BIG NEWS: ವಿಜಯೇಂದ್ರಗೆ ಕೈತಪ್ಪಿದ ಪರಿಷತ್‍ ಟಿಕೆಟ್, ಹೊಸ ಮುಖಗಳಿಗೆ ಹೈ ಕಮಾಂಡ್ ಮಣೆ

Spread the love

ಬೆಂಗಳೂರು,ಮೇ 24- ಅಚ್ಚರಿಯ ಬೆಳವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರಗೆ ವಿಧಾನಪರಿಷತ್ ಟಿಕೆಟ್ ಕೈತಪ್ಪಿದ್ದು, ಕೊನೆ ಕ್ಷಣದಲ್ಲಿ ಪಕ್ಷ ನಿಷ್ಠರಿಗೆ ಮಣೆ ಹಾಕಲಾಗಿದೆ.ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ, ಹಿಂದುಳಿದ ವರ್ಗದ ಕೇಶವ್ ಪ್ರಸಾದ್, ಪರಿಶಿಷ್ಟ ಜಾತಿಯ ಛಲವಾದಿ ನಾರಾಯಣಸ್ವಾಮಿ ಹಾಗೂ ಮಹಿಳಾ ಕೋಟಾದಲ್ಲಿ ಬಿಜೆಪಿ ಕಾರ್ಯದರ್ಶಿ ಹೇಮಾಲತ ನಾಯಕ್ ಅವರನ್ನು ವಿಧಾನಪರಿಷತ್‍ಗೆ ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸಲಾಗಿದೆ.

ಸಾಕಷ್ಟು ಅಳೆದು ತೂಗಿ ಸಾಮಾಜಿಕ ನ್ಯಾಯ ಪರಿಕಲ್ಪನೆಯಲ್ಲಿ ಲಿಂಗಾಯಿತ(ಸವದಿ) ಪರಿಶಿಷ್ಟ ವರ್ಗ (ಹೇಮಲತಾ ನಾಯಕ್), ಹಿಂದುಳಿದ ವರ್ಗ(ಕೇಶವಪ್ರಸಾದ್) ಹಾಗೂ ಪರಿಶಿಷ್ಟ ಜಾತಿ(ಛಲವಾದಿ ನಾರಾಯಣಸ್ವಾಮಿ)ಗೆ ಅದೃಷ್ಟ ಒಲಿದಿದೆ.

ರಾಜ್ಯ ಕೋರ್ ಕಮಿಟಿ ಕಳುಹಿಸಿದ್ದ ಯಾವುದೇ ಹೆಸರಿಗೆ ಕೇಂದ್ರ ವರಿಷ್ಠರು ಸೊಪ್ಪು ಹಾಕಿಲ್ಲ. ಬದಲಿಗೆ ಪಕ್ಷ ನಿಷ್ಠೆ ಹಾಗೂ ಸಾಮಾಜಿಕ ನ್ಯಾಯ, ಪ್ರದೇಶವಾರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದು ವಿಶೇಷವಾಗಿದೆ.ಮಾಜಿ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರಗೆ ಟಿಕೆಟ್ ನೀಡಬೇಕೆಂಬ ಬೇಡಿಕೆಯನ್ನು ವರಿಷ್ಠರು ಸಾರಸಗಾಟಾಗಿ ತಿರಸ್ಕರಿಸಿದ್ದಾರೆ.

ಕುಟುಂಬ ರಾಜಕಾರಣದ ಅಪವಾದವನ್ನು ಮೈಮೇಲೆ ಎಳೆದುಕೊಳ್ಳಲು ಹಿಂದೇಟು ಹಾಕಲಾಗಿದ್ದು, ವಂಶ ಪಾರಂಪರ್ಯ ಬಿಜೆಪಿಯಲ್ಲಿ ನಡೆಯುವುದಿಲ್ಲ ಎಂಬ ಸಂದೇಶವನ್ನು ರವಾನಿಸಲಾಗಿದೆ.ಅಭ್ಯರ್ಥಿಗಳ ಆಯ್ಕೆಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮೇಲ್ಗೈ ಸಾಸಿದ್ದು, ಮೊದಲ ಬಾರಿಗೆ ಮಾಜಿ ಸಿಎಂ ಯಡಿಯೂರಪ್ಪನವರಿಗೆ ಭಾರೀ ಹಿನ್ನಡೆಯಾಗಿದೆ.

ಏಕೆಂದರೆ ಯಡಿಯೂರಪ್ಪ ಶಿಫಾರಸ್ಸು ಮಾಡಿದ ಯಾವುದೇ ಅಭ್ಯರ್ಥಿಗಳನ್ನು ಬಿಜೆಪಿ ವರಿಷ್ಠರು ಪರಿಗಣಿಸಿಲ್ಲ. ತಮ್ಮ ಪುತ್ರನಿಗೆ ಟಿಕೆಟ್ ಕೈ ತಪ್ಪಿದರೂ ಕಡೆಪಕ್ಷ ತಮ್ಮ ಆಪ್ತರಾಗಿದ್ದ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಸಿ.ಮಂಜುಳಾ ಅವರಿಗೆ ಟಿಕೆಟ್ ನೀಡಬೇಕೆಂದು ಮನವಿ ಮಾಡಿದ್ದರು.

ಆದರೂ ವರಿಷ್ಠರು ಇದನ್ನು ಕೂಡ ತಿರಸ್ಕರಿಸಿದ್ದು, ಬದಲಿಗೆ ಮಹಿಳಾ ಕೋಟಾದಡಿ ಬಿಜೆಪಿ ಕಾರ್ಯದರ್ಶಿಯಾಗಿದ್ದ ಕೊಪ್ಪಳ ಮೂಲದ ಎಸ್ಟಿ ಸಮುದಾಯದ ಹೇಮಾಲತ ನಾಯ್ಕ್‍ಗೆ ಮಣೆ ಹಾಕಿದ್ದಾರೆ.ಬೆಳಗ್ಗೆ ಮಂಜುಳಾ ಅವರಿಗೆ ನಾಮಪತ್ರ ಸಲ್ಲಿಸಲು ಕಚೇರಿಗೆ ಆಗಮಿಸುವಂತೆ ದೂರವಾಣಿ ಕರೆ ಬಂದಿತ್ತು.ಹೀಗಾಗಿ ಅವರು ನಗುಮೊಗದಿಂದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಗೆ ಆಗಮಿಸಿದ್ದರು.

ಕೊನೆ ಕ್ಷಣದಲ್ಲಿ ದೆಹಲಿಯಲ್ಲಿ ನಡೆದ ದಿಢೀರ್ ಬೆಳವಣಿಗೆಯಿಂದಾಗಿ ಮಂಜುಳಾ, ಲಿಂಗರಾಜ್ ಪಾಟೀಲ್‍ಗೆ ಟಿಕೆಟ್ ಕೈ ತಪ್ಪಿ ಲಕ್ಷ್ಮಣ್ ಸವದಿ ಮತ್ತು ಹೇಮಾಲತ ನಾಯ್ಕ್‍ಗೆ ಅದೃಷ್ಟ ಖುಲಾಯಿಸಿತು. ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿಯ ಭದ್ರಕೋಟೆಯಾಗಿರುವ ಲಿಂಗಾಯಿತ ಸಮುದಾಯವನ್ನು ಓಲೈಸಿಕೊಳ್ಳುವ ಕಾರಣಕ್ಕಾಗಿಯೇ ವರಿಷ್ಠರು ಲಕ್ಷ್ಮಣ್ ಸವದಿಗೆ ಮಣೆ ಹಾಕಿದ್ದಾರೆ.ಬಿಜೆಪಿ ಕಾರ್ಯಾಲಯದ ಕಾರ್ಯದರ್ಶಿಯಾಗಿದ್ದ ಹಿಂದುಳಿದ ವರ್ಗದ ಕೇಶವಪ್ರಸಾದ್ ಕೂಡ ಮೊದಲ ಬಾರಿಗೆ ವಿಧಾನಪರಿಷತ್‍ಗೆ ಪ್ರವೇಶಿಸುವುದು ಖಚಿತವಾಗಿದೆ.

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಆಪ್ತಬಣದಲ್ಲಿ ಕೇಶವಪ್ರಸಾದ್ ಗುರುತಿಸಿಕೊಂಡಿದ್ದರು. ಕಳೆದ ಹಲವು ವರ್ಷಗಳಿಂದ ಪಕ್ಷದ ಕಾರ್ಯಾಲಯದ ಕಾರ್ಯದರ್ಶಿಯಾಗಿದ್ದರು. ಒಬಿಸಿ ಕೋಟಾದಲ್ಲಿ ಕೇಶವಪ್ರಸಾದ್‍ಗೆ ವರಿಷ್ಠರು ಮಣೆ ಹಾಕಿದ್ದಾರೆ.ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಟಿಕೆಟ್ ಸಿಗದೆ ಬಿಜೆಪಿಗೆ ವಲಸೆ ಬಂದಿದ್ದ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವರನ್ನು ದಲಿತ ಕೋಟಾದಡಿ ಕಣಕ್ಕಿಳಿಸಲಾಗಿದೆ.

ವಿಧಾನಪರಿಷತ್ ಚುನಾವಣೆಯಲ್ಲಿ ದಲಿತರಿಗೆ ಅವಕಾಶ ಕೊಡಬೇಕೆಂಬ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಬಿಜೆಪಿಯನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಿದ್ದ ಕಾರಣಕ್ಕಾಗಿಯೇ ಛಲವಾದಿ ನಾರಾಯಣಸ್ವಾಮಿಗೆ ಟಿಕೆಟ್ ನೀಡಲಾಗಿದೆ ಎಂಬ ಮಾತು ಪಕ್ಷದ ವಲಯದಲ್ಲಿ ಕೇಳಿಬರುತ್ತಿದೆ.ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಅಭ್ಯರ್ಥಿಗಳ ಆಯ್ಕೆಯಲ್ಲಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಮೇಲುಗೈ ಸಾಸಿರುವುದು ಸ್ಪಷ್ಟ ವಾಗಿ ಗೋಚರಿಸಿದೆ.

ಲಕ್ಷ್ಮಣ್ ಸವದಿ, ಕೇಶವ್‍ಪ್ರಸಾದ್ ಅವರುಗಳು ಬಿ.ಎಲ್. ಸಂತೋಷ್ ಅವರ ಆಪ್ತರಾಗಿದ್ದಾರೆ. ಮಂಜುಳಾ ಅವರು ಯಡಿಯೂರಪ್ಪ ಆಪ್ತ ಬಣದಲ್ಲಿ ಗುರುತಿಸಿಕೊಂಡ ಕಾರಣಕ್ಕಾಗಿಯೇ ಅಚ್ಚರಿ ಎಂಬಂತೆ ಹೇಮಾಲತ ನಾಯಕ್‍ಗೆ ಮೊದಲ ಬಾರಿಗೆ ಅದೃಷ್ಟ ಖುಲಾಯಿಸಿದೆ.
ಲಕ್ಷ್ಮಣ್ ಸವದಿ ಮರು ಆಯ್ಕೆಯಾದರೆ ಉಳಿದಂತೆ ಮೂವರು ಮೊದಲ ಬಾರಿಗೆ ಮೇಲ್ಮನೆ ಪ್ರವೇಶಿಸಲಿದ್ದಾರೆ.

Facebook Comments