ಬೇಲೂರು,ಜು.18- ಪಟ್ಟಣದ ಇತಿಹಾಸ ಪ್ರಸಿದ್ದ ವಿಷ್ಣು ಸಮುದ್ರಕೆರೆ ತುಂಬಿ ಕೋಡಿ ಬಿದ್ದಿದ್ದು, ಬಂಡೆಕಲ್ಲಿನ ಮೇಲಿನಿಂದ ನೀರು ಹರಿಯುತ್ತಿರುವ ದೃಶ್ಯ ನೋಡುಗರ ಕಣ್ಮನ ಸೆಳೆಯುತ್ತಿದೆ.
ಕೆಲ ದಿನಗಳಿಂದ ನಿರಂತರವಾಗಿ ತಾಲೂಕಿನಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅದರಲ್ಲೂ ಮಲೆನಾಡು ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿರುವ ಕಾರಣ ಆ ಭಾಗದ ನೀರೆಲ್ಲ ಹಳ್ಳ ಕೊಳ್ಳಗಳ ಮೂಲಕ ಪಟ್ಟಣ ಸಮೀಪದ ವಿಷ್ಣು ಸಮುದ್ರಕೆರೆಗೆ ಹರಿದು ಬರುತ್ತಿರುವುದರಿಂದ ಕೆರೆ ಸಂಪೂರ್ಣ ಭರ್ತಿಯಾಗಿ ಕೋಡಿ ಬಿದ್ದಿದೆ.
ಕೋಡಿ ಬಿದ್ದಿರುವ ರಭಸಕ್ಕೆ ನೀರು ಹಿಂದುರುದ್ರಭೂಮಿ ಪಕ್ಕದಲ್ಲಿನ ಬಂಡೆಗಳ ಮೇಲಿನಿಂದ ಹಾಲಿನ ನೊರೆಯಂತೆ ಕೆಳಕ್ಕೆ ಧುಮ್ಮಿಕ್ಕಿ ಹರಿಯುತ್ತಿರುವ ದೃಶ್ಯ ನೋಡುಗರ ಕಣ್ಮನ ಸೆಳೆಯುತ್ತಿದೆ. ಅಲ್ಲದೆ, ಕೋಡಿ ಬಿದ್ದಿರುವ ವಿಷಯ ತಿಳಿದು ನೋಡಲು ಪಟ್ಟಣದ ಜನರು ಕೆಸರು ರಸ್ತೆಯಲ್ಲೆ ತೆರಳಿ ವೀಕ್ಷಿಸುತ್ತಿರುವುದಲ್ಲದೆ, ನೀರಿಗಿಳಿದು ಸೆಲಿ ತೆಗೆದು ಕೊಳ್ಳುವ ಮೂಲಕ ಸಂಭ್ರಮ ಪಡುತಿದ್ದ ದೃಶ್ಯಗಳು ಕಂಡು ಬಂದವು.