ನ್ಯಾಯಾಲಯದ ತೀರ್ಪು ನಮ್ಮ ಮುಂದಿರುವ ಏಕೈಕ ಪರಿಹಾರ : ಕಾಗೇರಿ

Social Share

ಬೆಂಗಳೂರು.ಫೆ.12- ಶಾಲಾ ಕೊಠಡಿಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವ ವಿಷಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆದಿದೆ. ನ್ಯಾಯಾಲಯ ಏನು ತೀರ್ಪು ಕೊಡುತ್ತದೆಯೋ ಅದನ್ನು ಎಲ್ಲರೂ ಪಾಲನೆ ಮಾಡುವುದೇ ನಮ್ಮ ಮುಂದಿರುವ ಏಕೈಕ ಪರಿಹಾರ ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಇದರ ಬಗ್ಗೆ ಪರ, ವಿರೋಧ ಹೇಳಿಕೆಗಳು ಬಂದಿದ್ದರಿಂದ ರಾಷ್ಟ್ರ ಮಟ್ಟದಿಂದ ಹಿಡಿದು ಅಂತಾರಾಷ್ಟ್ರೀಯ ಮಟ್ಟದಲ್ಲೂ ಸುದ್ದಿಯಾಗಿದೆ. ರಾಜ್ಯ ಉಚ್ಛ ನ್ಯಾಯಾಲಯ ನೀಡಿರುವ ಮಧ್ಯಂತರ ತೀರ್ಪಿನಂತೆ ನಾವು ನಡೆದುಕೊಳ್ಳೋಣ ಎಂದು ಮನವಿ ಮಾಡಿದರು.
ದೇಶದ ಪ್ರಜೆಗಳಾಗಿ ನಾವು ನ್ಯಾಯಾಲಯದ ತೀರ್ಪಿಗೆ ಬದ್ದರಾಗಬೇಕು. ಅವರು ಏನು ತೀರ್ಪು ನೀಡುತ್ತಾರೋ ಅದನ್ನು ಗೌರವಿಸೋಣ. ಈಗಾಗಲೇ ಕೆಲವರು ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳುವ ಮಟ್ಟಕ್ಕೆ ಹೋಗಿದ್ದಾರೆ. ಮುಂದೆ ಇದು ಇನ್ನು ಯಾವ ಸ್ಥಿತಿಗೆ ಹೋಗುತ್ತದೆಯೋ ಗೊತ್ತಿಲ್ಲ. ಇದಕ್ಕೆ ಯಾರೊಬ್ಬರೂ ಅವಕಾಶ ಕೊಡಬಾರದೆಂದು ಸಲಹೆ ಮಾಡಿದರು.
ಸೋಮವಾರದಿಂದ ವಿಧಾನಮಂಡಲದ ಜಂಟಿ ಅಧಿವೇಶನ ಆರಂಭವಾಗಲಿದ್ದು, ಶಿಷ್ಟಾಚಾರದಂತೆ ರಾಜ್ಯಪಾಲರಾದ ತಾವರ್ ಚಂದ್ ಗೆಲ್ಹೋಟ್ ಅವರು 11 ಗಂಟೆಗೆ ಅವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದರು. ಸಂಪ್ರದಾಯದಂತೆ ರಾಜ್ಯಪಾಲರು ವಿಧಾನಸೌಧದ ಗ್ರಾಂಡ್‍ಸ್ಟೆಪ್‍ನಿಂದ ಸದನದ ಒಳಗೆ ಪ್ರವೇಶಿಸುತ್ತಾರೆ. ಈ ಪದ್ದತಿ ಹಲವಾರು ವರ್ಷಗಳಿಂದ ಇತ್ತು. ಈವಾಗ ಮತ್ತೆ ಆರಂಭಿಸಲಾಗಿದೆ ಎಂದು ಹೇಳಿದರು.
ರಾಜ್ಯಪಾಲರ ಭಾಷಣದ ಬಳಿಕ ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ನಡೆಯಲಿದೆ. ಬಳಿಕ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಚರ್ಚೆ ನಡೆಯಲಿದೆ ಎಂದು ಮಾಹಿತಿ ನೀಡಿದರು. ಈವರೆಗೆ ನನ್ನ ಕಚೇರಿಗೆ ಎರಡು ವಿಧೇಯಕಗಳು ತಲುಪಿವೆ. ಉಳಿದ ವಿಧೇಯಕಗಳನ್ನು ಸದನ ಪ್ರಾರಂಭವಾಗುವ ಮೊದಲೇ ಕೊಡಬೇಕೆಂದು ಸೂಚಿಸಲಾಗಿದೆ. ಈವರೆಗೆ ಒಟ್ಟು 2062 ಪ್ರಶ್ನೆಗಳು ಬಂದಿವೆ ಎಂದು ವಿವರಿಸಿದರು.
ಜಂಟಿ ಅಧಿವೇಶನವನ್ನು ವ್ಯವಸ್ಥಿತವಾಗಿ ನಡೆಸಲು ಪೂರ್ವ ಸಿದ್ದತೆ ಮಾಡಲಾಗಿದೆ. ಸದನ ನಡೆಯುವ ಹಾಲ್‍ನ್ನು ಸ್ಯಾನಿಟೈಸ್ ಮಾಡಲಾಗಿದೆ. ರಾಜ್ಯದಲ್ಲಿ ಕೋವಿಡ್ ಹೆಚ್ಚಾದ ಕಾರಣ ಈ ಹಿಂದಿನ ಅಧಿವೇಶನವನ್ನು ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ಕೊಟ್ಟಿಲ್ಲ. ಈ ಬಾರಿ ಅವಕಾಶ ಮಾಡಿಕೊಡುತ್ತೇವೆ ಎಂದು ಸ್ಪಷ್ಟಪಡಿಸಿದರು. ಪ್ರತಿಯೊಬ್ಬರು ಕೊರೊನಾ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು.
ಸದಸ್ಯರು ಸದನದಲ್ಲಿ ಭಾಗವಹಿಸಬೇಕು, ಬೆಳಗಾವಿ ಅಧಿವೇಶನದಲ್ಲಿ ನಾಲ್ಕೈದು ಶಾಸಕರು ಬಿಟ್ಟರೆ ಬಹುತೇಕ ಎಲ್ಲರೂ ಭಾಗವಹಿಸಿದ್ದರು. ಇದನ್ನು ನಾನು ಖುಷಿಯಿಂದ ಹೇಳಿದೆ. ಅದೇ ರೀತಿ ಈ ಬಾರಿಯೂ ಎಲ್ಲ ಸದಸ್ಯರು ಭಾಗವಹಿಸುತ್ತಾರೆ ಎಂಬ ನಂಬಿಕೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಅಧಿವೇಶನದಲ್ಲಿ ಹೆಚ್ಚಿನ ಬದಲಾವಣೆಯನ್ನು ಮಾಡಿಲ್ಲ. ಮಾಧ್ಯಮ ಸ್ನೇಹಿತರಿಗೆ ಪ್ರತಿ ಬಾರಿ ಏನು ಇರುತ್ತಿತ್ತು. ಅದು ಮುಂದುವರೆಯಲಿದೆ. ನನ್ನಿಂದ ಯಾವುದೇ ಬದಲಾವಣೆ ಇರುವುದಿಲ್ಲ. ಎಂದಿನಂತೆ ಎಲ್ಲವೂ ಯಥಾಸ್ಥಿತಿಯಲ್ಲೇ ಇರಲಿದೆ. ಎಲ್ಲವನ್ನು ನಮ್ಮ ವೆಬ್‍ಸೈಟ್‍ನಲ್ಲಿ ತಲುಪಿಸುತ್ತೇವೆ ಎಂದರು.
#ಕಣ್ಣೀರಿಟ್ಟ ಸ್ಪೀಕರ್:
ಇನ್ನು ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ಸಭಾಧ್ಯಕ್ಷ ಕಾಗೇರಿ ಅವರು ಪ್ರಸಂಗವೂ ಜರುಗಿತು. ಚುನಾವಣಾ ಸುಧಾರಣೆಗೆ ಸಂಬಂಧಿಸಿದಂತೆ ಚರ್ಚೆ ನಡೆಸುವ ವಿಚಾರವಾಗಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಭಾವುಕರಾಗಿ ಕಣ್ಣೀರಿಟ್ಟರು. ನಾವು ಸೀಮಿತವಾದ ಚೌಕಟ್ಟಿನಲ್ಲಿ ನಮ್ಮನ್ನು ಕಟ್ಟಿ ಹಾಕೊಂಡಿದ್ದೇವೆ. ಸೃಷ್ಟಿಯ ಸತ್ಯ ಅರಿತುಕೊಳ್ಳಬೇಕಾಗಿದೆ. ಬ್ರಿಟೀಷ್ ಶಿಕ್ಷಣ ಪದ್ದತಿಯಿಂದಾಗಿ ಜೀವನದ ಕಲ್ಪನೆಗಳು ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಾರ್ಥಕತೆಯ ಭಾವವೇ ಇಲ್ಲದಂತಾಗಿದೆ.ಆ ನಂಬಿಕೆಗಳು ಹಾಗೂ ವಿಶ್ವಾಸ ಬರದೇ ಹೋದಲ್ಲಿ ವ್ಯವಸ್ಥೆ ನಡೆಸಲು ಸಾಧ್ಯವಿಲ್ಲ. ಯಾವ ವ್ಯವಸ್ಥೆಯಲ್ಲಿ ನಾವು ಇದ್ದೇವೋ ಅದನ್ನು ಸರಿಯಾಗಿ ನಡೆಸಬೇಕಾದಲ್ಲಿ ಜ್ಞಾನದ ವಿಸ್ತಾರ ಆಗಬೇಕು. ಆ ಪ್ರಯತ್ನ ನಡೆಯಬೇಕು ಎಂದು ಸ್ಪೀಕರ್ ಭಾವುಕರಾಗಿ ಕಣ್ಣೀರು ಹಾಕಿದರು.

Articles You Might Like

Share This Article