕಾಗಿ ಬಳಸಿದ್ದು ಬಿಟ್ಟರೆ ಬೇರೆ ಅಭಿವೃದ್ಧಿಗೆ ಬಳಕೆ ಮಾಡಿಲ್ಲ. ಯಾರೇ ನಾಯಕರು ಬದಲಾವಣೆಯಾದರೂ ಸ್ವಾರ್ಥಕ್ಕಾಗಿ ಅವರು ರಾಜಕಾರಣ ಮಾಡುತ್ತಾರೆ. ಅವರ ಗುಣಗಳು ಎಂದಿಗೂ ಬದಲಾಗುವುದಿಲ್ಲ ಎಂದು ಟೀಕಿಸಿದರು.
ಕೋವಿಡ್ ತಾಂತ್ರಿಕ ಸಲಹಾ ಸಮಿ ಮುಂದೆ ಚಿತ್ರರಂಗದ ಮನವಿಯನ್ನು ಪ್ರಸ್ತಾಪಿಸಿ ಆನಂತರ ನಿರ್ಧಾರ ಮಾಡಲಾಗುವುದು. ಸದ್ಯಕ್ಕೆ ಸಿನಿಮಾ ಮಂದಿರಗಳಲ್ಲಿ ಶೇ.50ರಷ್ಟು ಹಾಜರಾತಿಗೆ ಅವಕಾಶವಿದೆ. ಇದನ್ನು ತೆರವುಗೊಳಿಸಿ ಶೇ.100ರಷ್ಟು ಅವಕಾಶ ಮಾಡಿಕೊಡುವಂತೆ ಚಿತ್ರರಂಗದವರು ಮನವಿ ಮಾಡಿದ್ದಾರೆ ಎಂದರು.
ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಮತ್ತು ಮಾಜಿ ಸಚಿವ ರಾಮ್‍ದಾಸ್ ಅವರ ನಡುವೆ ಅಭಿವೃದ್ಧಿ ವಿಚಾರಕ್ಕೆ ಚರ್ಚೆಯಾಗಿದೆ. ಅವರಿಬ್ಬರನ್ನು ಕರೆದು ಮಾತನಾಡುವುದಾಗಿ ಹೇಳಿದರು.  ಕೆಲಸ ಕಾರ್ಯಗಳ ಬಗ್ಗೆ ಭಿನ್ನಾಭಿಪ್ರಾಯವಿದೆ ಹೊರತು ಬೇರೆ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲ. ಅಭಿವೃದ್ಧಿ ಬಗ್ಗೆ ಪೈಪೋಟಿ ಇದ್ದಾಗ ಈ ರೀತಿಯ ಚರ್ಚೆಯಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಕಂದಾಯ ಸಚಿವ ಆರ್.ಅಶೋಕ್, ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್, ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಹೆಚ್ಚುವರಿ ಮುಖ್ಯ ಕಾರ್ಯದಶಿ ರಾಕೇಶ್ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.

Articles You Might Like

Share This Article