ಬೆಂಗಳೂರು, ಫೆ.15- ವಿಧಾನ ಪರಿಷತ್ನಲ್ಲಿ ಚುಕ್ಕಿ ಗುರುತಿನ ಪ್ರಶ್ನೆಗಳಿಗೆ ಉತ್ತರ ನೀಡುವ ಸಂಬಂಧ ಪ್ರತಿಪಕ್ಷದ ಸದಸ್ಯರು ಮತ್ತು ಪಶುಸಂಗೋಪನಾ ಸಚಿವರೊಂದಿಗೆ ಮಾತಿನ ಚಕಮಕಿ ನಡೆಯಿತು.
ಪ್ರಶ್ನೋತ್ತರ ಅವಯಲ್ಲಿ ಕಾಂಗ್ರೆಸ್ನ ಹರೀಶ್ ಕುಮಾರ್ ಅವರು ಗೋವಾ ರಾಜ್ಯಕ್ಕೆ ಪ್ರತಿದಿನ ಎಷ್ಟು ಎಮ್ಮೆ ಮಾಂಸ ರಫ್ತು ಮಾಡಲಾಗುತ್ತಿದೆ ಎಂದು ಪ್ರಶ್ನೆ ಕೇಳಿದರು. ಕೆ. ತಿಪ್ಪೇಸ್ವಾಮಿ ಅವರು ಕಳೆದ ಮೂರು ವರ್ಷಗಳಲ್ಲಿ ಜಾನುವಾರುಗಳಿಗೆ ಹರಡಿರುವ ಕೊರೋನಾ ಸೋಂಕು ಮತ್ತು ಚರ್ಮ ಗಂಟು ರೋಗದ ಬಗ್ಗೆ ಮಾಹಿತಿ ನೀಡುವಂತೆ ಕೇಳಿದರು.
ಆದರೆ ಎರಡೂ ಪ್ರಶ್ನೆಗಳಿಗೆ ಉತ್ತರ ನೀಡಲು ಪಶು ಸಂಗೋಪನಾ ಸಚಿವ ಪ್ರಭು ಚವ್ಹೌಣ್ ಅವರು 15 ದಿನಗಳ ಕಾಲಾವಕಾಶ ಕೇಳಿದರು. ಇದರಿಂದ ಸಿಟ್ಟಾದ ಸದಸ್ಯರು ಅಧಿಕಾರಿಗಳಿಗೆ ಬೆರಳ ತುದಿಯಲ್ಲೇ ಮಾಹಿತಿ ಇರುತ್ತದೆ. ಆದರೂ ಉತ್ತರ ಕೊಡಲು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಈ ವೇಳೆ ಸಭಾಪತಿ ಮಧ್ಯೆ ಪ್ರವೇಶಿಸಿ ಕಲಾಪ ನಡೆಯುವುದೇ ಹದಿನೈದೇ ದಿನ, ಉತ್ತರ ನೀಡಲು ಅಷ್ಟು ಕಾಲಾವಕಾಶ ಏಕೆ? ಸದಸ್ಯರು ಫೆ. 4ರಂದೇ ಪ್ರಶ್ನೆ ಕಳುಹಿಸಿದ್ದಾರೆ. ಮಾಹಿತಿ ನೀಡಲು ಏನು ಸಮಸ್ಯೆ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಸಚಿವರು, ಕಂದಾಯ ಇಲಾಖೆಯಿಂದಲೂ ಮಾಹಿತಿ ಪಡೆಯಬೇಕಿದೆ. ಅದಕ್ಕಾಗಿ ಕಾಲಾವಕಾಶ ಕೇಳಿದ್ದೇನೆ ಎಂದು ಹೇಳಿ, ಜೊತೆಯಲ್ಲೇ ಸದಸ್ಯರತ್ತ ಬೆರಳು ತೋರಿಸಿ ಮಾತನಾಡಲಾರಂಭಿಸಿದರು.
ಇದರಿಂದ ಸಿಟ್ಟಾದ ಪ್ರತಿಪಕ್ಷದ ಸದಸ್ಯರು, ಸಚಿವರು ತಾಕತ್ತು, ದಮ್ಮುಗಳನ್ನು ಉತ್ತರ ನೀಡುವಲ್ಲಿ ತೋರಿಸಬೇಕು ಎಂದು ಸವಾಲೆಸೆದರು.
ಈ ವೇಳೆ ಸದಸ್ಯರು ಮತ್ತು ಸಚಿವರ ನಡುವೆ ಮಾತಿನ ಚಕಮಕಿ ನಡೆಯಿತು. ಇತರೆ ಸಚಿವರಾದ ಸೋಮಣ್ಣ, ಸಿಸಿ ಪಾಟೀಲ್ ಅವರು ಪ್ರಭು ಚೌವ್ಹಾಣ್ ಅವರನ್ನು ಸಮಾಧಾನ ಪಡಿಸಲು ಯತ್ನಿಸಿದರು.
ಪರಸ್ಪರ ವಾಗ್ವಾದ ಹೆಚ್ಚಾದಾಗ ಮಧ್ಯ ಪ್ರವೇಶಿಸಿದ ಸಭಾಪತಿ ಅವರು ಇದು ಕೊನೆ ಅವೇಶನ, ಮುಂದೆ ಚುನಾವಣೆ ಎದುರಾಗಲಿದೆ. ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರ ಕೊಡಬೇಕು ಎಂದು ಸೂಚಿಸಿದರಲ್ಲದೆ, ಸಚಿವರು ತಾಳ್ಮೆಯಿಂದ ವರ್ತಿಸುವಂತೆ ಸಲಹೆ ನೀಡಿದರು.
ಸಚಿವ ಸೋಮಣ್ಣ ಅವರ ಭಾಷೆ ಬಳಕೆಯಲ್ಲಿ ಏರುಪೇರಾಗಿರಬಹುದು. ಇದರ ಹಿಂದೆ ದುರುದ್ದೇಶವಿಲ್ಲ. 2-3 ದಿನಗಳಲ್ಲಿ ಮಾಹಿತಿ ಸಂಗ್ರಹಿಸಿ ಉತ್ತರ ಒದಗಿಸುವುದಾಗಿ ಭರವಸೆ ನೀಡಿದರು. ಮುಂದಿನ ವಾರವಾದರೂ ಉತ್ತರ ಕೊಡಿಸಿ ಎಂದು ಸಭಾಪತಿ ಸೂಚನೆ ನೀಡಿದರು.
#Vidhanaparishat, #session, #highlights,