ಬೆಂಗಳೂರು : ರಾಜ್ಯದ ಪಂಚಮಸಾಲಿ ಸಮುದಾಯದ ಸಂಘಟನೆಯ ನೊಗಕ್ಕೆ ಹೆಗಲಾಗಲು ಜಮಖಂಡಿಯ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ ಫೆ.13ರಂದು ಉದಯವಾಗಲಿದೆ ಎಂದು ಹರಕ್ಷೇತ್ರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ ಹರಿಹರದ ಯೋಗ ಸಿಂಹಾಸನಾೀಧಿಶ್ವರ ಜಗದ್ಗುರುಗಳಾದ ಶ್ರೀ ವಚನಾನಂದ ಮಹಾಸ್ವಾಮೀಜಿಗಳು ಹೇಳಿದರು.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸುಮಾರು ಒಂದೂವರೆ ದಶಕಗಳ ನಂತರ ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದೇ ಪ್ರಸಿದ್ದಿಯಾಗಿರುವ ಬಾಗಲಕೋಟೆಯ ಜಮಖಂಡಿಯಲ್ಲಿ ಇನ್ನೊಂದು ಪೀಠದ ಉದಯವಾಗುತ್ತಿದೆ ಎಂದರು.
ಅನ್ನ, ಅಕ್ಷರ, ಆರೋಗ್ಯದಂತಹ ತ್ರಿವಿಧ ದಾಸೋಹದ ಕಲ್ಪನೆಯಿಂಧ ಕೃಷ್ಣೆಯ ತಟದಲ್ಲಿ ನೂರಾರು ಮಠಾೀಶರುಗಳ ನೇತೃತ್ವದಲ್ಲಿ, ವೀರಶೈವ ಲಿಂಗಾಯತ ಪಂಚಮಸಾಲಿ ಮಠಾೀಧಿಶರ ಒಕ್ಕೂಟ ಚಾರಿಟೇಬಲ್ ಟ್ರಸ್ಟ್‍ನ ಅಡಿಯಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಸ್ಥಾಪನೆಯಾಗಿದೆ. ಫೆ.13ರಂದು ನೂತನ ಜಗದ್ಗುರು ಪೀಠಾರೋಹಣ ಧರ್ಮಸಭೆ ಕಾರ್ಯಕ್ರಮ ನಡೆಯಲಿದ್ದು ವಿರಾಟ್ ರೈತ ಸಮಾವೇಶವನ್ನೂ ಆಯೋಜಿಸಲಾಗಿದೆ ಎಂದು ತಿಳಿಸಿದರು.
ವೀರಶೈವ ಲಿಂಗಾಯತ ಸಮುದಾಯದ ಪಂಚಮಸಾಲಿ ಹಾಗೂ ಎಲ್ಲಾ ಒಳಪಂಗಡಗಳಿಗೆ ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ 2ಎ ಮೀಸಲಾತಿ ಹಾಗೂ ಕೇಂದ್ರದ ಓ.ಬಿ.ಸಿ ಮೀಸಲಾತಿ ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳುವುದು. ಸಮುದಾಯದ ಮೂಲ ಉದ್ಯೋಗವಾದ ಕೃಷಿಯಲ್ಲಿ ಆದಾಯ ಕೇಂದ್ರಿತ ಕೃಷಿ ವ್ಯವಸ್ಥೆಗೆ ರೈತರನ್ನು ಸಿದ್ದಗೊಳಿಸುವ ನಿಟ್ಟಿನಲ್ಲಿ ಶ್ರೀ ಪೀಠವು ಪ್ರಧಾನ್ಯತೆ ನೀಡಲಿದೆ ಎಂದು ಹೇಳಿದರು.
ಸಮಾಜದ ಸಂಘಟನೆಯ ನೊಗಕ್ಕೆ ಮತ್ತೊಂದು ಹೆಗಲು:
ಪಂಚಮಸಾಲಿ ಸಮುದಾಯ ರಾಜ್ಯದ ವಿವಿಧ ಭಾಗಗಳಲ್ಲಿ ಹಂಚಿಕೊಂಡಿದೆ. ಈ ಸಮುದಾಯದ ಸಂಘಟನೆಗೆ ಕೇವಲ ಒಂದು ಪೀಠದ ವ್ಯಾಪ್ತಿ ಸಾಕಾಗುವುದಿಲ್ಲ. ಈ ನಿಟ್ಟಿನಲ್ಲಿ ಉತ್ತರ ಕರ್ನಾಟಕ ಭಾಗದ ಸಮುದಾಯದ ಸಂಘಟನೆಗೆ ಈ ಜಮಖಂಡಿ ಪೀಠ ಸ್ಥಾಪನೆಯಾಗಿದೆ. ನಮ್ಮ ಸಂಘಟನೆಯ ನೊಗಕ್ಕೆ ಮತ್ತೊಂದು ಜೋಡೆತ್ತು ಸಿಕ್ಕಂತಾಗಿದೆ ಎಂದು ಹೇಳಿದರು.
ಅಂದಿನ ಕಾರ್ಯಕ್ರಮದಲ್ಲಿ ನೂತನ ಜಗದ್ಗುರು ಪೀಠಾರೋಹಣ ಧರ್ಮಸಭೆ ಕಾರ್ಯಕ್ರಮ ಹಾಗೂ ವಿರಾಟ್ ರೈತ ಸಮಾವೇಶದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸುವ ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಅಲ್ಲದೆ, ನಾಡಿನ ಶ್ರೇಷ್ಠ ಸಂತ ಮಹಾಂತರ ದಿವ್ಯ ಸಾನಿಧ್ಯವಿರಲಿದೆ. ಅಲ್ಲದೆ, ಪ್ರಮುಖ ನಾಯಕರುಗಳು ಪಾಲ್ಗೊಳ್ಳಲಿದ್ದಾರೆ.
ಇನ್ನೊಂದು ಪೀಠದ ಅಗತ್ಯತೆ:
ಇನ್ನೊಂದು ಪೀಠದ ಅಗತ್ಯತೆ ಬಹಳಷ್ಟಿತ್ತು. ನಮ್ಮ ಮೂಲ ಪೀಠದ ಜೊತೆಯಲ್ಲಿ ಹೆಜ್ಜೆ ಹಾಕುವಂತಹ ನೂತನ ಶಕ್ತಿ ಬೇಕಾಗಿತ್ತು ಈ ನಿಟ್ಟಿನಲ್ಲಿ ಇನ್ನೊಂದು ಪೀಠ ಸ್ಥಾಪನೆಯಾಗಿದೆ. ಆದರೆ, ಈಗಾಗಲೇ ಘೋಷಿಸಿರುವಂತೆ ಹರಿಹರ ಪೀಠ ಪಂಚಮಸಾಲಿಗಳ ಪಾಲಿಗೆ ಧರ್ಮಕ್ಷೇತ್ರವಾಗಿರಲಿದೆ. ನಾಡಿನ ಉದ್ದಗಲಕ್ಕೂ ಇನ್ನು ಕೆಲವು ಪೀಠಗಳು ಉದಯವಾಗಲಿ. ನಮ್ಮ ಪೀಠದ ಮೂಲತತ್ವಗಳನ್ನು ಪ್ರಚುರಪಡಿಸುವ ಎಲ್ಲಾ ಪೀಠಗಳಿಗೂ ನಮ್ಮ ಬೆಂಬಲ ಇರಲಿದೆ ಎಂದು ಹೇಳಿದರು.
