ಇಂದು ಸಂಜೆಯೊಳಗೆ ಬಿಜೆಪಿ ಪರಿಷತ್‍ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ..?

ಬೆಂಗಳೂರು,ಮೇ23- ವಿಧಾನಸಭೆಯಿಂದ ವಿಧಾನಪರಿಷತ್‍ಗೆ ನಡೆಯಲಿರುವ ಚುನಾವಣೆಗೆ ಆಡಳಿತಾರೂಢ ಬಿಜೆಪಿ ಇಂದು ಸಂಜೆಯೊಳಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದೆ. ವಿಧಾನಸಭೆಯಲ್ಲಿ ಬಿಜೆಪಿ ಹೊಂದಿರುವ ಶಾಸಕರ ಸಂಖ್ಯೆಯ ಬಲದಲ್ಲಿ ನಾಲ್ವರನ್ನು ಆಯ್ಕೆ ಮಾಡಬಹುದು. ಇದೀಗ ಈ ಸ್ಥಾನಕ್ಕೆ ಎಂಟು ಹೆಸರುಗಳು ಅಂತಿಮಗೊಂಡಿದ್ದು, ಅದೃಷ್ಟ ಯಾರಿಗೆ ಒಲಿಯಲಿದೆ ಎಂಬುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

2023ರ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟು ಕೊಂಡಿರುವ ವರಿಷ್ಠರು ಜಾತಿ, ವರ್ಚಸ್ಸು, ಪ್ರದೇಶವಾರು, ಪಕ್ಷಕ್ಕೆ ಸಲ್ಲಿಸಿರುವ ಸೇವೆ ಇತ್ಯಾದಿ ಅಂಶಗಳನ್ನು ಪರಿಗಣಿಸಿ ಸಾಮಾಜಿಕ ನ್ಯಾಯ ಪರಿಕಲ್ಪನೆಯ ಮೇಲೆ ಟಿಕೆಟ್ ಘೋಷಣೆ ಮಾಡಲಿದ್ದಾರೆ. ದಾವೋಸ್‍ಗೆ ತೆರಳುವ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವ ಸಂಬಂಧ ದೆಹಲಿಗೆ ತೆರಳಿದ್ದರು.

ಕೊನೆ ಕ್ಷಣದಲ್ಲಿ ಅಮಿತ್ ಶಾ ಭೇಟಿ ಸಾಧ್ಯವಾಗದಿದ್ದರೂ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರ ಜೊತೆ ಔಪಚಾರಿಕವಾಗಿ ಮಾತುಕತೆ ನಡೆಸಿದ್ದರು. ನಾಮಪತ್ರ ಸಲ್ಲಿಸಲು ನಾಳೆ ಕಡೆಯ ದಿನವಾಗಿದ್ದು, ಬಹುತೇಕ ಸಂಜೆಯೊಳಗೆ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ಪಟ್ಟಿಯನ್ನು ಬಿಡುಗಡೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

ಸಿಗಲಿದೆಯೇ ವಿಜೇಂದ್ರಗೆ ಟಿಕೆಟ್?:
ಈ ಬಾರಿಯ ವಿಧಾನಪರಿಷತ್ ಚುನಾವಣೆಯಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಚರ್ಚೆಗೆ ಗ್ರಾಸವಾಗಿರುವುದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಪ್ರಶ್ನಾತೀತ ನಾಯಕ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಹೆಸರು. ಅಚ್ಚರಿ ಎಂಬಂತೆ ವಿಧಾನಪರಿಷತ್‍ಗೆ ರಾಜ್ಯ ಕೋರ್ ಕಮಿಟಿ ಸಭೆಯು ವರಿಷ್ಠರಿಗೆ ಕಳುಹಿಸಿಕೊಟ್ಟ ಹೆಸರಿನಲ್ಲಿ ವಿಜಯೇಂದ್ರ ಹೆಸರು ಸೇರ್ಪಡೆಯಾಗಿದ್ದು, ಈಗ ಎಲ್ಲರ ಚಿತ್ತ ಅವರತ್ತ ನೆಟ್ಟಿದೆ.

ವಂಶಪಾರಂಪರ್ಯ ರಾಜಕಾರಣವನ್ನು ಪ್ರಬಲವಾಗಿ ವಿರೋಧಿಸುತ್ತಾ ಬಂದಿರುವ ಬಿಜೆಪಿ ವರಿಷ್ಠರು ಯಡಿಯೂರಪ್ಪ ಪುತ್ರಗೆ ಮಣೆ ಹಾಕುತ್ತಾರೋ ಇಲ್ಲವೇ ಅಪವಾದದಿಂದ ದೂರವಾಗುತ್ತಾರೋ ಎಂಬುದೇ ಪ್ರಮುಖ ಪ್ರಶ್ನೆ. ಒಂದು ವೇಳೆ ವಿಜಯೇಂದ್ರಗೆ ಕೊನೆ ಕ್ಷಣದಲ್ಲಿ ಮಣಿದು ಟಿಕೆಟ್ ಘೋಷಿಸಿದರೆ ವಂಶಪಾರಂಪರ್ಯದ ಮಾತನಾಡುವ ನೈತಿಕತೆಯನ್ನು ಬಿಜೆಪಿ ಕಳೆದುಕೊಳ್ಳುತ್ತದೆ.

ಹಾಗೊಂದು ವೇಳೆ ವಿಜಯೇಂದ್ರಗೆ ಟಿಕೆಟ್ ಕೈ ತಪ್ಪಿದರೆ ಅದು ಪಕ್ಷದ ಮೇಲೂ ಪರಿಣಾಮ ಬೀರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಮೊದಲೇ ಅಧಿಕಾರದಿಂದ ಕೆಳಗಿಳಿಸಿರುವ ಕಾರಣದಿಂದ ಕೊತ ಕೊತ ಕುದಿಯುತ್ತಿರುವ ಯಡಿಯೂರಪ್ಪ ಪುತ್ರನಿಗೆ ಟಿಕೆಟ್ ತಪ್ಪಿದರೆ ಪಕ್ಷದ ಸಕ್ರಿಯ ಚಟುವಟಿಕೆಗಳಿಂದ ದೂರ ಉಳಿಯುವುದು ಖಚಿತ ಎನ್ನಲಾಗುತ್ತಿದೆ.

ವಿಜಯೇಂದ್ರಗೆ ಟಿಕೆಟ್ ನೀಡುವುದರ ಬಗ್ಗೆಯೂ ಬಿಜೆಪಿಯಲ್ಲಿ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ಒಂದು ವರ್ಗ ಅವರ ಸ್ಪರ್ಧೆಯಿಂದ ಬಿಜೆಪಿಗೆ ಅನುಕೂಲವಾಗಲಿದೆ ಎಂದರೆ ಮತ್ತೊಂದು ಬಣ ಟಿಕೆಟ್ ತಪ್ಪಿಸಲು ದೆಹಲಿಯಲ್ಲಿ ತಮ್ಮದೇ ಆದ ಲಾಬಿ ನಡೆಸುತ್ತಿದೆ. ಉಳಿದಂತೆ ಬಿಜೆಪಿಯು ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಗೀತಾ ವಿವೇಕಾನಂದ ರೆಡ್ಡಿ, ಕೇಂದ್ರದ ಮಾಜಿ ಸಚಿವ ದಿವಂಗತ ಅನಂತಕುಮಾರ್ ಪತ್ನಿ ತೇಜಸ್ವಿನಿ ಅನಂತಕುಮಾರ್,

ಹಿಂದುಳಿದ ವರ್ಗದ ಸಿದ್ದರಾಜು, ಪಕ್ಷದ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ, ಮಾಜಿ ಸದಸ್ಯ ಭಾನುಪ್ರಕಾಶ್ ಸೇರಿದಂತೆ ಹಲವರ ಹೆಸರುಗಳನ್ನು ಶಿಫಾರಸ್ಸು ಮಾಡಿದೆ. ಈ ಹಿಂದೆ ರಾಜ್ಯಸಭೆ ಮತ್ತು ಪರಿಷತ್ ಚುನಾವಣೆಯಲ್ಲಿ ರಾಜ್ಯ ಕೋರ್ ಕಮಿಟಿ ಶಿಫಾರಸ್ಸು ಮಾಡಿದ ಪಟ್ಟಿಯನ್ನು ವರಿಷ್ಠರು ತಿರಸ್ಕರಿಸಿ ಕಾರ್ಯಕರ್ತರಿಗೆ ಮಣೆ ಹಾಕಿದ್ದರು.

ಇದೀಗ ಇತಿಹಾಸ ಮತ್ತೆ ಪುನಾವರ್ತನೆಯಾಗಲಿದೆಯೇ ಇಲ್ಲವೇ ಕೋರ್ ಕಮಿಟಿ ಶಿಫಾರಸ್ಸಿಗೆ ಅಂತಿಮ ಮುದ್ರೆ ಬೀಳಲಿದೆಯೇ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.