ಮೇಲ್ಮನೆ ಚುನಾವಣೆಗೆ ನಾಳೆ ಅಭ್ಯರ್ಥಿಗಳ ಪಟ್ಟಿ ಪ್ರಕಟ ಸಾಧ್ಯತೆ

Spread the love

ಬೆಂಗಳೂರು, ಮೇ 22- ರಾಜ್ಯ ವಿಧಾನಸಭೆಯಿಂದ ವಿಧಾನಪರಿಷತ್‍ನ ಏಳು ಸ್ಥಾನಗಳಿಗೆ ನಡೆಯುತ್ತಿರುವ ದ್ವೈವಾರ್ಷಿಕ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇದೇ 24 ಕಡೆಯ ದಿನವಾಗಿದ್ದರೂ, ಇನ್ನೂ ಯಾವುದೇ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಪ್ರಕಟಿಸಿಲ್ಲ.

ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಇನ್ನು ತಮ್ಮ ಅಭ್ಯರ್ಥಿಗಳನ್ನು ಅಂತಿಮಗೊಳಿಸಿಲ್ಲ. ನಾಮಪತ್ರ ಸಲ್ಲಿಕೆಗೆ ಮಂಗಳವಾರ ಕಡೆ ದಿನವಾಗಿರುವುದರಿಂದ ನಾಳೆ ಸಂಜೆ ವೇಳೆಗೆ ಮೂರು ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಕೊನೆ ಗಳಿಗೆಯಲ್ಲಿ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸುವ ಸಾಧ್ಯತೆ ಇದೆ.

ಮೇ 17ರಿಂದಲೇ ನಾಮಪತ್ರ ಸಲ್ಲಿಕೆಗೆ ಅವಕಾಶವಿದ್ದರೂ ಈತನಕ ಯಾವೊಬ್ಬ ಅಭ್ಯರ್ಥಿಯೂ ನಾಮಪತ್ರ ಸಲ್ಲಿಸಿಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಹೈಕಮಾಂಡ್ ಮೇಲ್ಮನೆ ಚುನಾವಣೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿ ಪ್ರಕಟಿಸಬೇಕಾಗಿದೆ. ಜೆಡಿಎಸ್‍ನಲ್ಲಿ ಅಭ್ಯರ್ಥಿಗಳ ಆಯ್ಕೆ ಅಧಿಕಾರವನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ನೀಡಲಾಗಿದೆ. ನಾಳೆ ಮೇಲ್ಮನೆ ಅಭ್ಯರ್ಥಿ ಆಯ್ಕೆ ಅಂತಿಮಗೊಳಿಸಿ ಪ್ರಕಟಿಸುವ ಸಾಧ್ಯತೆ ಇದೆ.

ಜೆಡಿಎಸ್‍ನಿಂದ ಕಣಕ್ಕಿಳಿಯಲು ವಿಧಾನಪರಿಷತ್ ಮಾಜಿ ಸದಸ್ಯ ಟಿ.ಎ.ಶರವಣ ಹಾಗೂ ವೀರೇಂದ್ರ ಅವರು ಪ್ರಬಲ ಸ್ರ್ಪಧಿಗಳಾಗಿದ್ದಾರೆ.
ಈ ಬಾರಿ ಮಧ್ಯ ಕರ್ನಾಟಕ ಭಾಗಕ್ಕೆ ಅವಕಾಶ ಮಾಡಿಕೊಡಬೇಕು ಎಂಬ ಲೆಕ್ಕಾಚಾರ ಮಾಡಲಾಗಿದೆ. ಇದಕ್ಕೆ ಒತ್ತು ನೀಡಿದರೆ ವೀರೇಂದ್ರ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಸ್ರ್ಪಧಿಸುವ ಸಾಧ್ಯತೆ ಹೆಚ್ಚಾಗಿವೆ.

ಬಿಜೆಪಿ ಕೋರ್‍ಕಮಿಟಿ ಸಭೆಯಲ್ಲಿ ಸ್ಪರ್ಧಾಕಾಂಕ್ಷಿಗಳ ಪಟ್ಟಿಯನ್ನು ಹೈಕಮಾಂಡ್ ಅಂಗಳಕ್ಕೆ ರವಾನಿಸಲಾಗಿದ್ದು, ನಾಳೆ ಅಭ್ಯರ್ಥಿಗಳ ಪಟ್ಟಿಯನ್ನು
ಪ್ರಕಟಿಸುವ ಸಾಧ್ಯತೆ ಇದೆ. ಹಾಗೆಯೇ ಕಾಂಗ್ರೆಸ್ ನಾಳೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಸ್ರ್ಪಧಿಸಲಿದೆ.

ವಿಧಾನಸಭೆಯಲ್ಲಿ ಹೊಂದಿರುವ ಶಾಸಕರ ಸಂಖ್ಯೆಯ ಆಧಾರದ ಮೇಲೆ ಬಿಜೆಪಿ ನಾಲ್ಕು, ಕಾಂಗ್ರೆಸ್ ಎರಡು ಹಾಗೂ ಜೆಡಿಎಸ್ ಒಂದು ಸ್ಥಾನವನ್ನು ಸುಲಭವಾಗಿ ಗೆಲ್ಲಬಹುದಾಗಿದೆ. ರಾಷ್ಟ್ರೀಯ ಪಕ್ಷಗಳು ಹೆಚ್ಚುವರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಮತದಾನ ನಡೆಯುವುದು ಅನಿವಾರ್ಯವಾಗಲಿದೆ. ಇಲ್ಲದಿದ್ದರೆ ಅವಿರೋಧ ಆಯ್ಕೆಯಾಗುವ ಸಾಧ್ಯತೆಗಳಿವೆ.

ವಿಧಾನಪರಿಷತ್ ಸದಸ್ಯರಾದ ಲಕ್ಷ್ಮಣಸವದಿ, ಆರ್.ಬಿ.ತಿಮ್ಮಾಪುರ, ಅಲ್ಲಂ ವೀರಭದ್ರಪ್ಪ, ಎಚ್.ಎಂ.ರಮೆಶ್‍ಗೌಡ, ವೀಣಾ ಅಚ್ಚಯ್ಯ, ಕೆ.ವಿ.ನಾರಾಯಣಸ್ವಾಮಿ, ಲೇಹರ್‍ಸಿಂಗ್ ಅವರು ಜೂ.14ರಂದು ನಿವೃತ್ತಿಯಾಗುವ 7 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

Facebook Comments