ಮೈಸೂರು,ಫೆ.19- ಕೆಂಪುಕೋಟೆಯಲ್ಲಿ ಕೇಸರಿ ಧ್ವಜ ಹಾರಿಸುವ ಕುರಿತು ಹೇಳಿಕೆ ನೀಡಿದ ಸಚಿವ ಕೆ.ಎಸ್. ಈಶ್ವರಪ್ಪ ರಾಜೀನಾಮೆ ನೀಡುವಂತೆ ಆಗ್ರಹಿಸಿ ಕಾಂಗ್ರೆಸ್ ಶಾಸಕರು ನಡೆಸುತ್ತಿರುವ ಪ್ರತಿಭಟನೆಗೆ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಕಿಡಿಕಾರಿದರು.
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಸಚಿವ ಕೆ.ಎಸ್. ಈಶ್ವರಪ್ಪ ಪರ ಬ್ಯಾಟ್ ಬೀಸಿದ್ದು, ಈಶ್ವರಪ್ಪ ನೀಡಿರುವ ಹೇಳಿಕೆಯ ಬಗ್ಗೆ ಸ್ಪಷ್ಟತೆ ಇಲ್ಲ. ಅವರು ಯಾವ ಅರ್ಥದಲ್ಲಿ ಏನು ಹೇಳಿದ್ದಾರೋ ತಿಳಿಯಲಿ. ಆಮೇಲೆ ಉಳಿದಿದ್ದು ಚರ್ಚೆ ಆಗಲಿ. ಒಂದು ಹೇಳಿಕೆ ಹಿಡಿದುಕೊಂಡು ಕಾಂಗ್ರೆಸ್ ಸದನದ ಸಮಯ ಹಾಳುಮಾಡಿದ್ದು ತಪ್ಪು ಎಂದರು.
ಸಿದ್ದರಾಮಯ್ಯನಂತಹ ಹಿರಿಯರು ಇಂತಹ ನಡುವಳಿಕೆ ಪ್ರದರ್ಶಿಸಬಾರದಿತ್ತು ಎಂದು ವಾಗ್ದಾಳಿ ನಡೆಸಿದ ಅವರು, ಸದನದ ಒಳಗಡೆ ತಪ್ಪುಗಳು ಆಗುತ್ತಿರುತ್ತವೆ. ಅದಕ್ಕೆ ಕ್ಷಮೆ ಕೇಳಿ ಮುಂದುವರೆದಿರುವ ಅನೇಕ ಉದಾಹರಣೆಗಳಿವೆ. ಈಗಲೂ ಅಂತಹ ನಡವಳಿಕೆಗಳು ಪ್ರದರ್ಶನವಾಗಬೇಕು ಎಂದು ಹೇಳಿದರು.
ಮುಖ್ಯಮಂತ್ರಿ, ಎರಡೂ ಸದನಗಳ ನಾಯಕರು ಹಾಗೂ ಸ್ಪೀಕರ್‍ಗಳು ತುರ್ತಾಗಿ ಸಭೆ ನಡೆಸಬೇಕು. ಈ ಮೂಲಕ ಜನರ ಸಮಸ್ಯೆಗಳ ಚರ್ಚೆಗೆ ಸದನದಲ್ಲಿ ಅವಕಾಶ ನೀಡಬೇಕು. ಮುಂದೆ ಚುನಾವಣೆ ಇರುವುದರಿಂದ ಓಟ್ ಬ್ಯಾಂಕ್‍ಗಾಗಿ ಈ ರೀತಿ ಮಾಡ್ತಿದ್ದಾರೆ. ಪ್ರತಿಭಟನೆ ಯಾವುದಕ್ಕೂ ಪರಿಹಾರ ಅಲ್ಲ ಎಂದು ತಿಳಿಸಿದರು.
