ಬೆಂಗಳೂರು, ಮಾ.14- ಒಂದೆಡೆ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಾಪಿಸಿ ಒಕ್ಕಲಿಗರನ್ನು ಓಲೈಸುವ ಕೆಲಸ ಮಾಡುತ್ತಿರುವ ಬಿಜೆಪಿಗರು, ಇನ್ನೊಂದೆಡೆ ಕೊಲೆಯ ಕಳಂಕವನ್ನು ಮೆತ್ತುವ ಮೂಲಕ ಅದೇ ಒಕ್ಕಲಿಗ ಸಮುದಾಯಕ್ಕೆ ಐತಿಹಾಸಿಕವಾಗಿ ಶಾಶ್ವತ ಕಪ್ಪುಚುಕ್ಕೆ ಮೆತ್ತಲು ಷಡ್ಯಂತ್ರ ರೂಪಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಒಕ್ಕಲಿಗರ ಮೇಲೆ ಬಿಜೆಪಿ ವಕ್ರದೃಷ್ಟಿ ಬೀರಿದೆ. ಅಭಿವೃದ್ಧಿಯ ಮೇಲೆ ಚುನಾವಣೆಯಲ್ಲಿ ಮತ ಕೇಳಬೇಕಿದ್ದ ಬಿಜೆಪಿಯು ಮತ ಫಸಲಿಗೆ ಅಡ್ಡದಾರಿಗಳನ್ನು ಕಂಡುಕೊಂಡು ಸಮುದಾಯ, ಧರ್ಮಗಳ ಜತೆ ಚಲ್ಲಾಟವಾಡುತ್ತಿದೆ. ಸ್ವಾಭಿಮಾನಿ ಒಕ್ಕಲಿಗರ ಆತ್ಮಾಭಿಮಾನವನ್ನು ಕೆಣಕಿ ರಾಜ್ಯ ಬಿಜೆಪಿ ಬಹುದೊಡ್ಡ ತಪ್ಪು ಮಾಡಿದೆ ಎಂದು ಟೀಕಿಸಿದ್ದಾರೆ.
ಮತಕ್ಕಾಗಿ ಮಾನಕ್ಕೂ ಅಂಜದ ಬಿಜೆಪಿ, ಸುಳ್ಳಿನ ಮೂಲಕ ಚುನಾವಣೆ ಗೆಲ್ಲಲು ಹೊರಟಂತಿದೆ. ರೋಡ್ ಶೋ ಮೂಲಕ ಮಂಡ್ಯದ ಜನರಿಗೆ ಮೋಡಿ ಮಾಡುವುದು ಎಂದರೆ ಇದೇನಾ? ಇಂಥ ವಿದ್ರೋಹಿ ಕೃತ್ಯಗಳನ್ನು ಒಕ್ಕಲಿಗರು ಮಾತ್ರವಲ್ಲ, ಸೌಹಾರ್ದತೆಯಿಂದ ರಾಜ್ಯದಲ್ಲಿ ಬಾಳುತ್ತಿರುವ ಯಾವ ಸಮುದಾಯವೂ ಸಹಿಸದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಿಪ್ಪುವನ್ನು ಕೊಂದವರೆಂದು ಚರಿತ್ರೆಯಲ್ಲಿ ಇಲ್ಲದ ಉರಿಗೌಡ, ನಂಜೇಗೌಡರೆಂಬ ಒಕ್ಕಲಿಗ ಕಾಲ್ಪನಿಕ ಹೆಸರುಗಳನ್ನು ಸೃಷ್ಟಿಸಿ ಪ್ರಧಾನಿ ನರೇಂದ್ರಮೋದಿ ರೋಡ್ ಶೋ ನಡೆಸಿದ ಮಹಾದ್ವಾರಕ್ಕೆ ಇಟ್ಟಿದ್ದರು. ಮಂಡ್ಯಕ್ಕೆ ಅದರಲ್ಲೂ ಸಮಸ್ತ ಒಕ್ಕಲಿಗರ ಕುಲಕ್ಕೆ ಮಾಡಿದ ಘೋರ ಅಪಮಾನ ಎಂದು ಕಿಡಿ ಕಾರಿದ್ದಾರೆ.
ಆಸ್ಟ್ರೇಲಿಯಾಕ್ಕೆ ಪರಮಾಣುಚಾಲಿತ ಜಲಾಂತರಗಾಮಿ ನೌಕೆ : ಬಿಡೆನ್
ಮೊದಲೇ ಇದ್ದ ಗುರುಗಳಾದ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ ಹೆಸರನ್ನು ಮುಚ್ಚಿಟ್ಟು, ಅವರ ಜಾಗದಲ್ಲಿ ಈ ಕಾಲ್ಪನಿಕ ಪಾತ್ರಗಳ ಹೆಸರನ್ನು ಹಾಕಿದ ದುರುದ್ದೇಶವೇನು? ಇದು ಪರಮಪೂಜ್ಯರಿಗೆ ಮಾಡಿದ ಅಪಮಾನ ಎಂದು ಆರೋಪಿಸಿದ್ದಾರೆ.
ಹೆಸರು ಬದಲಿಸಿದ ನಂತರ ಸಾರ್ವಜನಿಕರು, ಸ್ಥಳೀಯರು, ಕನ್ನಡಪರ, ಪ್ರಗತಿಪರ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದ್ದೇ ತಡ, ಎಚ್ಚೆತ್ತುಕೊಂಡ ಜಿಲ್ಲಾಡಳಿತ ಈ ಕಾಲ್ಪನಿಕ ಹೆಸರುಗಳನ್ನು ತೆರವುಗೊಳಿಸಿ ಗೌರವ ಉಳಿಸಿಕೊಂಡಿದೆ. ಇಂತಹ ಲಜ್ಜಗೇಡಿ ನಡೆ ರಾಜ್ಯ ಬಿಜೆಪಿ ಸರ್ಕಾರದ ನೀಚ ರಾಜಕಾರಣಕ್ಕೆ ಸಾಕ್ಷಿಯಾಗಿದೆ ಎಂದು ಕಿಡಿಕಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೆಚ್ಚಿಸಲು ಉರಿಗೌಡ, ನಂಜೇಗೌಡ ಹೆಸರುಗಳನ್ನು ಸೃಷ್ಟಿಸಲಾಯಿತೇ? ಅಥವಾ ಆ ಷಡ್ಯಂತ್ರಕ್ಕೆ ರಾಜ್ಯ ಸರಕಾರದ ಒಪ್ಪಿಗೆಯೂ ಇತ್ತಾ? ಇಲ್ಲವೇ ಇಂಥ ಹೊಣೆಗೇಡಿ ಕೃತ್ಯದ ಬಗ್ಗೆ ಪ್ರಧಾನಿ ಕಚೇರಿಗೂ ಮಾಹಿತಿ ಇತ್ತಾ? ತಿಳಿಯಬೇಕಿದೆ ಎಂದಿದ್ದಾರೆ.
ಬಿಜೆಪಿಗರನ್ನು ಕೆರಳಿಸಿದ ಮೋದಿ ವಿರುದ್ಧದ ರಾಂಧವಾ ಹೇಳಿಕೆ
ಇಡೀ ಒಕ್ಕಲಿಗ ಸಮುದಾಯವನ್ನು ಅಪಹಾಸ್ಯಕ್ಕೆ ಗುರಿ ಮಾಡುವ, ಇಡೀ ಸಮುದಾಯಕ್ಕೆ ಅಪಕೀರ್ತಿ ತರುವ ಹಾಗೂ ಟಿಪ್ಪುವನ್ನು ಕೊಂದ ಕಳಂಕವನ್ನು ಒಕ್ಕಲಿಗರಿಗೆ ಅಂಟಿಸುವ ಹೀನ ಕೆಲಸ ಮಾಡಲು ಬಿಜೆಪಿ ಹೊರಟಿದೆ. ಇದನ್ನು ಒಕ್ಕಲಿಗರು ಸಹಿಸರು ಎಂದಿದ್ದಾರೆ.
ತಾಳ್ಮೆ, ಸ್ವಾಭಿಮಾನ, ಸ್ವಂತಿಕೆ, ಸೇವೆ, ಸೌಹಾರ್ದತೆ, ಸಮನ್ವಯ ತತ್ವದ ತಳಹದಿಯ ಮೇಲೆ ಒಕ್ಕಲಿಗ ಸಮುದಾಯ ಬೆಳೆದಿದೆ. ದ್ವೇಷ ಮತ್ತು ಹಸಿಸುಳ್ಳುಗಳನ್ನು ಅವರೆಂದೂ ಪೋಷಿಸಿ ಬೆಳೆಸಿದವರಲ್ಲ. ಒಂದೀಡಿ ಸಮುದಾಯವನ್ನು ಇಂಥ ನಿಕೃಷ್ಠ ರಾಜಕಾರಣಕ್ಕೆ ಇಳಿಸಿ, ಬಳಸಬಹುದು ಎಂಬ ಪಾಪಿ ಚಿಂತನೆಯೇ ಬಿಜೆಪಿಯ ಹೊಲಸು ರಾಜಕಾರಣದ ಪರಾಕಾಷ್ಠೆ ಎಂದು ಅವರು ಟೀಕಿಸಿದ್ದಾರೆ.
Vokkaliga, community, BJP, hd kumaraswamy,