ತೀವ್ರಗೊಳ್ಳಲಿದೆ ಒಕ್ಕಲಿಗರ ಮೀಸಲಾತಿ ಹೋರಾಟ

ಬೆಂಗಳೂರು, ಫೆ.27- ಒಕ್ಕಲಿಗ ಮೀಸಲಾತಿ ಹೋರಾಟವನ್ನು ತೀವ್ರಗೊಳಿ ಸುವ ಕುರಿತು ಮಹತ್ವದ ಸಭೆ ನಗರದಲ್ಲಿ ನಡೆಯಿತು.ಖಾಸಗಿ ಹೋಟೆಲ್‍ನಲ್ಲಿ ಸಭೆ ಸೇರಿದ ಒಕ್ಕಲಿಗ ಸಮುದಾಯದ ಗಣ್ಯರು, ವಿವಿಧ ಸಂಘ, ಸಂಸ್ಥೆಗಳ ಮುಖಂಡರು, ಸಮುದಾಯದ ಹಿರಿಯರು ಮೀಸಲಾತಿ ವಿಚಾರದಲ್ಲಿ ಆಗಿರುವ ಅನ್ಯಾಯದ ಪ್ರಸ್ತಾಪ ಮಾಡಿದರು.

ಈ ಹಿಂದೆ ನಮಗೆ 14 ಪರ್ಸೆಂಟ್ ಮೀಸಲಾತಿ ನೀಡಲಾಗಿತ್ತು. ಆದರೆ ಅದನ್ನು ಗಣನೀಯವಾಗಿ ಈಗ ಶೇ.4ಕ್ಕೆ ಇಳಿಸಲಾಗಿದೆ. ರಾಜ್ಯದಲ್ಲಿರುವ ಒಕ್ಕಲಿಗ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕು. ಸುಮಾರು 90 ಲಕ್ಷಕ್ಕೂ ಹೆಚ್ಚು ಇರುವ ಒಕ್ಕಲಿಗ ಸಮುದಾಯ ಆರ್ಥಿವಾಗಿ ದುರ್ಬಲರಾಗಿದ್ದಾರೆ. ಒಕ್ಕಲುತನವನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವ ಕೆಲವರು ಸೂಕ್ತವಾದಂತಹ ಸ್ಥಾನಮಾನ ಸಿಗದೆ ಮತ್ತು ಅವಕಾಶಗಳು ಸಿಗದೇ ಕಷ್ಟದಲ್ಲಿದ್ದಾರೆ.

ಒಕ್ಕಲಿಗ ಸಮುದಾಯಕ್ಕೆ ನ್ಯಾಯೋಚಿತ ಮೀಸಲಾತಿಗಾಗಿ ಗುರಿಮುಟ್ಟುವವರೆಗೂ ನಮ್ಮ ಹೋರಾಟವನ್ನು ಮುಂದುವರಿಸ ಬೇಕೆಂದು ಒಕ್ಕೊರಲಿನ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಸಭೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾದ ಸಾರಾ ಗೋವಿಂದು ಅವರು ಮಾತನಾಡಿ ಒಕ್ಕಲಿಗರ ಮೀಸಲಾತಿ ಕುರಿತಂತೆ ನಮ್ಮ ನ್ಯಾಯಯುತ ಬೇಡಿಕೆ ರಾಜ್ಯ ಸರ್ಕಾರದ ಮುಂದಿಡಲಾಗಿದೆ. ಶೀಘ್ರದಲ್ಲೇ ಈ ಬಗ್ಗೆ ನಿರ್ಧಾರ ಕೈಗೊಳ್ಳಲು ನಾವು ಎಲ್ಲರೂ ಒಗ್ಗಟ್ಟಾಗಿ ದನಿ ಎತ್ತಬೇಕಾಗಿದೆ ಎಂದು ಪ್ರತಿಪಾದಿಸಿದರು.

ಸಾಹಿತಿ ಮುಕುಂದರಾಜು ಮಾತನಾಡಿ , ಮೀಸಲಾತಿ ಕಡಿತಗೊಳಿಸಿದಾಗಲೇ ನಾವು ಎಚ್ಚೆತ್ತುಕೊಳ್ಳಬೇಕಿತ್ತು. ಈಗಲಾದರೂ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡಬೇಕಾಗಿದೆ. ಈಗಾಗಲೇ ಹಲವು ಸಮುದಾಯಗಳು ತಮ್ಮ ಹೋರಾಟ ಆರಂಭಿಸಿವೆ. ನಾವು ಸರ್ಕಾರದ ಮುಂದೆ ಪ್ರಬಲವಾದ ಬೇಡಿಕೆ ಮಂಡಿಸಬೇಕು. ಇದಕ್ಕಾಗಿ ಹೋರಾಟ ಅನಿವಾರ್ಯ ಎಂದು ಹೇಳಿದರು.
ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿಯ ಪ್ರಧಾನ ಸಂಚಾಲಕರಾದ ಆಡಿಟರ್ ನಾಗರಾಜ್ ಯಲಚವಾಡಿ ಅವರು ಮಾತನಾಡಿ ಈಗಾಗಲೇ ಹಲವು ದಿನಗಳಿಂದ ಒಕ್ಕಲಿಗರಿಗೆ ಮೀಸಲಾತಿ ಕುರಿತಂತೆ ಸಭೆಗಳು ನಡೆದಿವೆ. ಪ್ರಸ್ತುತ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಆಶಯ ಮತ್ತು ಆಶೀರ್ವಾದದಿಂದ ಹೋರಾಟವನ್ನು ತೀವ್ರಗೊಳಿಸಲಾಗುತ್ತಿದೆ.

ನಮಗೆ ಸಿಗಬೇಕಾದ ನ್ಯಾಯವನ್ನು ದೊರಕಿಸಿಕೊಳ್ಳಲು ಎಲ್ಲರ ಸಹಕಾರ ಅಗತ್ಯವಾಗಿದೆ. ನಾವೆಲ್ಲರೂ ಒಗ್ಗಟ್ಟಿನ ಹೋರಾಟ ಮಾಡಬೇಕಾಗಿದೆ ಎಂದು ತಿಳಿಸಿದರು. ಹಳ್ಳಿಕಾರ್ ಸಮುದಾಯದ ಪಟೇಲ್ ಪಾಂಡು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ. ರಂಗನಾಥ, ಒಕ್ಕಲಿಗ ಸಂಘದ ಮಾಜಿ ಕಾರ್ಯಾಧ್ಯಕ್ಷ ಎಂ.ಎ.ಆನಂದ್, ರೆಡ್ಡಿ ಸಂಘದ ಕಾರ್ಯದರ್ಶಿ ಸದಾಶಿವರೆಡ್ಡಿ, ಕೊಡವ ಸಮಾಜದ ರಾಜೇಶ್, ರವಿಶಂಕರ್, ಮಹಿಳಾ ಮುಖಂಡರಾದ ಮಹದೇವಮ್ಮ, ಶೋಭಾ ಆನಂದ್, ಭಾರತಿ ಶಂಕರ್, ಉಮಾ ಬಸುರಾಜ್, ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಗಂಗಹನುಮಯ್ಯ, ರಂಗಸ್ವಾಮಿ ಕನ್ನಡಪರ ಸಂಘಟನೆಗಳ ಮುಖಂಡರಾದ ಮಾಯಣ್ಣ, ಸಿ.ಕೆ.ರಾಮೇಗೌಡ, ದೇವರಾಜ್ ,ಪಾಲಿಕೆ ಮಾಜಿ ಸದಸ್ಯರಾದ ಗಂಗಭೈರಯ್ಯ, ಮೋಹನ್ ಕುಮಾರ್, ಬಿ.ಟಿ.ಶ್ರೀನಿವಾಸ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.

ಮಾ.1ಕ್ಕೆ ಆದಿಚುಂಚನಗಿರಿ ಶ್ರೀಗಳ ನೇತೃತ್ವದಲ್ಲಿ ಸಭೆ
ಒಕ್ಕಲಿಗರ ಮೀಸಲಾತಿ ಕುರಿತಂತೆ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚಿಸಲು ಮಾ.1ರಂದು ವಿವಿ ಪುರಂನಲ್ಲಿರುವ ಕುವೆಂಪು ಕಲಾಕ್ಷೇತ್ರದಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಮಹಾ ಸ್ವಾಮೀಜಿಗಳ ನೇತೃತ್ವದಲ್ಲಿ ಮತ್ತೊಂದು ಸಭೆ ನಡೆಯಲಿದೆ.

ವಿಶ್ವ ಒಕ್ಕಲಿಗರ ಮಠದ ಶ್ರೀ ಕುಮಾರ ಚಂದ್ರಶೇಖರನಾಥ ಮಹಾ ಸ್ವಾಮೀಜಿ, ಪಟ್ಟನಾಯಕನಹಳ್ಳಿ ಮಠದ ಶ್ರೀ ನಂಜಾವಧೂತ ಮಹಾ ಸ್ವಾಮೀಜಿ ಹಾಗೂ ಸಮುದಾಯದ ಪ್ರಮುಖ ಮುಖಂಡರು, ಸಂಘ -ಸಂಸ್ಥೆಗಳ ಪದಾಧಿಕಾರಿಗಳು ರಾಜಕೀಯ ನಾಯಕರು ಮತ್ತು ಗಣ್ಯರು ಸಭೆಯಲ್ಲಿ ಪಾಲ್ಗೊಂಡು ಮೀಸಲಾತಿ ಕುರಿತಂತೆ ಕೈಗೊಳ್ಳಬೇಕಾದ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.