ಬೆಂಗಳೂರು, ಜ.4- ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಉಪಸಭಾಪತಿ ಎಂ.ಕೆ.ಪ್ರಾಣೇಶ್, ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್ ಸೇರಿದಂತೆ ವಿಧಾನ ಪರಿಷತ್‍ನ 23 ಸದಸ್ಯರು ನಾಳೆ ನಿವೃತ್ತಿ ಹೊಂದಲಿದ್ದಾರೆ. ಹೀಗಾಗಿ ಮೇಲ್ಮನೆ ಸಭಾನಾಯಕ, ಉಪಸಭಾಪತಿ ಹಾಗೂ ಪ್ರತಿಪಕ್ಷದ ನಾಯಕರು ನಿವೃತ್ತಿ ಹೊಂದಲಿದ್ದಾರೆ. ಈ ಸ್ಥಾನಗಳು ಕೂಡ ನಿವೃತ್ತಿ ನಂತರ ತೆರವಾಗಲಿವೆ.
ನಿವೃತ್ತಿಯಿಂದ ತೆರವಾಗುವ 25 ಸ್ಥಾನಗಳಿಗೆ ಭಾರತೀಯ ಚುನಾವಣಾ ಆಯೋಗ ಈಗಾಗಲೇ ಚುನಾವಣೆ ನಡೆಸಿ ಆಯ್ಕೆಯಾದ ಅಭ್ಯರ್ಥಿಗಳ ಫಲಿತಾಂಶವನ್ನು ಕೂಡ ಪ್ರಕಟಿಸಿದೆ. ಚುನಾಯಿತರಾಗಿರುವ ನೂತನ 25 ಸದಸ್ಯರು ಜ.6ರ ನಂತರ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಮೇಲ್ಮನೆ ಸದಸ್ಯರಾದ ವಿಜಯ್‍ಸಿಂಗ್, ಬಿ.ಜಿ.ಪಾಟೀಲ್, ಎಸ್.ಆರ್.ಪಾಟೀಲ್, ಕವಟಗಿ ಮಠ ಮಹಾಂತೇಶ ಮಲ್ಲಿಕಾರ್ಜುನ, ವಿವೇಕರಾವ್ ವಸಂತರಾವ್ ಪಾಟೀಲ್, ಘೋಟ್ನೇಕರ್ ಶ್ರೀಕಾಂತ್ ಲಕ್ಷ್ಮಣ, ಪ್ರದೀಪ್ ಶೆಟ್ಟರ್, ಬಸವರಾಜ ಪಾಟೀಲ್ ಇಟಗಿ, ಕೆ.ಸಿ.ಕೊಂಡಯ್ಯ, ಜಿ.ರಘು ಆಚಾರ್ ಅವರು ನಾಳೆ ಸದಸ್ಯ ಸ್ಥಾನದಿಂದ ನಿವೃತ್ತಿ ಹೊಂದಲಿದ್ದಾರೆ.
ಹಾಗೆಯೇ ಆರ್.ಪ್ರಸನ್ನಕುಮಾರ್, ಕೆ.ಪ್ರತಾಪ್‍ಚಂದ್ರಶೆಟ್ಟಿ, ಕೋಟಾ ಶ್ರೀನಿವಾಸ ಪೂಜಾರಿ, ಎಂ.ಕೆ.ಪ್ರಾಣೇಶ್, ಎನ್.ಎ.ಗೋಪಾಲಸ್ವಾಮಿ, ಕಾಂತರಾಜ್, ಎನ್.ಅಪ್ಪಾಜಿಗೌಡ, ಎಂ.ನಾರಾಯಣಸ್ವಾಮಿ, ಎಸ್.ರವಿ, ಎಂ.ಪಿ.ಸುನಿಲ್ ಸುಬ್ರಹ್ಮಣಿ, ಆರ್.ಧರ್ಮಸೇನ, ಸಂದೇಶ್ ನಾಗರಾಜ್, ಸುನಿಲ್‍ಗೌಡ ಬಸನಗೌಡ ಪಾಟೀಲ್ ಅವರು ನಿವೃತ್ತಿಯಾಗಲಿದ್ದಾರೆ.
ಇವರಲ್ಲಿ ಬಹಳಷ್ಟು ಮಂದಿ ಚುನಾವಣೆಗೆ ಸ್ಪರ್ಧೆ ಮಾಡಿರಲಿಲ್ಲ. ಸ್ಪರ್ಧೆ ಮಾಡಿದವರಲ್ಲಿ ಕೆಲವರು ಸೋತಿದ್ದು, ಐದು ಮಂದಿ ಪುನರಾಯ್ಕೆಯಾಗಿದ್ದಾರೆ. ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಉಪಸಭಾಪತಿ ಎಂ.ಕೆ.ಪ್ರಾಣೇಶ್, ಪ್ರದೀಪ್ ಶೆಟ್ಟರ್, ಎಸ್.ರವಿ ಹಾಗೂ ಸುನಿಲ್‍ಗೌಡ ಮರು ಆಯ್ಕೆಯಾಗಿದ್ದಾರೆ. ಹೀಗಾಗಿ ಅವರ ಸದಸ್ಯ ಸ್ಥಾನ ಮತ್ತೆ ಮುಂದುವರಿಯಲಿದೆ.
ಜ.6ರ ನಂತರ ವಿಧಾನ ಪರಿಷತ್‍ನಲ್ಲಿ ಪಕ್ಷಗಳ ಬಲಾಬಲದಲ್ಲೂ ವ್ಯತ್ಯಾಸವಾಗಲಿದೆ.
