ಬೆಂಗಳೂರು,ನ.27- ಒಕ್ಕಲಿಗರ ಮೀಸಲಾತಿ ಪ್ರಮಾಣವನ್ನು ಶೇ.12ಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರಕ್ಕೆ ಮನವಿ ಮಾಡುವುದು, ನಿಗದಿತ ಗಡುವಿನೊಳಗೆ ಮೀಸಲಾತಿ ಹೆಚ್ಚಳ ಮಾಡಿ ಆದೇಶ ಹೊರಡಿಸದಿದ್ದರೆ ಬೀದಿಗಿಳಿದು ಹೋರಾಟ ಮಾಡಲು ಇಂದು ನಡೆದ ಒಕ್ಕಲಿಗ ಸಮುದಾಯದ ಪ್ರಮುಖರ ಸಭೆಯಲ್ಲಿ ತೀರ್ಮಾನಿಸಲಾಯಿತು.
ರಾಜ್ಯ ಒಕ್ಕಲಿಗರ ಸಂಘದ ನೇತೃತ್ವದಲ್ಲಿಂದು ಕುವೆಂಪು ಕಲಾಕ್ಷೇತ್ರದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ , ಪಟ್ನಾಯಕನಹಳ್ಳಿ ಮಠದ ಶ್ರೀ ನಂಜಾವಧೂತ ಮಹಾಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಮಠದ ಶ್ರೀಕುಮಾರ ಚಂದ್ರಶೇಖರನಾಥ ಸ್ವಾಮೀಜಿಯವರ ದಿವ್ಯಸಾನಿಧ್ಯದಲ್ಲಿ ಜರುಗಿದ ಒಕ್ಕಲಿಗ ಮೀಸಲಾತಿ ಹೋರಾಟದ ರೂಪುರೇಷೆಗಳ ಪೂರ್ವಭಾವಿ ಸಭೆಯಲ್ಲಿ ಸರ್ಕಾರವನ್ನು ಮೀಸಲಾತಿ ಹೆಚ್ಚಿಸುವಂತೆ ಆಗ್ರಹಿಸಲಾಯಿತು.
ಇಂಧೋರ್ ತಲುಪಿದ ಕಾಂಗ್ರೆಸ್ ‘ಐಕ್ಯತಾ ಯಾತ್ರೆ’
ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಸಲ್ಲಿಸಿ ಇತರೆ ಹಿಂದುಳಿದ ವರ್ಗಗಳ ಪ್ರವರ್ಗ 3ಎನಲ್ಲಿ ನೀಡಿರುವ ಮೀಸಲಾತಿ ಪ್ರಮಾಣವನ್ನು ಶೇ.12ಕ್ಕೆ ಹೆಚ್ಚಿಸಲು ಆಗ್ರಹಿಸಲಾಯಿತು.
ಪ್ರಾಸ್ತವಿಕವಾಗಿ ಮಾತನಾಡಿದ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್.ಬಾಲಕೃಷ್ಣ ಅವರು, ಪೂಜ್ಯ ಸ್ವಾಮೀಜಿಯವರ ಮಾರ್ಗದರ್ಶನದಂತೆ ಒಕ್ಕಲಿಗರ ಸಂಘ ನಡೆದುಕೊಳ್ಳಲು ಬದ್ದವಾಗಿದೆ. ಜನಾಂಗದ ಹಿತದೃಷ್ಟಿಯಿಂದ ಬೀದಿಗಿಳಿದು ಹೋರಾಟ ನಡೆಸಲು ಸಿದ್ದವಿದೆ ಎಂದರು.
ಎಸ್ಸಿ-ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಿರುವುದನ್ನು ಸ್ವಾಗತಿಸುತ್ತೇವೆ. ಆದರೆ ಒಟ್ಟು ಜನಸಂಖ್ಯೆಯಲ್ಲಿ ಶೇ.16ರಷ್ಟು ಒಕ್ಕಲಿಗರ ಜನಸಂಖ್ಯೆ ಇದೆ. ಉಪಜಾತಿಗಳು ಸೇರಿದರೆ ಶೇ.21ರಷ್ಟು ಜನಸಂಖ್ಯೆಯಾಗಲಿದೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಒಕ್ಕಲಿಗರ ಮೀಸಲಾತಿ ಪ್ರಮಾಣವನ್ನು ಶೇ.12ರಿಂದ 15ಕ್ಕೆ ಹೆಚ್ಚಿಸಬೇಕು. ಸಮುದಾಯವು ಕೃಷಿಯನ್ನೇ ನಂಬಿ ನಾಡಿಗೆ ಅನ್ನ ನೀಡುವ ಸಮಾಜವಾಗಿದೆ.
ಪ್ರಾಕೃತಿಕ ವೈಪರಿತ್ಯಗಳಿಂದ ಪದೇ ಪದೇ ಸಂಕಷ್ಟಗಳನ್ನು ಎದುರಿಸುತ್ತಿದೆ. ಆರ್ಥಿಕವಾಗಿ ಹಿಂದುಳಿದವರ ಮೀಸಲಾತಿಯಲ್ಲಿ ನಗರದಲ್ಲಿ ನೆಲೆಸಿರುವ ಒಕ್ಕಲಿಗರಿಗೂ ಸೌಲಭ್ಯ ಸಿಗುವಂತಾಗಬೇಕು. ಪಕ್ಷಾತೀತವಾಗಿ ಒತ್ತಾಯ ಮಾಡುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪುಟ ಸಭೆಯಲ್ಲಿ 3ಎ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ನಿಯೋಗ:
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಮಾತನಾಡಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಹಾಗೂ ಸಮುದಾಯದ ಸಂಸದರ ನಿಯೋಗವನ್ನು ಕರೆದೊಯ್ದು ಮೀಸಲಾತಿ ಹೆಚ್ಚಳಕ್ಕೆ ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರುವ ಪ್ರಯತ್ನ ಮಾಡಲಾಗುವುದು ಎಂದರು.
3ಎನಲ್ಲಿ ಶೇ.4ರಷ್ಟು ಮೀಸಲಾತಿ ಇದ್ದರೂ ಕೊಡವ, ಬಲಿಜ ಸೇರಿದಂತೆ ಇತರೆ ಸಮುದಾಯಗಳು ಇವೆ. ಹೀಗಾಗಿ ಒಕ್ಕಲಿಗರಿಗೆ ಮೀಸಲಾತಿ ಸಿಗುತ್ತಿರುವುದು ಶೇ.2.5 ಮಾತ್ರ. ಇಡಬ್ಲ್ಯುಎಸ್ ಮೀಸಲಾತಿಯಿಂದಲೂ ವಂಚಿತರಾಗಿದ್ದೇವೆ. ಈಗ ಮೀಸಲಾತಿ ಪ್ರಮಾಣ ಹೆಚ್ಚಾಗಿರುವುದರಿಂದ ಸಾಮಾನ್ಯ ವರ್ಗಕ್ಕೆ ಸಿಗುವ ಪ್ರಮಾಣ ಶೇ.34ಕ್ಕೆ ಇಳಿದಂತಾಗಿದೆ.
ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ.16ರಷ್ಟಿರುವ ಒಕ್ಕಲಿಗ ಸಮುದಾಯಕ್ಕೆ ಶೇ.12ರಷ್ಟು ಮೀಸಲಾತಿ ನೀಡಬೇಕು. ಕಾಂತರಾಜ್ ನೇತೃತ್ವದ ಸಮಿತಿ ಜಾತಿ ಗಣತಿ ಬಗ್ಗೆ ನೀಡಿರುವ ವರದಿ ಅವೈಜ್ಞಾನಿಕ ಎಂಬ ಆರೋಪವಿದೆ ಎಂದು ಹೇಳಿದರು.
ಲಾಕ್‍ಡೌನ್ ಖಂಡಿಸಿ ಪಂಜು ಹಿಡಿದು ಬೀದಿಗಿಳಿದ ಚೀನಾ ಜನ
ಒಕ್ಕಲಿಗ ಸಂಘಕ್ಕೆ ಮೀಸಲಾತಿ ನೀಡುವುದು ಭಿಕ್ಷೆಯಲ್ಲ. ಅದು ನಮ್ಮ ಹಕ್ಕು. ಅಗತ್ಯಬಿದ್ದರೆ ಈ ಹಿಂದೆ ಚಿನ್ನಪ್ಪ ರೆಡ್ಡಿ ಆಯೋಗದ ಸಂದರ್ಭದಲ್ಲಿ ಬೀದಿಗಿಳಿದು ಹೋರಾಟ ಮಾಡಿದಂತೆ ಮುಂದೆಯೂ ಹೋರಾಟ ಮಾಡುತ್ತೇವೆ.ಒಕ್ಕಲಿಗರು ಹೋರಾಟದಲ್ಲಿ ಹೋರಾಟದಲ್ಲಿ ಹಿಂದುಳಿದಿದ್ದೇವೆ. ಸಮಾಜದ ಹಿತಕ್ಕಾಗಿ ತಾವು ಎಲ್ಲ ರೀತಿಯ ಪ್ರಯತ್ನ ಮಾಡಲು ಸಿದ್ದ ಎಂದರು.
ಹಿರಿಯ ವಕೀಲ ಹನುಮಂತರಾಯಪ್ಪ ಮಾತನಾಡಿ, ಇತ್ತೀಚೆಗೆ ಒಕ್ಕಲಿಗರಲ್ಲಿ ಒಗ್ಗಟ್ಟಿನ ವಾತಾವರಣ ಕಂಡುಬರುತ್ತಿದೆ. ಗುರಿ ದೊಡ್ಡದಾಗಿದ್ದರೆ ಅಪರಾಧವಲ್ಲ. ಹೀಗಾಗಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವಂತೆ ಆಗ್ರಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಸಚಿವರಾದ ಆರ್.ಅಶೋಕ್, ಕೆ.ಗೋಪಾಲಯ್ಯ, ಸುಧಾಕರ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಶಾಸಕ ರಂಗನಾಥ್, ಎಂ.ಕೃಷ್ಣಪ್ಪ(ವಿಜಯನಗರ), ಎಂ.ಕೃಷ್ಣಪ್ಪ ವಿಧಾನಪರಿಷತ್ ಸದಸ್ಯರಾದ ಅ.ದೇವೇಗೌಡ, ನಾರಾಯಣಸ್ವಾಮಿ, ದಿನೇಶ್ ಗೂಳಿಗೌಡ, ರವಿ, ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಕೋನಪ್ಪ ರೆಡ್ಡಿ, ಖಜಾಂಚಿ ಆರ್.ಪ್ರಕಾಶ್ , ನೆಲ್ಲಿಗೆರೆ ಬಾಲು,
ಪ್ಲಾಸ್ಟಿಕ್ ಮುಕ್ತವಾಗಿರಲಿದೆ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
ಉಪಾಧ್ಯಕ್ಷರಾದ ಡಿ.ಹನುಮಂತಯ್ಯ, ಡಾ.ರೇಣುಕಾಪ್ರಸಾದ್, ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು, ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿಯ ಗಾ.ನಂ. ಶ್ರೀಕಂಠಯ್ಯ, ಪ್ರಧಾನ ಸಂಚಾಲಕ ಆಡಿಟರ್ ನಾಗರಾಜ್, ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ, ಒಕ್ಕಲಿಗರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ವಾಸಂತಿ ಶಿವಣ್ಣ ಸೇರಿದಂತೆ ಒಕ್ಕಲಿಗರ ಸಂಘದ ವಿವಿಧ ಸಂಘ-ಸಂಸ್ಥೆಗಳ ಪದಾಕಾರಿಗಳು ಭಾಗವಹಿಸಿದ್ದರು.
Vokkaliga, community, leaders, increase, reservation,