ಅಂತರ್ ಜಾತಿ ವಿವಾಹವಾದವನ ಶವಕ್ಕೆ ಎರಡು ಬಾರಿ ಅಂತ್ಯಸಂಸ್ಕಾರ

Social Share

ಗೌಹಾತಿ, ಆ.12- ಅಂತರ್ ಜಾತಿ ವಿವಾಹವಾದ ಕಾರಣಕ್ಕೆ 27 ವರ್ಷಗಳಿಂದ ಗ್ರಾಮಸ್ಥರ ಬಹಿಷ್ಕಾರಕ್ಕೆ ಒಳಗಾದ ವ್ಯಕ್ತಿಯ ಅಂತ್ಯ ಸಂಸ್ಕಾರ ಎರಡು ಬಾರಿ ನಡೆದ ಘಟನೆ ಅಸ್ಸಾಂನಲ್ಲಿ ನಡೆದಿದೆ.

ದರ್ರಾಂಗ್ ಜಿಲ್ಲೆಯ ಪಟೋಲ್ಸಿಂಗ್ಪಾರಾ ಗ್ರಾಮದ ನಿವಾಸಿ ಅತುಲ್ ಶರ್ಮಾ (50) ಮಂಗಳವಾರ ನಿಧನರಾಗಿದ್ದರು. 27 ವರ್ಷಗಳ ಹಿಂದೆ ಆತ ಕೆಳ ಜಾತಿಯ ಹೆಣ್ಣನ್ನು ಮದುವೆಯಾದ ಕಾರಣಕ್ಕೆ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿದ್ದರು. ಸಾವನ್ನಪ್ಪಿದ ವೇಳೆ ಇಡೀ ಗ್ರಾಮಸ್ಥರು ಅಂತ್ಯ ಸಂಸ್ಕಾರದಿಂದ ದೂರ ಉಳಿದಿದ್ದಾರೆ.

ನಾವ್ಯಾರು ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸುವುದಿಲ್ಲ, ನೀವೇ ಏನಾದರೂ ಮಾಡಿಕೊಳ್ಳಿ ಎಂದು ಗ್ರಾಮಸ್ಥರು ಹೇಳಿದ್ದಾಗಿ, ಮೃತನ ಪತ್ನಿ ತಿಳಿಸಿದ್ದಾರೆ. ಮೃತ ವ್ಯಕ್ತಿಯ ಪುತ್ರ ದೂರ ಇದ್ದು, ನಿಗದಿತ ಸಮಯಕ್ಕೆ ಬರಲಾಗಲಿಲ್ಲ. ಕೊನೆಗೆ ಮೃತನ ಸಹೋದರ ಒಬ್ಬಂಟಿಯಾಗಿ ಶವವನ್ನು ಸಮಾದಿ ಮಾಡಿದ್ದಾರೆ.

ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತಾಲ್ಲೂಕು ಆಡಳಿತದ ಅಧಿಕಾರಿಗಳು ಮತ್ತು ಪೊಲೀಸರು, ಮ್ಯಾಜಿಸ್ಟ್ರೇಟ್ ಅವರ ಅನುಮತಿ ಮೇರೆ ಹೂತಿದ್ದ ಶವವನ್ನು ಹೊರ ತೆಗೆದು, ಶವಪರೀಕ್ಷೆ ನಡೆಸಿದ್ದಾರೆ. ನಂತರ ಹಿಂದು ಸಂಪ್ರದಾಯದ ಪ್ರಕಾರ ಪುತ್ರನ ಕೈಯಿಂದ ಅಗ್ನಿಸ್ಪರ್ಶ ಮಾಡಿಸಿದ್ದಾರೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಸಾಮಾಜಿಕ ಬಹಿಷ್ಕಾರಕ್ಕೆ ಸಂಬಂಧಪಟ್ಟಂತೆ ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

Articles You Might Like

Share This Article