ಹಳ್ಳಿಗಳು ಅಲರ್ಟ್: ಸೋಂಕು ನಿಯಂತ್ರಣಕ್ಕೆ ಸ್ವಯಂ ದಿಗ್ಬಂಧನ

ಬೆಂಗಳೂರು, ಏ.20- ಗ್ರಾಮೀಣ ಭಾಗಗಳಿಗೆ ಕೊರೊನಾ ಸೋಂಕು ವ್ಯಾಪಿಸುತ್ತಿದೆ. ಹಳ್ಳಿ ಹಳ್ಳಿಗಳು, ಗಲ್ಲಿ ಗಲ್ಲಿಗಳಲ್ಲಿ ಕೊರೊನಾ ಎರಡನೆ ಅಲೆ ಭೀತಿ ತೀವ್ರಗೊಂಡಿದ್ದು, ಹಲವು ಗ್ರಾಮಗಳಲ್ಲಿ ಹೊರಗಿನವರಿಗೆ ನಿಷೇಧ ಹೇರಲಾಗುತ್ತಿದೆ. ಜಾತ್ರೆ, ಊರ ಹಬ್ಬ, ಧಾರ್ಮಿಕ ಕಾರ್ಯಕ್ರಮ, ಸಮಾರಂಭಗಳನ್ನು ರದ್ದುಗೊಳಿ ಸಲಾಗಿದೆ.

ಕಳೆದ ಬಾರಿ ಲಾಕ್‍ಡೌನ್ ಘೋಷಣೆ ಸಂದರ್ಭದಲ್ಲಿ ಗ್ರಾಮಗಳಿಗೆ ಹೊರಗಿನವರಿಗೆ ಸಂಪೂರ್ಣ ನಿಷೇಧ ಹೇರಲಾಗಿತ್ತು. ಹೊರಗಿನವರು ಗ್ರಾಮಗಳಿಗೆ ಬರದಂತೆ ಬೇಲಿ ಹಾಕಲಾಗಿತ್ತು. ಅಲ್ಲದೆ, ಯಾವುದೇ ವಾಹನಗಳು ಪ್ರವೇಶ ಮಾಡದಂತೆ ಗ್ರಾಮಗಳ ಪ್ರವೇಶ ದ್ವಾರದಲ್ಲಿ ದೊಡ್ಡ ದೊಡ್ಡ
ಹಳ್ಳಗಳನ್ನು ತೋಡಲಾಗಿತ್ತು. ಕೊರೊನಾ ನಿಯಂತ್ರಣಕ್ಕಾಗಿ ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶದವರೇ ಹೆಚ್ಚು ಆಸಕ್ತಿ ವಹಿಸಿದ್ದರು.

ಈಗ ಕೊರೊನಾ ಎರಡನೆ ಅಲೆ ಆರ್ಭಟ ಜೋರಾಗಿದ್ದು, ರಾಜಧಾನಿ ಬೆಂಗಳೂರು, ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಹೆಚ್ಚಾಗಿ ವ್ಯಾಪಿಸಿರುವ ಸೋಂಕು ಮತ್ತು ಸಾವಿನ ಸಂಖ್ಯೆ ಈಗ ಗ್ರಾಮೀಣ ಪ್ರದೇಶಗಳಿಗೂ ದಾಂಗುಡಿ ಇಟ್ಟಿದೆ. ಅದರ ನಿಯಂತ್ರಣಕ್ಕಾಗಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತದೆಯೋ ಇಲ್ಲವೋ ಅದು ಮುಖ್ಯವಾಗಿಲ್ಲ. ಗ್ರಾಮದವರೇ ಮುಂದಾಗಿ ಸೋಂಕು ಬಾರದಂತೆ ತಡೆಯಲು ತಾವೇ ಸ್ವಯಂ ನಿರ್ಬಂಧ ಹಾಕಿಕೊಳ್ಳುತ್ತಿದ್ದಾರೆ.

ಗ್ರಾಮ ದೇವತೆಗಳ ಜಾತ್ರೆಗಳು, ಕೆಂಡದರ್ಚನೆ, ರಥೋತ್ಸವ, ಸಾಮೂಹಿಕ ವಿವಾಹ ಎಲ್ಲ ಕಾರ್ಯಕ್ರಮಗಳನ್ನೂ ಮುಂದೂಡಲು ಮುಂದಾಗಿದ್ದಾರೆ. ಹಲವು ಗ್ರಾಮಗಳಲ್ಲಿ ಸ್ವಯಂ ಪ್ರೇರಿತವಾಗಿ ಲಾಕ್‍ಡೌನ್ ಘೋಷಣೆ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಕೊರೊನಾ ಸೋಂಕು ತೀವ್ರವಾಗಿ ವ್ಯಾಪಿಸುತ್ತಿದ್ದು, ಸೋಂಕು ಮತ್ತು ಸಾವಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 16 ಸಾವಿರ ದಾಟಿದೆ. ಪ್ರತಿದಿನ ಬೆಂಗಳೂರಿನಲ್ಲಿ 10 ರಿಂದ 12 ಸಾವಿರ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ನಿನ್ನೆ ಒಂದೇ ದಿನ ರಾಜ್ಯಾದ್ಯಂತ 146 ಜನ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದು, ಬೆಂಗಳೂರು ಒಂದರಲ್ಲೇ 96 ಜನ ಸಾವನ್ನಪ್ಪಿದ್ದಾರೆ. ಆಸ್ಪತ್ರೆಗಳು ಸೋಂಕಿತರಿಂದ ಭರ್ತಿಯಾಗಿ ಆಕ್ಸಿಜನ್‍ಗಾಗಿ ಹಾಹಾಕಾರ ಶುರುವಾಗಿದೆ. ಚಿತಾಗಾರಗಳ ಮುಂದೆ ಶವದ ಆ್ಯಂಬುಲೆನ್ಸ್‍ಗಳ ಸಾಲು ಕಂಡುಬರುತ್ತಿದೆ. ಶವ ಸಂಸ್ಕಾರಕ್ಕಾಗಿ ಗಂಟೆಗಟ್ಟಲೆ ಕಾಯಬೇಕಾಗಿದೆ. ಸಂಬಂಕರ ಆಕ್ರಂಧನ ಮುಗಿಲು ಮುಟ್ಟಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.

ವಿವಿಧೆಡೆಯಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿರುವವರು ಬೆಂಗಳೂರು ತೊರೆಯುತ್ತಿದ್ದಾರೆ. ಅತ್ತ ಗ್ರಾಮೀಣ ಭಾಗದಲ್ಲಿ ಬೆಂಗಳೂರಿನಿಂದ ಬರುವವರಿಗೆ ನಿಷೇಧ ಹೇರಲಾಗುತ್ತಿದೆ. ಸೋಂಕು ಹೆಚ್ಚಾಗಿರುವ ಪ್ರದೇಶಗಳಿಂದ ನಮ್ಮ ಊರುಗಳಿಗೆ ಬಂದರೆ ಊರ ಜನರಿಗೂ ಕಾಯಿಲೆ ಹರಡುತ್ತದೆ. ಹೀಗಾಗಿ ಎಚ್ಚರಿಕೆಯಿಂದಿರಬೇಕು ಎಂಬ ಸಂದೇಶವನ್ನು ಗ್ರಾಮಸ್ಥರು, ಗ್ರಾಮದ ಮುಖಂಡರು ನೀಡಿದ್ದಾರೆ.

ಈಗಾಗಲೇ ಬಹಳಷ್ಟು ಮಂದಿ ನಗರ ಪ್ರದೇಶಗಳಿಂದ ಊರುಗಳಿಗೆ ತೆರಳಿದ್ದು, ಗ್ರಾಮೀಣ ಭಾಗಗಳಲ್ಲಿ ಸೋಂಕು ಹರಡಲು ಕಾರಣವಾಗಿದೆ. ಹಳ್ಳಿಗಳಲ್ಲಿ ಸೋಂಕು ತಡೆಯಲು ಹೋಂ ಐಸೊಲೇಷನ್ ಮಾಡಲಾಗುತ್ತಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷ, ಪಿಡಿಒ, ಆಶಾ ಕಾರ್ಯಕರ್ತೆಯರು, ಸ್ಥಳೀಯ ಆರೋಗ್ಯ ಇಲಾಖೆ ಅಕಾರಿಗಳ ಕಾರ್ಯಪಡೆಯೊಂದಿಗೆ ರೋಗದ ಬಗ್ಗೆ ಜಾಗೃತಿ ಮೂಡಿಸಿ ಹೋಂ ಐಸೊಲೇಷನ್‍ನಲ್ಲಿರುವವರಿಗೆ ಔಷಧೋಪಚಾರ ಮಾಡಲಾಗುತ್ತಿದೆ.

ಸೋಂಕು ಮತ್ತಷ್ಟು ವ್ಯಾಪಿಸಿದರೆ ಸಾವು-ನೋವಿನ ಪ್ರಮಾಣ ಹೆಚ್ಚಾಗುತ್ತದೆ ಎಂದು ಆತಂಕಕ್ಕೊಳಗಾಗಿರುವ ಗ್ರಾಮಸ್ಥರು ಸ್ವಯಂ ಲಾಕ್‍ಡೌನ್‍ಗೆ ಮುಂದಾಗಿದ್ದಾರೆ. ಸರ್ಕಾರ ಯಾವ ನಿರ್ಧಾರ ಕೈಗೊಂಡರೆ ಏನು, ನಮ್ಮ ಗ್ರಾಮಗಳನ್ನು ನಾವು ಕಾಪಾಡಿಕೊಳ್ಳಬೇಕು. ಜನರನ್ನು ರಕ್ಷಿಸಿಕೊಳ್ಳಬೇಕು ಎಂದು ಹಲವು ಗ್ರಾಮಗಳವರು ಈಗಾಗಲೇ ಸ್ವಯಂ ನಿರ್ಬಂಧ ವಿಸಿಕೊಂಡಿದ್ದಾರೆ.

ಹೊಸಕೋಟೆ ತಾಲ್ಲೂಕಿನ ಮಾಕನಳ್ಳಿ ಗ್ರಾಮದಲ್ಲಿ ಸುಮಾರು 20ಕ್ಕೂ ಹೆಚ್ಚು ಜನರಿಗೆ ಸೋಂಕು ಕಂಡುಬಂದ ಹಿನ್ನೆಲೆಯಲ್ಲಿ ಗ್ರಾಮವನ್ನು ಸೀಲ್‍ಡೌನ್ ಮಾಡಲಾಗಿದೆ. ಇತ್ತ ಬೀದರ್ ತಾಲ್ಲೂಕಿನ ಬಾವಗಿ ಮತ್ತು ರಾಮನಗರ ಜಿಲ್ಲೆಯ ಕುದೂರು ಗ್ರಾಮಸ್ಥರು ಸ್ವಯಂ ಲಾಕ್‍ಡೌನ್ ಜಾರಿಗೊಳಿಸಿದ್ದಾರೆ.

ಬೀದರ್‍ನ ಸಂಗೊಳಿ ಗ್ರಾಪಂ ವ್ಯಾಪ್ತಿಯ ಬಾವಗಿಯಲ್ಲಿ 3000 ಜನಸಂಖ್ಯೆ ಇದ್ದು, ಆರು ಜನರಿಗೆ ಸೋಂಕು ದೃಢಪಟ್ಟಿದ್ದು, ಸೋಂಕು ವ್ಯಾಪಿಸದಂತೆ ತಡೆಯಲು ಗ್ರಾಮದಲ್ಲಿ ಲಾಕ್‍ಡೌನ್ ಘೋಷಿಸಿದ್ದು, ಹೊರಗಿನಿಂದ ಬರುವವರಿಗೆ ನಿಷೇಧ ಹೇರಲಾಗಿರುವುದಲ್ಲದೆ ಗ್ರಾಮದವರ್ಯಾರೂ ಅನಗತ್ಯವಾಗಿ ಓಡಾಟ ಮಾಡಬಾರದು ಎಂದು ಸೂಚಿಸಲಾಗಿದೆ.

ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಹೊರಹೋಗಲು ಸೂಚಿಸಲಾಗಿದೆ. ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ, ಮಲೆನಾಡು ಭಾಗದ ಜಿಲ್ಲೆಗಳ ಬಹುತೇಕ ಹಳ್ಳಿಗಳಲ್ಲಿ ಕೊರೊನಾ ಎರಡನೆ ಅಲೆ ಆತಂಕದ ಭೀತಿ ಎದುರಾಗಿದ್ದು, ಎಲ್ಲ ಹಳ್ಳಿಗಳವರೂ ಕಟ್ಟೆಚ್ಚರ ವಹಿಸಿದ್ದಾರೆ.