ವಿದ್ಯಾಸಾಗರ್ ಶಾಲೆ ಬಳಿ ನಡೆದ ಗಲಾಟೆ ಹಿಂದೆ ಕೆಲ ಸಂಘಟನೆಗಳ ಕೈವಾಡ..!

Social Share

ಬೆಂಗಳೂರು, ಫೆ.14- ನಗರದ ಚಂದ್ರಲೇಔಟ್‍ನ ವಿದ್ಯಾಸಾಗರ್ ಶಾಲೆ ಆವರಣದಲ್ಲಿ ಶನಿವಾರ ನಡೆದ ಗಲಾಟೆಯಲ್ಲಿ ಕೆಲ ಸಂಘಟನೆಗಳ ಕೈವಾಡವಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಅಂದು ಆರಂಭದಲ್ಲಿ ಪೋಷಕರು ಶಾಂತಿಯುತವಾಗಿ ಶಿಕ್ಷಕರಿಂದ ಘಟನೆ ಬಗ್ಗೆ ಮಾಹಿತಿ ಪಡೆಯುತ್ತಿದ್ದರು. ಅಲ್ಲಿಗೆ ಕೆಲವು ವ್ಯಕ್ತಿಗಳು ಬಂದ ನಂತರ ಗಲಾಟೆ ತೀವ್ರಗೊಂಡಿತ್ತು ಎಂಬುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.
ಶಾಲಾ ಆಡಳಿತ ಮಂಡಳಿ ಮುಖ್ಯಸ್ಥರಾದ ಡಾ.ರಾಜು ಅವರು ಸಹ ಇದಕ್ಕೆ ಪುಷ್ಟಿ ನೀಡುವಂತೆ ಹೇಳಿಕೆ ನೀಡಿದ್ದು, ಅಂದು ಗಲಾಟೆ ವೇಳೆ ಪೋಷಕರಿಗಿಂತ ಹೊರಗಿನವರೇ ಹೆಚ್ಚಾಗಿದ್ದರು ಎಂದು ಆರೋಪಿಸಿದ್ದಾರೆ.
ಗಲಾಟೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಸಹ ಘಟನೆ ನಡೆದ ದಿನದ ವಿಡಿಯೋ ಮಾಡಿದ್ದೇವೆ. ಇದರಿಂದ ಹೆಚ್ಚಿನ ಮಾಹಿತಿ ದೊರೆಯಲಿದೆ ಎಂದಿದ್ದಾರೆ. ಇದರ ಹಿಂದೆ ಯಾರಿದ್ದಾರೆ ಎಂಬುದರ ಬಗ್ಗೆ ಪೋಲೀಸರು ತನಿಖೆ ನಡೆಸಿ ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಇದರಲ್ಲಿ ನಮ್ಮ ಶಾಲಾ ಶಿಕ್ಷಕಿ ಶಶಿಕಲಾ ಅವರ ತಪ್ಪಿಲ್ಲ. ಹಿಜಾಬ್ ಸೇರಿದಂತೆ ಮುಸ್ಲಿಂ ಸಮುದಾಯದ ಬಗ್ಗೆ ಅವರು ಮಾತನಾಡಿಲ್ಲ. ಆದರೆ, ತರಗತಿಯಲ್ಲಿ ಗಲಾಟೆ ಮಾಡಿದ ವಿದ್ಯಾರ್ಥಿಗಳ ಹೆಸರು ಬರೆದು ಬುದ್ದಿ ಹೇಳಿದ್ದನ್ನೆ ಬೇರೆ ರೀತಿಯಾಗಿ ಬಳಸಿಕೊಂಡಿದ್ದಾರೆ ಎಂದರು.
ಅಲ್ಲದೆ, ಶಿಕ್ಷಕಿಯನ್ನು ನಾವು ವಜಾ ಮಾಡಿಲ್ಲ, ರಜೆ ಮೇಲೆ ಕಳುಹಿಸಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಘಟನೆ ಕುರಿತಂತೆ ಸ್ವತಃ ಗಣಿತ ಶಿಕ್ಷಕಿ ಶಶಿಕಲಾ ಸಹ ಮಾಹಿತಿ ನೀಡಿದ್ದಾರೆ. ನಾನು ಹಿಜಾಬ್ ಬಗ್ಗೆ ಮಾತನಾಡಿಯೇ ಇಲ್ಲ . ನನ್ನ ವಿರುದ್ದ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಅಂದು ತರಗತಿಯಲ್ಲಿ ಪಾಠ ಮಾಡುವಾಗ ಗಲಾಟೆ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ತಡೆಯಲು ಯತ್ನಿಸಿದರೂ ಅವರ ಗಲಾಟೆ ನಿಲ್ಲಲಿಲ್ಲ. ಆ ವೇಳೆ ಮೂವರು ವಿದ್ಯಾರ್ಥಿಗಳ ಹೆಸರಿನ ಮೊದಲ ಅಕ್ಷರಗಳನ್ನು ಕೆಎಲ್‍ಎಸ್ ಎಂದು ಬೋರ್ಡ್ ಮೇಲೆ ಬರೆದೆ, ಅದನ್ನು ವಿದ್ಯಾರ್ಥಿಗಳು ಏನು ಎಂದು ಕೇಳಿದರು.
ನಾನು ನೀವು ಏನು ಬೇಕಾದರೂ ಅರ್ಥೈಸಿ ಕೊಳ್ಳಿ ಎಂದು ಹೇಳಿದ್ದನ್ನು ಅವರು ತಪ್ಪಾಗಿ ತಿಳಿದು, ಪೋಷಕರಿಗೆ ಹೇಳಿದ್ದಾರೆ. ಪೋಷಕರು ಅದನ್ನೆ ದೊಡ್ಡದು ಮಾಡಿ ಗಲಾಟೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ನಾವು ಶಿಕ್ಷಕರು ನಮಗೂ ಹೆಚ್ಚಿನ ಜವಾಬ್ದಾರಿ ಇರುತ್ತದೆ ಹಿಜಾಬ್ ವಿವಾದ ನಡೆಯುತ್ತಿದೆ. ಅಲ್ಲದೆ ನನಗೆ ಸಂಭಂದ ಪಡದ ವಿಚಾರದ ಬಗ್ಗೆ ನಾನೇಕೆ ಮಾತನಾಡಲಿ ಎಂದು ಹೇಳಿದ್ದಾರೆ.
ಘಟನೆ ನಡೆದ ನಂತರ ಶಿಕ್ಷಕಿ ವಿರುದ್ದ ಚಂದ್ರ ಲೇಔಟ್ ಠಾಣೆಗೆ ದೂರು ನೀಡಲಾಗಿದೆ. ಇತ್ತ ಶಾಲಾ ಆಡಳಿತ ಮಂಡಳಿಯೂ ಶಿಕ್ಷಕಿ ಯನ್ನು ರಜೆ ಮೇಲೆ ಕಳುಹಿಸಿದ್ದಾರೆ. ಮತ್ತೊಂದೆಡೆ ಶಾಲೆಯಿಂದ ಶಿಕ್ಷಕಿಯನ್ನು ಅಮಾನತು ಅಥವಾ ವಜಾ ಮಾಡಬಾರದೆಂದು ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.
ಒಟ್ಟಾರೆ ಇಡೀ ಘಟನೆಯ ಹಿಂದೆ ಯಾವುದೋ ಕಾಣದ ಕೈಗಳ ಕೈವಾಡ ವಿರುವ ಶಂಕೆ ಇದ್ದು, ಅಂದು ಪೋಷಕರ ಜತೆ ಘಟನೆಗೆ ಸಂಬಂಧ ಪಡದ ಬೇರೆ ವ್ಯಕ್ತಿಗಳು ಸ್ಥಳದಲ್ಲಿ ಇದ್ದ ಬಗ್ಗೆ ಪೋಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಶಾಲೆಯಲ್ಲಿ ನಡೆದ ಒಂದು ಸಣ್ಣ ವಿಚಾರ ಇಷ್ಟೆಲ್ಲಾ ತಿರುವು ಪಡೆಯಲು ಹೇಗೆ ಸಾಧ್ಯ ಅದರ ಹಿಂದೆ ಯಾರಿದ್ದಾರೆ , ಹಿಜಾಬ್ ವಿವಾದವನ್ನು ಬೇಕೆಂತಲೇ ದೊಡ್ಡದು ಮಾಡಲಾಗುತ್ತಿದೆಯೆ ಎಂಬೆಲ್ಲಾ ವಿಚಾರದ ಬಗ್ಗೆ ಪೋಲಿಸರು ತೀವ್ರ ತನಿಖೆ ನಡೆಸಿ ಗಲಾಟೆಗೆ ಕಾರಣರಾದವರನ್ನುಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಂಡು ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡ ಬೇಕಾಗಿದೆ.

Articles You Might Like

Share This Article