ಪಶು ವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಗೆ ಸಚಿವ ಸಂಪುಟ ಅನುಮೋದನೆ

Social Share

ಬೆಂಗಳೂರು: ಪಶು ಸಂಗೋಪನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಲ್ಲಿ ನೇಮಕಾತಿ ಪ್ರಕ್ರಿಯೆ‌ ವಿಳಂಭವಾದ್ದರಿಂದ ಕಳೆದ ಹಲವು ವರ್ಷಗಳಿಂದ ಹುದ್ದೆಗಳು ಖಾಲಿ ಇದ್ದು ಸಮರ್ಪಕವಾಗಿ ರೋಗ ನಿಯಂತ್ರಣ, ಪಶು ಆರೋಗ್ಯ ಸೇವೆ, ಕೃತಕ ಗರ್ಭಧಾರಣೆ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ತೊಂದರೆಯಾಗುತ್ತಿತ್ತು.
ಗೋಹತ್ಯೆ ನಿಷೇಧ, ಜಿಲ್ಲೆಗೊಂದು ಗೋಶಾಲೆ ಸ್ಥಾಪನೆ ಮತ್ತು ನಿರ್ವಹಣೆ, ಪ್ರಾಣಿ ಕಲ್ಯಾಣ ಸಹಾಯವಾಣಿ, ಪಶು ಸಂಜೀವಿನಿ ಅಂಬ್ಯುಲೆನ್ಸ್ ಮತ್ತು ಪಾಲಿ ಕ್ಲಿನಿಕ್ ಸೇವೆಗಳಿಗೆ ಹಿನ್ನಡೆಯಾಗುತ್ತಿತ್ತು. ಪ್ರತೀ ಬಾರಿ ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ಇಲಾಖಾ ಅಧಿಕಾರಿಗಳು ಸಿಬ್ಬಂದಿ ಕೊರತೆ ನೀಗಿಸಲು ಮನವಿ ಮಾಡಿಕೊಳ್ಳುತ್ತಿದ್ದರು. ನೇಮಕಾತಿ ಮಾಡಿಕೊಳ್ಳುವುದರಿಂದ ಪಶು ಪಾಲಕ ರೈತರಿಗೆ ಉತ್ತಮ ಸೇವೆ ನೀಡಲು ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ಹಲವು ಬಾರಿ ನನ್ನ ಗಮನಕ್ಕೆ ತಂದಿದ್ದರು.
ನಾನು ಪಶು ಸಂಗೋಪನಾ ಸಚಿವನಾದ ನಂತರದಲ್ಲಿ ಹಲವು ಬಾರಿ ನಿಕಟಪೂರ್ವ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ಮತ್ತು ಇಂದಿನ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರನ್ನು ಪದೇ ಪದೇ ಭೇಟಿಯಾಗಿ ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಇಲಾಖೆಯಲ್ಲಿ ಕಳೆದ ಹಲವು ವರ್ಷಗಳಿಂದ ಖಾಲಿ‌ಇರುವ ಹುದ್ದೆಗಳನ್ನು ನೇಮಕಾತಿ ಮೂಲಕ ಭರ್ತಿ ಮಾಡಲು ಅನುಮೋದನೆ ನೀಡುವಂತೆ ವಿನಂತಿಸಿದ ಪರಿಣಾಮವಾಗಿ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಗೋರಕ್ಷಕ ಮತ್ತು ಗೋ ಪ್ರೇಮಿ ಮುಖ್ಯಮಂತ್ರಿಗಳು ತಕ್ಷಣ ಸ್ಪಂದಿಸಿ ಗೋಪಾಲಕರಿಗೆ ವೈದ್ಯಕೀಯ ಹುದ್ದೆಗಳನ್ನು ಮಂಜೂರು ಮಾಡುವುದರ ಮೂಲಕ ಪಶುಪಾಲಕ ರೈತರ ಬೇಡಿಕೆಗಳಿಗೆ ಸ್ಪಂದಿಸಿದ್ದಾರೆ.
ಒಟ್ಟು ಖಾಲಿ ಇರುವ 900ಕ್ಕೂ ಹೆಚ್ಚು ಹುದ್ದೆಗಳ ಪೈಕಿ 400 ಹುದ್ದೆಗಳ ಭರ್ತಿಗೆ ಅನುಮೋದನೆ ದೊರೆತಿದ್ದು, ಆರ್ಥಿಕ ಇಲಾಖೆಯ ಮೂಲಕ ಪ್ರಸ್ತಾವನೆಗೆ ಸಹಮತಿ ಪಡೆಯಲಾಗಿತ್ತು. ಈಗ ಅದಕ್ಕೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದ್ದು ತಕ್ಷಣ ಅಧಿಸೂಚನೆ ಹೊರಡಿಸಲು ಕ್ರಮ ವಹಿಸಲಾಗುವುದು.
ಈ ಸಂದರ್ಭದಲ್ಲಿ ನಿಕಟಪೂರ್ವ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ, ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ, ಸಂಪುಟ ಸಹೋದ್ಯೋಗಿ ಸಚಿವರುಗಳಿಗೆ ಮತ್ತು ಇಲಾಖಾ ಹಿರಿಯ ಅಧಿಕಾರಿಗಳಿಗೆ ಪಶುಸಂಗೋಪನಾ ಸಚಿವರಾದ ಪ್ರಭು ಚವ್ಹಾಣ್ ಅವರು ಅಭಿನಂದನೆಗಳನ್ನು ಸಲ್ಲಿಸಿದರು.

Articles You Might Like

Share This Article