ಎಲ್ಲರ ಪ್ರೀತಿ ವಿಶ್ವಾಸವೇ ನನ್ನ ಆಸ್ತಿ : ಪತ್ರಿಕಾರಂಗದ ಭೀಷ್ಮ ಪಿ.ರಾಮಯ್ಯ

Social Share

ಬೆಂಗಳೂರು, ಅ.27- ನನ್ನ 45 ವರ್ಷಗಳ ಸುದೀರ್ಘ ಪತ್ರಿಕಾ ವೃತ್ತಿಯಲ್ಲಿ ಸಮಾಜದ ಎಲ್ಲ ವರ್ಗಗಳ ಪ್ರೀತಿ-ವಿಶ್ವಾಸ ಗಳಿಸಿರುವುದೇ ನನ್ನ ದೊಡ್ಡ ಆಸ್ತಿ ಎಂದು ಹಿರಿಯ ಪತ್ರಕರ್ತರಾದ ಪಿ.ರಾಮಯ್ಯ ಅವರು ಇಂದಿಲ್ಲಿ ಹೇಳಿದರು. ಗಾಂಧಿಭವನದಲ್ಲಿಂದು ನಾನು ಹಿಂದೂ ರಾಮಯ್ಯ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಶಾಸಕಾಂಗ, ಕಾರ್ಯಾಂಗ ಮತ್ತು ಪತ್ರಿಕಾ ವಲಯದಲ್ಲಿ ಮರೆಯಲಾರದಂತಹ ಕ್ಷಣಗಳನ್ನು ನಾನು ಸಾಕಷ್ಟು ನೋಡಿದ್ದೇನೆ. ವಿಧಾನಸೌಧದ 4ನೆ ದರ್ಜೆ ನೌಕರನಿಂದ ಹಿಡಿದು ಮುಖ್ಯ ಕಾರ್ಯದರ್ಶಿವರೆಗೂ ಎಲ್ಲರ ಪ್ರೀತಿ-ವಿಶ್ವಾಸ ಗಳಿಸಿದ್ದೇನೆ. ಅದು ನಾನೆಂದೂ ಮರೆಯಲಾರದಂತಹ ಮತ್ತು ಸಂಪಾದಿಸಿದ ದೊಡ್ಡ ಆಸ್ತಿ ಎಂದು ಅವರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.

ಪತ್ರಿಕಾ ಕ್ಷೇತ್ರದಲ್ಲಿ ಹಲವರ ಜತೆ ಕೆಲಸ ಮಾಡಿದ್ದೇನೆ. ಅದರಂತೆಯೇ ಶಾಸಕಾಂಗದಲ್ಲೂ ಅಧಿಕಾರಿಗಳು, ಜನಪ್ರತಿನಿಧಿಗಳ ಜತೆ ಕೆಲಸ ಮಾಡುವ ಸದಾವಕಾಶ ಸಿಕ್ಕಿತ್ತು. ಅದು ನನ್ನ ಸೌಭಾಗ್ಯವೆಂದು ಭಾವಿಸುತ್ತೇನೆ ಎಂದು ಹೇಳಿದರು.

ನಾನು ಕನ್ನಡದಲ್ಲಿ ಓದಿದ್ದರೂ ಕೂಡ ಆಂಗ್ಲ ಪತ್ರಿಕೋದ್ಯಮದಲ್ಲಿ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲು ಇವರೆಲ್ಲರ ಸಹಕಾರವನ್ನು ಮರೆಯಲು ಸಾಧ್ಯವೇ ಇಲ್ಲ. ಪತ್ರಕರ್ತನಾಗಿ ನಾನು ಕೃಷಿ, ವಿಜ್ಞಾನ, ನ್ಯಾಯಾಂಗ, ತನಿಖಾ ವರದಿಗಳನ್ನು ಹೆಚ್ಚಾಗಿ ಮಾಡುತ್ತಿದ್ದೆ. ನನ್ನ ಪತ್ರಿಕೆಯ ಮುಖ್ಯಸ್ಥರಿಗೆ ಇಂತಹ ಅಸೈನ್‍ಮೆಂಟ್‍ಗಳನ್ನೇ ಹಾಕಿ ಎಂದು ಕೇಳಿಕೊಳ್ಳುತ್ತಿದ್ದೆ. ಇದು ನನಗೆ ಸಾಕಷ್ಟು ಕಲಿಸಿತು ಎಂದರು.

ಅಭಿವೃದ್ಧಿ ಪತ್ರಿಕೋದ್ಯಮ ಹಾಗೂ ತನಿಖಾ ಪತ್ರಿಕೋದ್ಯಮ ಎರಡನ್ನೂ ಸೇರಿಸಿ ಈ ಪುಸ್ತಕವನ್ನು ನಾನು ಬರೆದಿದ್ದೇನೆ. ಇದರಲ್ಲಿ ಕೆಲವು ಲೋಪದೋಷಗಳಿರಬಹುದು. ಅವುಗಳನ್ನು ಮನ್ನಿಸಬೇಕು. ಅನುಭವಗಳ ಬುತ್ತಿಯ ಈ ಕೃತಿಯನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇನೆ ಎಂದು ಅವರು ಹೇಳಿದರು.

ನನ್ನೆಲ್ಲ ಸ್ನೇಹಿತರನ್ನು ಇಲ್ಲಿ ನೋಡುತ್ತಿದ್ದೇನೆ. ಇದು ನಾನು ಜೀವವಿರುವವರೆಗೂ ಮರೆಯಲಾರದಂತಹ ಕ್ಷಣ ಎಂದರು. ವಿದೇಶದಲ್ಲಿ ಪತ್ರಿಕೆ ಓದುವವರ ಸಂಖ್ಯೆ ಹೆಚ್ಚಾಗಿದೆ. ನಮ್ಮಲ್ಲಿ ಎಂಟು-ಹತ್ತು ಲಕ್ಷ ಪ್ರಸರಣ ಸಂಖ್ಯೆ ಇದೆ ಎಂದು ಹೇಳಿಕೊಳ್ಳುತ್ತಾರೆ. ಆದರೆ, ನಮ್ಮಲ್ಲಿ ಒಂದು ಪತ್ರಿಕೆಯಲ್ಲಿ ಐದರಿಂದ ಆರು ಜನ ಓದುತ್ತಾರೆ.

ಇದು ಬದಲಾಗಬೇಕು. ಪತ್ರಿಕೆಗಳನ್ನು ಹೆಚ್ಚಾಗಿ ಓದುವಂತಹ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಶಿಫಾರಸು ಅನುಷ್ಠಾನಕ್ಕೆ ಮನವಿ: ಜಿಲ್ಲಾ ಹಾಗೂ ಸಣ್ಣ ಪತ್ರಿಕೆಗಳ ಬೆಳವಣಿಗೆಗೆ ಪೂರಕವಾಗಿ ನೀಡಿರುವ ವರದಿಯನ್ನು ಸರ್ಕಾರ ಈ ಕೂಡಲೇ ಜಾರಿ ಮಾಡಬೇಕು ಎಂದು ಹಿರಿಯ ಪತ್ರಕರ್ತ ಪಿ.ರಾಮಯ್ಯ ಸಿಎಂ ಬಳಿ ಇಂದು ಮನವಿ ಮಾಡಿದರು.

ರಾಜ್ಯದಲ್ಲಿರುವ ಸಣ್ಣ ಹಾಗೂ ಜಿಲ್ಲಾ ಪತ್ರಿಕೆಗಳು ತಾವಾಗಿಯೇ ಬೆಳೆಯಬೇಕು ಎಂಬುದಿದ್ದರೂ ಇದಕ್ಕೆ ಸರ್ಕಾರಗಳು ಕೂಡ ಪೂರಕವಾಗಿ ಸ್ಪಂದಿಸಬೇಕಿದೆ. ಈಗಾಗಲೇ ನೀಡಲಾಗಿರುವ ವರದಿಯನ್ನು ಸರ್ಕಾರ ಜಾರಿಗೊಳಿಸಬೇಕು ಎಂದು ತಿಳಿಸಿದರು.

Articles You Might Like

Share This Article