ನವದೆಹಲಿ, ಜ.7- ದೇಶದಲ್ಲಿ ಮತಾಂತರದ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ. ಹಣ, ಉದ್ಯೋಗ, ಮದುವೆಯ ಆಮಿಷವೊಡ್ಡಿ ಅಮಾಯಕ ಹಿಂದೂಗಳನ್ನು ಮತಾಂತರ ಮಾಡಲಾಗುತ್ತಿದೆ. ಕ್ರಿಶ್ಚಿಯನ್ ಮಿಷನರಿಗಳು ಬಹಳ ಹಿಂದಿನಿಂದಲೂ ಈ ಕೆಲಸ ಮಾಡುತ್ತಿದ್ದು, ಇದರ ವಿರುದ್ಧ ನಾವು ಹೋರಾಟ ಮಾಡುತ್ತಿದ್ದೇವೆ. ಮತಾಂತರದ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಜರುಗಿಸಬೇಕೆಂದು ವಿಎಚ್‍ಪಿ ಪುನರುಚ್ಚಾರ ಮಾಡಿದೆ.
ಪಂಜಾಬ್‍ನ ಕೆಲವು ಜಿಲ್ಲೆಗಳಾದ ಅಮೃತ್‍ಸರ, ಗುರುದಾಸನಪುರ, ಫಿರೋಜ್‍ಪುರದಲ್ಲಿ ಕಳೆದೆರಡು ವರ್ಷಗಳಲ್ಲಿ ಮತಾಂತರದ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿ ಕಂಡುಬಂದ ಹಿನ್ನೆಲೆಯಲ್ಲಿ ವಿಎಚ್‍ಪಿ ಈ ಆಗ್ರಹಪಡಿಸಿದೆ. ವಿಶ್ವ ಹಿಂದೂ ಪರಿಷತ್ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾಲ್ ಈ ಕುರಿತು ಹೇಳಿಕೆ ನೀಡಿದ್ದು, ಪಂಜಾಬ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಬಲವಂತವಾಗಿ ಅಥವಾ ಆಮಿಷವೊಡ್ಡಿ ಮತಾಂತರ ಮಾಡುವುದನ್ನು ತಡೆಯಲು ನಮ್ಮ ಸಂಘಟನೆ ಹಾಗೂ ಸ್ಥಳೀಯ ಘಟಕಗಳು ಸಕ್ರಿಯವಾಗಿವೆ ಎಂದು ಹೇಳಿದ್ದಾರೆ.
ವಿವಿಧ ಆಮಿಷಗಳನ್ನು ಒಡ್ಡಿ ಹಿಂದೂಗಳನ್ನು ಮತಾಂತರ ಮಾಡಲಾಗುತ್ತಿದೆ. ವಿಶೇಷವಾಗಿ ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಹೆಚ್ಚಾಗುತ್ತಿದೆ ಎಂದು ಆರೋಪಿಸಿದ್ದಾರೆ. ಕೇವಲ ಮಿಷನರಿಗಳು ಮಾತ್ರ ಸಾಮಾಜಿಕ ಸೇವೆಗಳನ್ನು ಮಾಡುತ್ತಿಲ್ಲ. ಆರ್‍ಎಸ್‍ಎಸ್ ಮತ್ತು ವಿಎಚ್‍ಪಿ ಸಂಘಟನೆಗಳು ಕೂಡ ಹಲವು ವರ್ಷಗಳಿಂದ ಜನರ ಸೇವೆ ಮಾಡುತ್ತಿವೆ. ಸರ್ಕಾರದ ಸೌಲಭ್ಯ ತಲುಪಲು ಸಾಧ್ಯವಾಗದ ಬುಡಕಟ್ಟು ಪ್ರದೇಶಗಳಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಹಲವಾರು ಜನಪರ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ಹೇಳಿದರು.
ಮಿಷನರಿಗಳು ಮತಾಂತರದ ಉದ್ದೇಶದಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಆದರೆ, ನಮ್ಮ ಉದ್ದೇಶ ಕೇವಲ ಜನಸೇವೆ. ಮತಾಂತರ ರಾಷ್ಟ್ರದ ವಿರುದ್ಧದ ಪಿತೂರಿ ಎಂದು ಅವರು ಹೇಳಿದ್ದಾರೆ. ವಿಎಚ್‍ಪಿ ಮತ್ತು ಆರ್‍ಎಸ್‍ಎಸ್‍ನಂತಹ ಸಂಘಟನೆಗಳು ಹಿಂದೂಗಳ ಸಾಮೂಹಿಕ ಮತಾಂತರ ತಡೆಯಲು ಪ್ರತಿತಂತ್ರ ರೂಪಿಸುತ್ತಿವೆ. ಜಾಗೃತಿ ಅಭಿಯಾನಗಳ ಮೂಲಕ ತಮ್ಮ ಮೂಲ ಧರ್ಮದಲ್ಲಿ ಉಳಿಯಲು ಹಾಗೂ ಬಲವಂತವಾಗಿ ಮತಾಂತರಗೊಂಡವರನ್ನು ಹಿಂದೂ ಧರ್ಮಕ್ಕೆ ಮರಳಲು ಮನವಿ ಮಾಡುತ್ತಿದ್ದಾರೆ.
ಜತೆಗೆ ದೇಶಾದ್ಯಂತ ಹರಡಿರುವ ಮತಾಂತರ ದಂಧೆ ವಿರುದ್ಧ ಜಾಗೃತಿ ಮೂಡಿಸಲು 10 ದಿನಗಳ ಸುದೀರ್ಘ ಅಭಿಯಾನ ನಡೆಸಿವೆ ಎಂದು ಅವರು ಹೇಳಿದ್ದಾರೆ. ಮತಾಂತರಗೊಂಡವರನ್ನು ಘರ್ ವಾಪಸ್‍ಗಾಗಿ ಮನವರಿಕೆ ಮಾಡುತ್ತೇವೆ. ಜತೆಗೆ ಅವರಿಗೆ ಅಗತ್ಯವಿದ್ದಲ್ಲಿ ಸಹಾಯ ಮಾಡುತ್ತೇವೆ. ಪಂಜಾಬ್‍ನ ಶ್ರೀಮಂತ ಸಂಸ್ಕøತಿ ಉಳಿಸಲು ಜತೆಗೆ ಇಂತಹ ಮಿಷನರಿ ಬಲೆಗೆ ಬೀಳದಂತೆ ನಾನು ಪಂಜಾಬ್ ಜನರಿಗೆ ಮನವಿ ಮಾಡುತ್ತೇನೆ ಎಂದು ಬನ್ಸಾಲ್ ತಿಳಿಸಿದ್ದಾರೆ.
ಮಿಷನರಿಗಳಿಗೆ ದೊಡ್ಡ ಪ್ರಮಾಣದ ಹಣದ ಅಗತ್ಯವಿದೆ. ಅದಕ್ಕಾಗಿ ಎಫ್‍ಸಿಆರ್‍ಎ (ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ)ಯನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ ಎಂದು ಆರೋಪಿಸಿದ್ದಾರೆ.
