ಬ್ರಿಟೀಷ್ ಮನಸ್ಥಿತಿಯಲ್ಲಿರುವ ಅಧಿಕಾರಿಗಳು : ಚಾಟಿ ಬೀಸಿದ ಕಾಗೇರಿ

Social Share

ಬೆಂಗಳೂರು, ಫೆ.14- ಕುಡಿಯುವ ನೀರು ಯೋಜನೆಯನ್ನು ವಿಳಂಬ ಮಾಡುತ್ತಿರುವ ಅಧಿಕಾರಿಗಳು ಇನ್ನೂ ಬ್ರಿಟಿಷ್ ಆಡಳಿತ ವ್ಯವಸ್ಥೆಯ ಮನಸ್ಥಿತಿಯಲ್ಲಿದ್ದಾರೆ ಎಂದು ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಚಾಟಿ ಬೀಸಿದ ಪ್ರಸಂಗ ವಿಧಾನಸಭೆಯಲ್ಲಿಂದು ಜರುಗಿತು.

ಪ್ರಶ್ನೋತ್ತರ ಅವಯಲ್ಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಗಾಮನಹಳ್ಳಿ ಹಾಗೂ ಇತರೆ 16 ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆ ಮಂಜೂರಾಗಿದ್ದರೂ ಯೋಜನೆ ವಿಳಂಬವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ಮಧ್ಯೆ ಪ್ರವೇಶಿಸಿದ ಸಭಾಧ್ಯಕ್ಷರು, ನಮ್ಮ ಅಧಿಕಾರಿಗಳು ಈಗಲೂ ಬ್ರಿಟಿಷ್ ಮನಸ್ಥಿತಿಯಲ್ಲೇ ಇದ್ದಾರೆ. ನಾನು ಎಲ್ಲರನ್ನೂ ಕೆಟ್ಟವರು ಎಂದು ಹೇಳುವುದಿಲ್ಲ. ಕೆಲವು ಅಧಿಕಾರಿಗಳು ಒಳ್ಳೆಯವರು ಇದ್ದಾರೆ. ಪ್ರತಿಯೊಂದು ಯೋಜನೆಗೂ ಕಾನೂನು ನೆಪ ಮಾಡಿ ವಿಳಂಬ ಮಾಡುವುದು ಅವರಿಗೆ ಕಾಯಕವಾಗಿದೆ. ಕಿವಿ ಹಿಂಡದೇ ಯಾವುದೇ ಕೆಲಸವಾಗುವುದಿಲ್ಲ. ಮೊದಲು ಮನಸ್ಥತಿ ಬದಲಾಯಿಸಿಕೊಳ್ಳಬೇಕು ಎಂದು ಅಸಮಾಧಾನದಿಂದಲೇ ನುಡಿದರು.

ನ್ಯಾಯಾಲಯದ ಆದೇಶವಿದೆ. ಕಾನೂನು ಹೀಗೆ ಹೇಳುತ್ತದೆ. ನಾಳೆ ನಮ್ಮ ಸೇವಾ ಅವಗೆ ಏನಾದರೂ ಅಡ್ಡಿಯಾಗಬಹುದು ಎಂಬ ಕಾರಣದಿಂದ ವಿಳಂಬ ಮಾಡುತ್ತಾರೆ. ಇದು ಕುಡಿಯುವ ನೀರಿನ ಯೋಜನೆ. ಟ್ಯಾಂಕ್ ನಿರ್ಮಿಸಿ ಪೈಪ್ಲೈನ್ ಮಾಡಿಕೊಡಲು ಇರುವ ಸಮಸ್ಯೆಯಾದರೂ ಏನು? ನೀವು ಅಧಿಕಾರಿಗಳ ಕಿವಿ ಹಿಂಡದಿದ್ದರೆ, ಎಲ್ಲಾ ಯೋಜನೆಗಳು ಇದೇ ರೀತಿ ಆಗುತ್ತವೆ ಎಂದು ಸಚಿವರನ್ನುದ್ದೇಶಿಸಿ ಹೇಳಿದರು.

ಈ ವೇಳೆ ಕಾಂಗ್ರೆಸ್ನ ಹಿರಿಯ ಸದಸ್ಯ ಆರ್.ವಿ. ದೇಶಪಾಂಡೆ ಅವರು, ಕುಡಿಯುವ ನೀರಿನ ಯೋಜನೆಗೆ ಅರಣ್ಯ, ಕಂದಾಯ ಸೇರಿದಂತೆ ಯಾವುದೇ ಇಲಾಖೆಗಳು ವಿಳಂಬ ಮಾಡದಂತೆ ಆದೇಶ ನೀಡಲಾಗಿದೆ. ನ್ಯಾಯಾಲಯದ ಆದೇಶವಿದ್ದರೂ ಅಧಿಕಾರಿಗಳು ಮಾತ್ರ ಬದಲಾಗುವುದಿಲ್ಲ. ಮಾನವೀಯತೆ ದೃಷ್ಟಿಯಿಂದ ಇಂತಹ ಯೋಜನೆ ಮಾಡಬೇಕು ಎಂದು ಸಲಹೆ ಮಾಡಿದರು.

ಆಗ ಕಾನೂನು ಸಚಿವ ಮಾಧುಸ್ವಾಮಿ ಅವರು, ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಗಾಮನಹಳ್ಳಿ ಹಾಗೂ ಇತರೆ 16 ಗ್ರಾಮಗಳಿಗೆ ಅರಣ್ಯ ಇಲಾಖೆ ಅನುಮೋದನೆ ನೀಡಿದ್ದು, ಆದಷ್ಟು ಶೀಘ್ರ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು. ಈಗ ಅರಣ್ಯ ಇಲಾಖೆಯೇ ಅನುಮೋದಿಸಿರುವುದರಿಂದ ವಿಳಂಬವಾಗುವುದಿಲ್ಲ ಎಂದು ಭರವಸೆ ನೀಡಿದರು.

ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ನನ್ನ ಕ್ಷೇತ್ರ 52 ಗ್ರಾಮಗಳ ಕುಡಿಯುವ ನೀರಿನ ಯೋಜನೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮಂಜೂರು ಮಾಡಿದ್ದರು. ಈಗಾಗಲೇ ಪೈಪ್ಲೈನ್ ಮಾಡಿದ್ದರೂ ಒಂದು ಟ್ಯಾಂಕ್ ನಿರ್ಮಿಸಲು ಅವಕಾಶವಿಲ್ಲ. ಹೀಗಾದರೆ ಜನರಿಗೆ ನಾವು ಏನು ಉತ್ತರ ಕೊಡಬೇಕು ಎಂದು ಪ್ರಶ್ನಿಸಿದರು.

Articles You Might Like

Share This Article