ವಿಧಾನಪರಿಷತ್ ವಿಪಕ್ಷ ನಾಯಕ ಸ್ಥಾನಕ್ಕೆ ಕಾಂಗ್ರೆಸ್‍ನಲ್ಲಿ ಲಾಬಿ..

Social Share

ಬೆಂಗಳೂರು, ಜ.4- ತೆರವಾಗುತ್ತಿರುವ ವಿಧಾನಪರಿಷತ್‍ನ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಕಾಂಗ್ರೆಸ್‍ನಲ್ಲಿ ಭಾರೀ ಲಾಬಿ ನಡೆದಿದ್ದು, ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಮುಂಚೂಣಿಯಲ್ಲಿದ್ದಾರೆ. ಕಾಂಗ್ರೆಸ್‍ನಲ್ಲಿ ಲಿಂಗಾಯಿತ ಸಮುದಾಯದ ಎಸ್.ಆರ್.ಪಾಟೀಲ್ ವಿರೋಧ ಪಕ್ಷದ ನಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಅವರ ಅವಧಿ ನಾಳೆಗೆ ಮುಕ್ತಾಯಗೊಳ್ಳುತ್ತಿದೆ. ಇತ್ತೀಚೆಗೆ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಅವರು ಸ್ರ್ಪಧಿಸಲು ಅವಕಾಶ ಸಿಕ್ಕಲ್ಲ. ಹೀಗಾಗಿ ಅವರ ಸದಸ್ಯತ್ವದ ಅವಯೂ ಕೂಡ ನಾಳೆಗೆ ಕೊನೆಗೊಳ್ಳುತ್ತಿದೆ. ತೆರೆವಾಗುತ್ತಿರುವ ನಾಯಕನ ಸ್ಥಾನಕ್ಕೆ ಹಲವಾರು ಮಂದಿ ಪ್ರಮುಖ ನಾಯಕರು ಲಾಬಿ ನಡೆಸುತ್ತಿದ್ದಾರೆ.
ಹಿಂದುಳಿದ ವರ್ಗಗಳ ನಾಯಕ ಬಿ.ಕೆ.ಹರಿಪ್ರಸಾದ್, ಲಿಂಗಾಯಿತ ಸಮುದಾಯದ ಅಲ್ಲಂ ವೀರಭದ್ರಪ್ಪ, ಅಲ್ಪಸಂಖ್ಯಾತ ಸಮುದಾಯದ ಸಿ.ಎಂ.ಇಬ್ರಾಹಿಂ, ನಜೀರ್ ಅಹಮ್ಮದ್ ಅವರ ಹೆಸರುಗಳೂ ಕೇಳಿ ಬರುತ್ತಿವೆ. ಬಿ.ಕೆ.ಹರಿಪ್ರಸಾದ್ ಅವರು ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿದ್ದು, 18 ವರ್ಷಗಳ ಕಾಲ ಎಐಸಿಸಿ ಪ್ರಧಾನಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ.
ಅವರ ಪಕ್ಷ ನಿಷ್ಟೆ ಮತ್ತು ಸೈದ್ಧಾಂತಿಕ ನಿಲುವುಗಳ ಬಗ್ಗೆ ಕಾಂಗ್ರೆಸ್‍ನಲ್ಲಿ ದೃಢವಾದ ನಂಬಿಕೆಗಳಿವೆ. ನಿಷ್ಟಾವಂತ ಕಾಂಗ್ರೆಸಿರಾಗಿರುವ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡಬೇಕೆಂದು ಬಹಳಷ್ಟು ಮಂದಿ ವಿಧಾನಪರಿಷತ್ ಸದಸ್ಯರು ಒತ್ತಡ ಹಾಕಿದ್ದಾರೆ.
ಬಿಜೆಪಿಯ ವಿರುದ್ಧದ ವಾಗ್ದಾಳಿಯಲ್ಲಿ ಹರಿಪ್ರಸಾದ್ ಮುಂಚೂಣಿಯಲ್ಲಿದ್ದು, ಸಾಕಷ್ಟು ಅನುಭವ ಮತ್ತು ತಿಳುವಳಿಕೆಯನ್ನೂ ಹೊಂದಿದ್ದಾರೆ.
ಪ್ರಸ್ತುತ ದಿನಗಳಲ್ಲಿ ಬಿಜೆಪಿಯಲ್ಲಿ ವಿವಾದಾತ್ಮಕ ಕಾನೂನುಗಳನ್ನು ರೂಪಿಸುತ್ತಿದ್ದು, ಅವುಗಳನ್ನು ಹಿಮ್ಮೆಟಿಸಬೇಕಾದರೆ ರಾಜಿಯಾಗದ ದೃಢ ನಾಯಕತ್ವ ಅಗತ್ಯವಿದೆ. ಬಿ.ಕೆ.ಹರಿಪ್ರಸಾದ್ ಹೊರತುಪಡಿಸಿದರೆ ಬೇರೆ ಯಾರೂ ಸೂಕ್ತವಲ್ಲ ಎಂದು ಸದಸ್ಯರ ಅಂಬೋಣವಾಗಿದೆ.
ಇನ್ನು ಲಿಂಗಾಯಿತ ಸಮುದಾಯದವರಿಂದ ತೆರವಾಗುತ್ತಿರುವ ಹುದ್ದೆಗೆ ಅದೇ ಸಮುದಾಯದವರನ್ನು ನೇಮಿಸಬೇಕು ಎಂಬ ವಾದವೂ ಕೇಳಿಬರುತ್ತಿದೆ. ಹೀಗಾಗಿ ಕೆಪಿಸಿಸಿಯ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ ಅವರ ಹೆಸರೂ ಕೇಳಿ ಬರುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್‍ಗೆ ಅಲ್ಪಸಂಖ್ಯಾತರು ವೋಟ್‍ಬ್ಯಾಂಕ್ ಆಗಿದ್ದು, ಅವರಿಗೆ ಸೂಕ್ತ ಸ್ಥಾನಮಾನಗಳು ಸಿಕ್ಕಿಲ್ಲ ಎಂಬ ಆಕ್ಷೇಪಗಳಿವೆ. ಈ ಹಿನ್ನೆಲೆಯಲ್ಲಿ ನಜೀರ್ ಅಹಮ್ಮದ್ ಲಾಬಿಗಿಳಿದಿದ್ದಾರೆ.
ಸಿ.ಎಂ.ಇಬ್ರಾಹಿಂ ಕೂಡ ಹುದ್ದೆಯ ಆಕಾಂಕ್ಷಿಯಾಗಿದ್ದು, ಸಿದ್ದರಾಮಯ್ಯ ಅವರ ಬೆನ್ನು ಬಿದ್ದಿದ್ದಾರೆ. ಇತ್ತೀಚೆಗೆ ಜೆಡಿಎಸ್‍ನತ್ತ ಮುಖ ಮಾಡಿದ್ದ ಇಬ್ರಾಹಿಂ ಅವರು ಹಲವಾರು ಬಾರಿ ಆ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದರು. ಕಾಂಗ್ರೆಸ್ ವಿರುದ್ಧವೂ ವಾಗ್ದಾಳಿ ಮಾಡಿದ್ದರು.
ಎಸ್.ಆರ್.ಪಾಟೀಲ್ ಅವರಿಂದ ಹುದ್ದೆ ತೆರೆವಾಗುತ್ತಿದೆ ಎಂಬ ಸುಳಿವು ದೊರೆಯುತ್ತಿದ್ದಂತೆ ಏಕಾಏಕಾ ಯೂ ಟರ್ನ್ ಪಡೆದರು. ಬೆಳಗಾವಿ ಅವೇಶನದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.
ವಿಧಾನಪರಿಷತ್ ಚುನಾವಣಾ ಪ್ರಚಾರದಿಂದಲೂ ದೂರ ಉಳಿದಿದ್ದ ಅವರ ಬದಲಾವಣೆ ಬಗ್ಗೆ ಕಾಂಗ್ರೆಸ್‍ನಲ್ಲಿ ಕುಹುಕದ ಮಾತುಗಳು ಕೇಳಿ ಬರುತ್ತಿದೆ.ಸಿದ್ದರಾಮಯ್ಯ ಅವರ ಬಣ ಕೂಡ ಬಿ.ಕೆ.ಹರಿಪ್ರಸಾದ್ ಅವರ ಆಯ್ಕೆಗೆ ಒಲವು ತೋರಿದೆ ಎಂದು ಹೇಳಲಾಗುತ್ತಿದೆ. ಆದರೆ, ಅಂತಿಮವಾಗಿ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನದ ಬಗ್ಗೆ ಎಲ್ಲರೂ ಕುತೂಹಲಿಗಳಾಗಿದ್ದಾರೆ.

Articles You Might Like

Share This Article