ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿ ಗುರುತಿಸಿ ಕೊಂಡಿರುವ ಚೇಸಿಂಗ್ ಸ್ಪಷಾಲಿಸ್ಟ್ ಖ್ಯಾತಿಯ ವಿರಾಟ್ ಕೊಹ್ಲಿ ಈಗ ವೈಫಲ್ಯದ ಸರಮಾಲೆಯಿಂದ ಹೊರ ಬರಲು ಪರದಾಡುತ್ತಿರುವ ಬೆನ್ನಲ್ಲೇ ಮುಂಬರುವ ಏಷ್ಯಾಕಪ್, 20-20 ವಿಶ್ವಕಪ್, ಏಕದಿನ ವಿಶ್ವಕಪ್‍ನ ಹಿತದೃಷ್ಟಿಯಿಂದ ಕಳಪೆ ಫಾರ್ಮ್‍ನಲ್ಲಿರುವ ಭಾರತದ ಮಾಜಿ ನಾಯಕನನ್ನು ಕೈಬಿಟ್ಟು ಸದೃಢ ಯುವ ಪಡೆಯನ್ನು ಕಟ್ಟಬೇಕೆಂದು ಕೆಲವು ಹಿರಿಯ ಆಟಗಾರರೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿರಾಟ್ ಕೊಹ್ಲಿಯ ಕಳಪೆ ಪ್ರದರ್ಶನದಿಂದಾಗಿಯೇ ಭಾರತ ತಂಡವು ಪ್ರತಿಷ್ಠಿತ ಟೂರ್ನಿಗಳನ್ನು ಗೆಲ್ಲಲು ಎಡವುತ್ತಿದೆ ಎಂಬ ಕೂಗುಗಳು ಕೇಳಿಬರುತ್ತಿದ್ದವು, ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಸ್ಥಾನ ಪಡೆದರೂ ವಿರಾಟ್ ಕೊಹ್ಲಿ ಮತ್ತೆ ದೊಡ್ಡ ಮೊತ್ತ ಗಳಿಸುವಲ್ಲಿ ಎಡವಿದ್ದರು, ಅಲ್ಲದೆ ಟ್ವೆಂಟಿ-20 ಸರಣಿಯಲ್ಲಿ ಅದೇ ಕಳಪೆ ಪ್ರದರ್ಶನ ಮುಂದುವರೆಸಿದಾಗ ವಿಶ್ವಕಪ್ ವಿಜೇತ ನಾಯಕ ಕಪಿಲ್‍ದೇವ್, ವೇಗಿ ವೆಂಕಟೇಶ್ ಪ್ರಸಾದ್ ಸೇರಿದಂತೆ ಹಲವು ಕ್ರಿಕೆಟ್ ದಿಗ್ಗಜರು ತಂಡದ ಹಿತದೃಷ್ಟಿಯಿಂದಾಗಿ ಕೊಹ್ಲಿಯನ್ನು ಕೈಬಿಡುವುದೇ ಲೇಸು ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಆದರೆ ಕ್ರಿಕೆಟ್ ರಂಗದಲ್ಲಿ ಏಳು ಬೀಳುಗಳು ಸಹಜ, ಕಳಪೆ ಪ್ರದರ್ಶನ ತೋರಿದ್ದ ಅನೇಕ ಆಟಗಾರರೇ ತಂಡಕ್ಕೆ ಆಸರೆಯಾದ ನಿದರ್ಶನಗಳು ಸಾಕಷ್ಟಿವೆ, ವಿರಾಟ್ ಕೊಹ್ಲಿ ಕೂಡ ಮುಂದೆ ಅಂತಹವರ ಸಾಲಿಗೆ ಸೇರುವ ಆಟಗಾರನೇ ಒಂದೆರಡು ಪಂದ್ಯಗಳಲ್ಲಿ ಮಿಂಚಿ ಮತ್ತೆ ಲಯ ಕಂಡುಕೊಂಡರೆ ಕೊಹ್ಲಿ ಅಪಾಯಕಾರಿ ಆಟಗಾರ ನಾಗುತ್ತಾರೆ ಆದ್ದರಿಂದ ಅವರಿಗೆ ಮತ್ತಷ್ಟು ಅವಕಾಶಗಳು ಕೊಡು ವುದು ಒಲಿತು ಎಂದು ಭಾರತದ ಮಾಜಿ ಆಟಗಾರ ರಾದ ಸುನೀಲ್ ಗವಾಸ್ಕರ್, ಆಕಾಶ್ ಚೋಪ್ರಾ, ಇಂಗ್ಲೆಂಡ್ ಆಟಗಾರರಾದ ಕೇವಿನ್ ಪೀಟರ್‍ರ್ಸನ್ ಅವರು ಕೂಡ ಕೊಹ್ಲಿ ಪರ ಬ್ಯಾಟಿಂಗ್ ನಡೆಸಿದ್ದಾರೆ.
ಅವರ ಮಾತು ಕೂಡ ಅಕ್ಷರಶಃ ನಿಜ ತಮ್ಮ ಬ್ಯಾಟಿಂಗ್ ವೈಭವದಿಂದಲೇ ಕೊಹ್ಲಿ ಭಾರತಕ್ಕೆ ಹಲವು ಸರಣಿಗಳನ್ನು ಗೆದ್ದುಕೊಟ್ಟಿದ್ದಾರೆ, ಈಗಿರುವ ತಮ್ಮ ಫಾರ್ಮ್‍ನಿಂದ ಹೊರ ಬಂದು ಗತಕಾಲದ ಬ್ಯಾಟಿಂಗ್ ವೈಭವ ಮೆರೆದರೆ ಭಾರತ ತಂಡವು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಚುಟುಕು ವಿಶ್ವಕಪ್ ಹಾಗೂ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಅನ್ನು ಭಾರತ ಜಯಿಸುವುದೇ ಅನುಮಾನವೇ ಬೇಡ.
ಕೊಹ್ಲಿ ಅನುಭವಿಸುತ್ತಿರುವ ಈ ಸಮಸ್ಯೆಯನ್ನೇ ಬಿಸಿಸಿಐ ಅಧ್ಯಕ್ಷ ಸೌರವ್‍ಗಂಗೂಲಿ, ಅಶೀಶ್ ನೆಹ್ರಾ, ಜಹೀರ್‍ಖಾನ್ ಕೂಡ ಅನುಭವಿಸಿದ್ದರೂ ಆದರೆ 2011ರ ವಿಶ್ವಕಪ್‍ನಲ್ಲಿ ಭಾರತ ವಿಶ್ವ ಚಾಂಪಿಯನ್ ಆಗುವಲ್ಲಿ ನೆಹ್ರಾ ಹಾಗೂ ಜಹೀರ್‍ಖಾನ್‍ರ ಪಾತ್ರ ಅಗಾಧವಾಗಿತ್ತು.
ಕ್ಯಾಪ್ಟನ್ ಬೌಲರ್ ನೆಹ್ರಾ:
ಭಾರತ ತಂಡ ಕಂಡ ಶ್ರೇಷ್ಠ ವೇಗಿಗಳಲ್ಲಿ ಅಶಿಶ್ ನೆಹ್ರಾ ಕೂಡ ಒಬ್ಬರು, ಆದರೆ ಸತತ ಗಾಯದಿಂದಾಗಿ ಕಳಪೆ ಪ್ರದರ್ಶನ ನೀಡಿ ತಂಡದಿಂದ ಹೊರಗುಳಿದಿದ್ದರೂ, ನಾಯಕನ ಆಟಗಾರ ಎಂಬ ಖ್ಯಾತಿ ಹೊಂದಿದ್ದ ನೆಹ್ರಾ 2011ರ ವಿಶ್ವಕಪ್‍ನಲ್ಲಿ ಸ್ಥಾನ ಪಡೆದು ಅಚ್ಚರಿ ಮೂಡಿಸಿದರಲ್ಲದೆ, ಉತ್ತಮ ಪ್ರದರ್ಶನ ನೀಡುವ ಮೂಲಕ ಧೋನಿ ಬಳಗ ವಿಶ್ವಕಪ್ ಗೆಲ್ಲುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು.
ವಿಶ್ವಕಪ್ ವೀರ ಜಹೀರ್:
ಭಾರತ ತಂಡದ ಮತ್ತೊಬ್ಬ ವೇಗಿ ಜಹೀರ್‍ಖಾನ್ ಕೂಡ ಸತತ ವೈಫಲ್ಯದಿಂದ ತಂಡದಿಂದ 2004-05ರಲ್ಲಿ ನಡೆದ ಬಹಳಷ್ಟು ಪಂದ್ಯಗಳಿಂದ ಹೊರಗುಳಿದಿದ್ದರಾದರೂ ರಣಜಿ ಸೇರಿದಂತೆ ಕೆಲವು ಸ್ಥಳೀಯ ಟೂರ್ನಿಗಳಲ್ಲಿ ಗಮನ ಸೆಳೆದು ಮತ್ತೆ ರಾಷ್ಟ್ರೀಯ ತಂಡಕ್ಕೆ ಮರಳಿದ ನಂತರ ಭಾರತದ ಪ್ರಮುಖ ಆಟಗಾರರಾಗಿ ಬೆಳೆದರು, 2009ರಲ್ಲಿ ಟೀಂ ಇಂಡಿಯಾ ಟೆಸ್ಟ್‍ನಲ್ಲಿ ನಂ.1 ಪಟ್ಟಕ್ಕೇರಲು ಜಹೀರ್‍ಖಾನ್ ಪಾತ್ರ ಅಪಾರವಾಗಿತ್ತು. ನಂತರ 2011ರಲ್ಲಿ ನಡೆದ ಏಕದಿನ ವಿಶ್ವಕಪ್‍ನಲ್ಲಿ ಗುರುತಿಸಿಕೊಂಡ ಜಹೀರ್‍ಖಾನ್ ಎದುರಾಳಿ ಬ್ಯಾಟ್ಸ್‍ಮನ್‍ಗಳಿಗೆ ಲಗಾಮು ಹಾಕುವ ಮೂಲಕ ಧೋನಿ ಬಳಗ ವಿಶ್ವ ಚಾಂಪಿಯನ್ ಆಗುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು.
ವಿಂಡೀಸ್‍ಗೆ ಚಾಂಪಿಯನ್ ಪಟ್ಟ ದಕ್ಕಿಸಿಕೊಟ್ಟ ಸ್ಯಾಮುಯಲ್ಸ್:
ಎರಡು ಬಾರಿ ಏಕದಿನ ಚಾಂಪಿ ಯನ್ ಆಗಿದ್ದ ವೆಸ್ಟ್ ಇಂಡೀಸ್‍ಗೆ ಚೊಚ್ಚಲ ಟ್ವೆಂಟಿ-20 ವಿಶ್ವಕಪ್ ಗೆದ್ದುಕೊಡುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಮ್ಯಾರೋನ್ ಸ್ಯಾಮುಯಲ್ಸ್ ಕೂಡ ತಮ್ಮ ವಿವಾದ ಹಾಗೂ ಕಳಪೆ ಪ್ರದರ್ಶನದಿಂದ ತಂಡದಿಂದ ಹೊರಗುಳಿದಿದ್ದವರೇ. ತಮ್ಮ ವಿವಾದಾತ್ಮಕ ಬೌಲಿಂಗ್‍ನಿಂದ ಐಸಿಸಿಯಿಂದ ಬ್ಯಾನ್ ಆಗಿದ್ದ ಸ್ಯಾಮುಯಲ್ಸ್ 2014ರ ಚುಟುಕು ವಿಶ್ವಕಪ್‍ನಲ್ಲಿ ಸೋಟಕ ಆಟ ಪ್ರದರ್ಶಿಸಿ ಕೆರಿಬಿಯನ್ ತಂಡಕ್ಕೆ ಚೊಚ್ಚಲ ಚುಟುಕು ವಿಶ್ವಕಪ್ ಮುಕುಟವನ್ನು ದಕ್ಕಿಸಿಕೊಟ್ಟಿದ್ದರು.
ಗಂಗೂಲಿಗೂ ಕಾಡಿತ್ತು ವೈಫಲ್ಯ ಭೂತ:
ಭಾರತ ತಂಡದ ಯಶಸ್ವಿ ನಾಯಕರಾಗಿ ಗುರುತಿಸಿಕೊಂಡಿದ್ದ ಈಗಿನ ಬಿಸಿಸಿಐ ಅಧ್ಯಕ್ಷ ಸೌರವ್‍ಗಂಗೂಲಿ ಅವರು ಕೂಡ ವೈಫಲ್ಯದ ಭೂತದ ಕಾಟಕ್ಕೆ ಒಳಗಾಗಿದ್ದರು. 2003ರ ವಿಶ್ವಕಪ್‍ನ ನಂತರ ನಾಯಕತ್ವ ತ್ಯಜಿಸಿದ ಸೌರವ್‍ರನ್ನು ಕೆಲವು ಸರಣಿಗಳಿಂದ ಹೊರಗಿಡಲಾಗಿತ್ತು, ಆಗ ದಾದಾ ಅಭಿಮಾನಿಗಳು ದೇಶದಾದ್ಯಂತ ಪ್ರತಿಭಟನೆ ನಡೆಸಿದ್ದರು. ರಣಜಿ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ ಭಾರತ ತಂಡಕ್ಕೆ ಮರಳಿದ ಸೌರವ್ ಗಂಗೂಲಿ ನಂತರ ತಮ್ಮ ಸೋಟಕ ಬ್ಯಾಟಿಂಗ್‍ನಿಂದ ತಂಡಕ್ಕೆ ಆಸರೆಯಾದರು. 2007ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ತಮ್ಮ ಜೀವನ ಶ್ರೇಷ್ಠ 239 ರನ್‍ಗಳನ್ನು ಗಳಿಸಿ ಗಮನ ಸೆಳೆದರು.
ಆಸ್ಟ್ರೇಲಿಯಾದ ಶ್ರೇಷ್ಠ ಆಟಗಾರ ಬ್ರಾಡ್ ಕೂಡ ವೈಫಲ್ಯದ ಸಮಸ್ಯೆ ಎದುರಿಸಿದರೂ ಕೂಡ 2012 ಹಾಗೂ 2014ರ ಚುಟುಕು ವಿಶ್ವಕಪ್‍ನಲ್ಲಿ ಉತ್ತಮ ಆಟ ಪ್ರದರ್ಶಿಸಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದರು.
ಈಗ ವಿರಾಟ್ ಕೊಹ್ಲಿ ಕೂಡ ವೈಫಲ್ಯತೆ ಅನುಭವಿಸುತ್ತಿದ್ದರೂ ಕೂಡ ಮತ್ತೆ ತಮ್ಮ ಬ್ಯಾಟಿಂಗ್ ವೈಭವ ಮೆರೆದು ಭಾರತಕ್ಕೆ ಚುಟುಕು ಹಾಗೂ ಏಕದಿನ ವಿಶ್ವಕಪ್ ಗೆದ್ದುಕೊಡುವಲ್ಲಿ ಪಾತ್ರ ವಹಿಸಲಿ, ಇಲ್ಲದಿದ್ದರೆ ಯುವ ಆಟಗಾರರ ಅಬ್ಬರದ ಅಲೆಯಲ್ಲಿ ವಿರಾಟ್ ಕೊಹ್ಲಿ ಅವಕಾಶ ಕಳೆದುಕೊಳ್ಳುವುದು ಖಚಿತ. ಇನ್ನಾದರೂ ವಿರಾಟ್ ಕೊಹ್ಲಿ , ಮಾಸ್ಟರ್ ಬ್ಲಸ್ಟರ್ ಸಚಿನ್ ತೆಂಡೂಲ್ಕರ್‍ರಂತೆ ಟೀಕಾಕಾರರಿಗೆ ತಮ್ಮ ಬ್ಯಾಟಿಂಗ್‍ನಿಂದ ತಕ್ಕ ಉತ್ತರ ನೀಡುವಂತಾಗಲಿ.