ಬೆಂಗಳೂರು,ಸೆ.18- ತೀವ್ರ ವಿವಾದ ಸೃಷ್ಟಿಸಿರುವ ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಸಂಭವಿಸಿದ ರೋಗಿಗಳ ಸಾವಿನ ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳನ್ನು ಅಮಾನತುಪಡಿಸಲು ಸರ್ಕಾರ ತೀರ್ಮಾನಿಸಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಉನ್ನತ ಮಟ್ಟದ ತನಿಖಾ ಸಮಿತಿ ವರದಿ ಸರ್ಕಾರದ ಕೈ ಸೇರುತ್ತಿದ್ದಂತೆ ಉದಾಸೀನ ತೋರಿರುವ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತುಪಡಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.
ಮೇಲ್ನೋಟಕ್ಕೆ ವಿಮ್ಸ್‍ನಲ್ಲಿ ನಡೆಯುತ್ತಿರುವ ಗುಂಪುಗಾರಿಕೆ ಮತ್ತು ಆಡಳಿತ ಮಂಡಳಿಯ ಉದಾಸೀನದಿಂದಲೇ ಬಡ ರೋಗಿಗಳು ಸಾವನ್ನಪ್ಪಿರುವುದು ಕಂಡುಬರುವುದರಿಂದ ವೈದ್ಯರಿಗೆ ಬಿಸಿ ಮುಟ್ಟಿಸಲು ಸರ್ಕಾರ ನಿರ್ಧರಿಸಿದೆ.
ಹಿರಿಯ ವೈದ್ಯಾಧಿಕಾರಿ ಡಾ.ಸ್ಮಿತಾ ನೇತೃತ್ವದ ತನಿಖಾ ತಂಡ ನಾಳೆ ಅಥವಾ ಮಂಗಳವಾರ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದು, ಮೂವರು ರೋಗಿಗಳ ಸಾವಿಗೆ ಕಾರಣರಾದವರನ್ನು ಅಮಾನತುಪಡಿಸಿ ವಿಮ್ಸ್ ನ ನಿರ್ದೇಶಕ ಗಂಗಾಧರ್ ಗೌಡ ಅವರನ್ನು ಎತ್ತಂಗಡಿ ಮಾಡುವ ಸಾಧ್ಯತೆ ಇದೆ.
ರೋಗಿಗಳು ದಾಖಲಾಗಿದ್ದ ಐಸಿಯುಗೆ ವಿದ್ಯುತ್ ಪೂರೈಕೆಯಾಗದ ಕಾರಣ ಅವರು ಸಾವನ್ನಪ್ಪಿದ್ದರು ಎಂಬುದು ಕೆಲವರ ಆರೋಪವಾಗಿದೆ. ಆದರೆ ಆಡಳಿತ ಮಂಡಳಿ ಇದನ್ನು ನಿರಾಕರಿಸಿತ್ತು.
ಮೂಲಗಳ ಪ್ರಕಾರ ಐಸಿಯು ಘಟಕಕ್ಕೆ ವಿದ್ಯುತ್ ಪೂರೈಕೆ ಮಾಡಲು ಆಡಳಿತ ಮಂಡಳಿ ಉದಾಸೀನ ತೋರಿದ್ದೇ ಈ ಅವಘಡಕ್ಕೆ ಕಾರಣ ಎಂಬ ಮಾತು ವಿಮ್ಸ್ ಆಸ್ಪತ್ರೆಯಿಂದಲೇ ಕೇಳಿಬರುತ್ತಿದೆ. ಆಸ್ಪತ್ರೆಯಲ್ಲಿ ಹೆಚ್ಚುತ್ತಿರುವ ಗುಂಪುಗಾರಿಕೆ ಪರಸ್ಪರ ಕಾಲೆಳೆಯುವಿಕೆ, ಯಾರೂ ಕೂಡ ನಮ್ಮನ್ನು ಏನೂ ಮಾಡಲಾರರೆಂಬ ದರ್ಪ ಈ ಕಾರಣಗಳಿಂದಲೇ ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ.
ಮೊನ್ನೆ ನಡೆದದ್ದು ಮಾತ್ರ ಹೊರಗೆ ಬಂದಿದೆ. ಇಲ್ಲಿ ತಿಂಗಳಿಗೆ ಎರಡುಮೂರು ಬಾರಿ ಇಂತಹ ಅವಘಡಗಳು ಸಂಭವಿಸುತ್ತಲೇ ಇರುತ್ತವೆ. ಆಸ್ಪತ್ರೆಯ ನಿರ್ದೇಶಕರಾಗಲಿ, ವಿಭಾಗದ ಮುಖ್ಯಸ್ಥರಾಗಲಿ, ಮೂಲಭೂತ ಸೌಕರ್ಯಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ರಾಜಕಾರಣಿಗಳ ಬೆಂಬಲ ಗಿಟ್ಟಿಸಿಕೊಂಡು ಹೋದಪುಟ್ಟ, ಬಂದಪುಟ್ಟ ಎಂಬಂತೆ ಕೆಲಸ ನಿರ್ವಹಿಸುತ್ತಾರೆ ಎಂಬ ಅಳಲು ಸಾರ್ವಜನಿಕರದ್ದು.
ಗಂಗಾಧರ ಗೌಡ ಎತ್ತಂಗಡಿ: ವಿಮ್ಸ್ ಆಸ್ಪತ್ರೆಯ ನಿರ್ದೇಶಕ ಗಂಗಾಧರ ಗೌಡ ಅವರನ್ನು ಸದ್ಯದಲ್ಲೇ ಇಲ್ಲಿಂದ ಬಿಡುಗಡೆ ಮಾಡಿ ಬೇರೊಂದು ಕಡೆ ವರ್ಗಾವಣೆ ಮಾಡುವ ಸಾಧ್ಯತೆ ಇದೆ. ವಿಮ್ಸ್‍ನಲ್ಲಿ ಒಂದು ಗುಂಪು ಗಂಗಾಧರ ಗೌಡ ಪರವಾಗಿದ್ದರೆ ಮತ್ತೊಂದು ಗುಂಪು ಅವರ ವಿರುದ್ಧವಾಗಿದೆ. ಶನಿವಾರ ಪತ್ರಿಕಾ ಗೋಷ್ಠಿ ನಡೆಸಿದ್ದ ಅವರು, ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದರು.
ಐಸಿಯು ಘಟಕಕ್ಕೆ ವಿದ್ಯುತ್ ಪೂರೈಕೆ ಮಾಡುವ ವೇಳೆ ಕೆಲವರು ನನಗೆ ಕೆಟ್ಟ ಹೆಸರು ತರಲೆಂದೇ ಕಡಿತ ಮಾಡಿದ್ದಾರೆ. ವಿದ್ಯುತ್ ಸಂಪರ್ಕ ಕಡಿತವಾದಾಗ ನನಗೆ ಅಪರಿಚಿತ ವ್ಯಕ್ತಿಯೊಬ್ಬ ದೂರವಾಣಿ ಕರೆ ಮಾಡಿದ್ದ ಎಂದು ಹೇಳಿದ್ದರು.
ಅಲ್ಲದೆ ಕೆಲವರು ಮರಣೋತ್ತರ ಪರೀಕ್ಷೆಗೂ ಮುನ್ನ ಶವ ಇಟ್ಟುಕೊಂಡು ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಇದರಲ್ಲಿ ಷಡ್ಯಂತ್ರ ಅಡಗಿದೆ ಎಂದು ದೂರಿದ್ದರು.
ಇತ್ತ ಆಡಳಿತ ಪಕ್ಷದ ಶಾಸಕ ಸೋಮಶೇಖರ ರೆಡ್ಡಿ ಅವರೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಸುಧಾಕರ್ ಹಾಗೂ ವಿಮ್ಸ್ ನಿರ್ದೇಶಕ ಗಂಗಾಧರ ಗೌಡ ಅವರ ವಿರುದ್ಧ ಕಿಡಿಕಾರಿದ್ದರು. ಇದು ಸರ್ಕಾರಿ ಪ್ರಾಯೋಜಿತ ಕೊಲೆ. ಯಾರನ್ನು ಬೇಕಾದರೂ ಹಿಡಿದುಕೊಂಡು ಅನುಭವ ಇಲ್ಲದವರು ಬಂದುಬಿಡುತ್ತಾರೆ. ರೋಗಿಗಳ ಸಂಕಷ್ಟಕ್ಕೆ ಸ್ಪಂದಿಸದವರು ಇದ್ದರೂ, ಇಲ್ಲದಿದ್ದರೂ ಒಂದೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಘಟನೆಯು ವಿಧಾನಸಭೆಯಲ್ಲೂ ದೊಡ್ಡ ವಿವಾದವನ್ನು ಸೃಷ್ಟಿಸಿತ್ತು. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಘಟನೆಗೆ ಕಾರಣರಾದವರನ್ನು ಅಮಾನತುಪಡಿಸಬೇಕೆಂದು ಒತ್ತಾಯಿಸಿದ್ದರು. ಈ ಎಲ್ಲ ಮುಜುಗರದಿಂದ ತಪ್ಪಿಸಿಕೊಳ್ಳಲು ಸರ್ಕಾರ ಕೆಲವು ವೈದ್ಯರಿಗೆ ಬರೆ ಎಳೆಯಲು ಮುಂದಾಗಿದೆ.