ವಿಧಾನಸಭೆಯಲ್ಲಿ ಜೆಡಿಎಸ್ – ಕಾಂಗ್ರೆಸ್ ಶಾಸಕರ ಜಟಾಪಟಿ

Social Share

ಬೆಂಗಳೂರು,ಮಾ.9-ಜೆಡಿಎಸ್‍ನ್ನು ರಾಷ್ಟ್ರೀಯ ಪಕ್ಷದ ಬಿ ಟೀಮ್ ಎಂದು ಟೀಕಿಸಿದ ವಿಚಾರ ವಿಧಾನಸಭೆಯಲ್ಲಿಂದು ಪ್ರಸ್ತಾಪವಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರ ನಡುವೆ ಏರಿದ ಧ್ವನಿಯಲ್ಲಿ ವಾಗ್ವಾದ ನಡೆದ ಘಟನೆ ನಡೆಯಿತು. 2022-23ನೇ ಸಾಲಿನ ಆಯವ್ಯಯ ಅಂದಾಜು ಮೇಲಿನ ಚರ್ಚೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಮಾತನಾಡುತ್ತಿದ್ದಾಗ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರ ನಡುವೆ ಪದೇ ಪದೇ ಮಾತಿನ ಚಕಮಕಿ ಹಾಗೂ ವಾಗ್ವಾದ ನಡೆಯಿತು. ಆಡಳಿತಾರೂಢ ಬಿಜೆಪಿ ಶಾಸಕರು ಜೆಡಿಎಸ್ ಪರವಾಗಿ ನಿಂತರು.
ಕುಮಾರಸ್ವಾಮಿ ಮಾತನಾಡುತ್ತಾ, ನಮ್ಮನ್ನು ರಾಷ್ಟ್ರೀಯ ಪಕ್ಷದ ಬಿ ಟೀಮ್ ಎಂಬ ಆರೋಪವನ್ನು ನಿತ್ಯ ಎದುರಿಸಬೇಕಾಗಿದೆ. ವಿರೋಧ ಪಕ್ಷದ ನಾಯಕರು ಆರ್ಥಿಕ ಶಿಸ್ತು ದಾರಿ ತಪ್ಪಿರುವ ಬಗ್ಗೆ ಹಾಗೂ ಸಾಲದ ಪ್ರಮಾಣ ಹೆಚ್ಚಾಗಿರುವ ಬಗ್ಗೆ ಎರಡು ದಿನಗಳ ಕಾಲ ಮಾತನಾಡಿದ್ದಾರೆ ಎಂದು ಹೇಳುತ್ತಾ, 2014-15ರಿಂದ ಇಲ್ಲಿಯವರೆಗೆ ಸಾಲದ ಪ್ರಮಾಣದ ಏರಿಕೆಯಾಗುತ್ತಿರುವುದನ್ನು ಪ್ರಸ್ತಾಪಿಸಿದರು.
ವಿರೋಧ ಪಕ್ಷದ ನಾಯಕರು ಆರ್‍ಎಸ್‍ಎಸ್ ಬಜೆಟ್ ಎಂದು ಟೀಕಿಸಿದ್ದಾರೆ ಎಂದು ಹೇಳಿ, ಕೇಂದ್ರ ಸರ್ಕಾರದ ಅನುದಾನ ಕಡಿಮೆಯಾಗುತ್ತಿರುವ ಬಗ್ಗೆ ಗಮನಸೆಳೆದರು. ಒಂದು ಹಂತದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಉಪನಾಯಕ ಯು.ಟಿ.ಖಾದರ್ ಅವರು ಕುಮಾರಸ್ವಾಮಿ ಅವರನ್ನುದ್ದೇಶಿಸಿ, ನೀವು ಬಜೆಟ್ ಮೇಲೆ ಮಾತನಾಡುತ್ತಿದ್ದಾರೋ, ವಿರೋಧಪಕ್ಷದ ನಾಯಕರು ಮಾತನಾಡಿರುವುದರ ಬಗ್ಗೆ ಮಾತನಾಡುತ್ತಿದ್ದರೋ ಸ್ಪಷ್ಟಪಡಿಸಿ ಎಂದು ಕೇಳಿದರು.
ಕಾಂಗ್ರೆಸ್-ಜೆಡಿಎಸ್ ಶಾಸಕರು ಎದ್ದು ನಿಂತು ಏಕಕಾಲಕ್ಕೆ ಮಾತನಾಡಲು ಮುಂದಾದಾಗ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು. ಬಿಜೆಪಿ ಸದಸ್ಯರು ಕೂಡ ಆ ಸಂದರ್ಭದಲ್ಲಿ ಮಾತನಾಡಲು ಮುಂದಾದಾಗ ಮತ್ತಷ್ಟು ಗದ್ದಲು ಹೆಚ್ಚಲು ಕಾರಣವಾಯಿತು.
ಈ ಹಂತದಲ್ಲಿ ಕಾನೂನು ಸಚಿವ ಮಾಧುಸ್ವಾಮಿ ಮಾತನಾಡಿ, ವಿರೋಧ ಪಕ್ಷದ ನಾಯಕರು ಮಾತನಾಡುವಾಗ ಮುಖ್ಯಮಂತ್ರಿ ಮಂಡಿಸಿದ ಬಜೆಟ್‍ಗಿಂತ ತಾವು ಮಂಡಿಸಿದ್ದ ಬಜೆಟ್ ಬಗ್ಗೆ ಮಾತನಾಡುತ್ತಿದ್ದಾರೆ ಎಂಬ ಅನುಮಾನವಿತ್ತು. ನಾನು ಈ ರೀತಿ ಎಂದಿದ್ದೆ. ಎರಡೂ ಬಜೆಟ್‍ಗಳ ಹೋಲಿಕೆ ಮಾಡಿದ್ದಾರೆ. ಕುಮಾರಸ್ವಾಮಿ ಅವರು ಮಾತನಾಡುತ್ತಿದ್ದಾರೆ. ವಿರೋಧ ಪಕ್ಷದ ನಾಯಕರು ಮಾಡಿರುವ ಭಾಷಣಕ್ಕೆ ಉತ್ತರ ಹೇಳಲು ಮುಖ್ಯಮಂತ್ರಿಗೆ ಎರಡು ದಿನ ಬೇಕಾಗುತ್ತದೆ ಎಂದು ಹೇಳಿದರು.
ಆಗ ಖಾದರ್ ಅವರು ನಿಮ್ಮನ್ನು ಅವರು ಸಮರ್ಥನೆ ಮಾಡುತ್ತಾರೆ. ಅವರನ್ನು ನೀವು ಸಮರ್ಥಿಸಿಕೊಳ್ಳುತ್ತೀರಿ. ಈ ರೀತಿಯಾದರೆ ಬಿ ಟೀಮ್ ಎಂದು ಹೇಳುವುದಿಲ್ಲವೇ ಎಂದು ಪ್ರಶ್ನಿಸಿದರು. ಆಗ ಜೆಡಿಎಸ್ ಶಾಸಕರು ಕೆರಳಿ ಏರಿದ ದನಿಯಲ್ಲಿ ಮಾತನಾಡಲು ಮುಂದಾದಾಗ ಪ್ರತಿಯಾಗಿ ಕಾಂಗ್ರೆಸ್ ಸದಸ್ಯರು ಎದ್ದು ನಿಂತು ಮಾತನಾಡಲು ಮುಂದಾದರು. ಮತ್ತೆ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಿ ಉಭಯ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.
ಮಾತು ಮುಂದುವರೆಸಿದ ಕುಮಾರಸ್ವಾಮಿ ವಿರೋಧ ಪಕ್ಷದ ನಾಯಕರು ಮಾಡಿದ ಭಾಷಣವನ್ನು ತಾಳ್ಮೆಯಿಂದ ಕೇಳಿದ್ದೇವೆ. ಎರಡು ದಿನದ ಚರ್ಚೆಯನ್ನು ನೋಡಿದರೆ ಗೊತ್ತಾಗುತ್ತದೆ. ಆಯವ್ಯಯದ ಬಗ್ಗೆ ಚರ್ಚೆಯಾಗಬೇಕು. ಆರ್‍ಎಸ್‍ಎಸ್ ಬಜೆಟ್ ಎಂದು ರಾಜಕೀಯ ಭಾಷಣವೇ ಮಾಡಿದ್ದಾರೆ ಎಂದರು.
ಆಗ ಬಿಜೆಪಿ ಶಾಸಕರು ಮೇಜು ಕುಟ್ಟಿ ಸ್ವಾಗತಿಸಿದರು. ಈ ಹಂತದಲ್ಲಿ ಕಾಂಗ್ರೆಸ್ ಸದಸ್ಯರು ಆಕ್ಷೇಪಿಸಿ ಮಾತನಾಡಲು ಮುಂದಾದಾಗ ಮತ್ತೆ ಗದ್ದಲ ನಿರ್ಮಾಣವಾಯಿತು. ಈ ಹಂತದಲ್ಲಿ ಕೆರಳಿದ ಕುಮಾರಸ್ವಾಮಿ ನಾನು ಏನು ಮಾತನಾಡಬೇಕು ಎಂಬುದು ಗೊತ್ತಿದೆ. ಮಾತನಾಡುವುದು ನನ್ನ ಹಕ್ಕು ನಿಮ್ಮಿಂದ ಹೇಳಿಸಿಕೊಳ್ಳಬೇಕಿಲ್ಲ ಎಂದರು.
ಮತ್ತೆ ಖಾದರ್ ಬಜೆಟ್ ಬಗ್ಗೆ ಮಾತನಾಡಲಿ ಎಂದು ಹೇಳುತ್ತಿದ್ದಂತೆ ಕೆರಳಿದ ಜೆಡಿಎಸ್ ಶಾಸಕರು ಏರಿದ ಧ್ವನಿಯಲ್ಲಿ ಪ್ರತಿರೋಧವೊಡ್ಡಲು ಮುಂದಾದರು. ಬಿಜೆಪಿ ಶಾಸಕರು ಈ ಹಂತದಲ್ಲಿ ಎದ್ದು ನಿಂತರು.
ಈ ಹಂತದಲ್ಲಿ ಸಚಿವ ಮಾಧುಸ್ವಾಮಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ವಿಚಾರ ಪ್ರಸ್ತಾಪ ಮಾಡುತ್ತೀರಿ. ಮಾಜಿ ಸಿಎಂ ಎಸ್.ಆರ್.ಬೊಮ್ಮಾಯಿ ಅವರ ವಿಚಾರವನ್ನು ಪ್ರಸ್ತಾಪಿಸಿದ್ದೀರಿ. ಎಲ್ಲರಿಗೂ ಮಾತನಾಡುವ ಹಕ್ಕಿದೆ. ಏಕೆ ಅಡ್ಡಿ ಮಾಡಬೇಕು ಎಂದು ಕಾಂಗ್ರೆಸ್ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು. ಈ ಹಂತದಲ್ಲೂ ಗದ್ದಲ ಹೆಚ್ಚಾಯಿತು.
ಸಭಾಧ್ಯಕ್ಷರು ಪದೇ ಪದೇ ಸಮಾಧಾನಪಡಿಸಲು ಯತ್ನಿಸುತ್ತಿದ್ದರು. ಈ ಹಂತದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಎದ್ದು ನಿಂತು ಮಾತನಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

Articles You Might Like

Share This Article