ಆತ್ಮಹತ್ಯೆ ಯತ್ನ ಪ್ರಕರಣದ ನಂತರ ಶಕ್ತಿಕೇಂದ್ರಗಳಿಗೆ ಹೆಚ್ಚಿನ ಭದ್ರತೆ

Spread the love

ಬೆಂಗಳೂರು, ಜೂ.25- ವಿಧಾನಸೌಧದಲ್ಲಿ ನಿನ್ನೆ ನಡೆದ ಆತ್ಮಹತ್ಯೆ ಯತ್ನ ಪ್ರಕರಣದ ಹಿನ್ನೆಲೆಯಲ್ಲಿ ಶಕ್ತಿಕೇಂದ್ರಗಳಾದ ವಿಧಾನಸೌಧ  ಮತ್ತು ವಿಕಾಸಸೌಧಗಳ ಭದ್ರತೆ ಹೆಚ್ಚಿಸಲಾಗಿದೆ. ಎಲ್ಲ ಪ್ರವೇಶ ದ್ವಾರಗಳಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗುತ್ತಿದ್ದು, ತಪಾಸಣೆಗೆ ಒಳಪಡಿಸಿ ಗುರುತಿನ ಪತ್ರ ಪರಿಶೀಲಿಸಿ ಒಳಗೆ ಬಿಡಲಾಗುತ್ತದೆ.

ನಿನ್ನೆ ವಿಧಾನಸೌಧದ 3ನೆ ಮಹಡಿಯ 332ನೆ ಕೊಠಡಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯ ಹನೂರು ಗ್ರಾಮ ಪಂಚಾಯಿತಿ ಗ್ರಂಥಾಲಯದ ಮೇಲ್ವಿಚಾರಕ ಆರ್.ರೇವಣ್ಣಕುಮಾರ್ (48) ಕತ್ತು ಹಾಗೂ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ತೀವ್ರವಾಗಿ ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈತ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಗ್ರಂಥಾಲಯ ಸಿಬ್ಬಂದಿಗೆ ಕನಿಷ್ಠ ವೇತನ ನೀಡುವಂತೆ ಮನವಿ ಸಲ್ಲಿಸಲು ವಿಧಾನಸೌಧಕ್ಕೆ ತೆರಳಿದ್ದ.
ಈ ಪ್ರಕರಣ ನಡೆದ ನಂತರ ವಿಧಾನಸೌಧ ಮತ್ತು ವಿಕಾಸಸೌಧ ಪ್ರವೇಶಕ್ಕೆ ಭದ್ರತೆ ಹೆಚ್ಚಿಸಲಾಗಿದೆ.

ವಿಧನಸೌಧದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ರೇವಣ್ಣಕುಮಾರ್ ಚೇತರಿಕೆ : ವಿಧನಸೌಧದ ಶೌಚಾಲಯದೊಳಗೆ ನಿನ್ನೆ ಕೈ, ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ರೇವಣ್ಣಕುಮಾರ್ ಚೇತರಿಸಿಕೊಳ್ಳುತ್ತಿದ್ದಾರೆ. ಇವರು ಬ್ಲೇಡ್‍ನಿಂದ ಕೈ ಮತ್ತು ಕುತ್ತಿಗೆ ಕೊಯ್ದುಕೊಂಡು ಬ್ಲೇಡ್‍ನ್ನು ಶೌಚಾಲಯದೊಳಗೆ ಎಸೆದಿರುವುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದ್ದು, ಶೌಚಾಲಯವೂ ಸಹ ರಕ್ತಸಿಕ್ತವಾಗಿತ್ತು.

ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲ್ಲೂಕಿನಲ್ಲಿ ಲೈಬ್ರೇರಿಯನ್ನಾಗಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ರೇವಣ್ಣಕುಮಾರ್, ನಿನ್ನೆ ವಿಧಾನಸೌಧದ ಮೂರನೇ ಮಹಡಿಯ ಕೊಠಡಿ ಸಂಖ್ಯೆ 322ರ ಶೌಚಾಲಯಕ್ಕೆ ಬಂದು ಆತ್ಮಹತ್ಯೆಗೆ ಯತ್ನಿಸಿದ್ದರು.

ಶೌಚಾಲಯದಲ್ಲಿ ರಕ್ತದಲ್ಲಿ ಮಡುವಿನಲ್ಲಿದ್ದ ಬಿದ್ದಿದ್ದ ಅವರನ್ನು ಕಂಡ ಕೆಲವರು ಕೂಡಲೇ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಪಡೆಯುತ್ತಿರುವ ರೇವಣ್ಣ ಈಗ ಚೇತರಿಸಿಕೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗ್ರಂಥಾಲಯ ಮೇಲ್ವಿಚಾರಕರ ಕ್ಷೇಮಾಭಿವೃದ್ದಿ ಸಂಘದ ಲೆಟರ್‍ಹೆಡ್‍ನಲ್ಲಿ ನೋಟ್ ಬರೆದಿರುವ ರೇವಣ್ಣಕುಮಾರ್, ಹುದ್ದೆ ಖಾಯಂಗೊಳಿಸಿ, ವೇತನ ಹೆಚ್ಚಳ ಮಾಡಬೇಕೆಂದು ಒತ್ತಾಯಿಸಿದ್ದು, ಇದು ಆರು ಸಾವಿರ ಕುಟುಂಬಗಳ ಬದುಕಿನ ಪ್ರಶ್ನೆ ಎಂದು ತಿಳಿಸಿದ್ದರು.

Facebook Comments