ಒಕ್ಕಲಿಗರ ಮೀಸಲಾತಿ ಶೇ.12ರಷ್ಟು ಹೆಚ್ಚಿಸಲು ಸಿಎಂಗೆ ಮನವಿ

Social Share

ಬೆಂಗಳೂರು,ಅ.12- ಒಕ್ಕಲಿಗ ಸಮುದಾಯಕ್ಕೂ ಮೀಸಲಾತಿ ಪ್ರಮಾಣವನ್ನು ಶೇ.12ರಷ್ಟು ಹೆಚ್ಚಳ ಮಾಡಬೇಕೆಂದು ಒಕ್ಕಲಿಗ ಮಹಾಸಭಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿದೆ. ಈ ಸಂಬಂಧ ಬೊಮ್ಮಾಯಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರಿಗೆ ಪ್ರತ್ಯೇಕವಾಗಿ ಪತ್ರ ಬರೆದಿರುವ ಒಕ್ಕಲಿಗ ಮಹಾಸಭಾ, 2ನೇ ಅತಿದೊಡ್ಡ ಸಮುದಾಯವಾಗಿರುವ ಒಕ್ಕಲಿಗರಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಬೇಕೆಂದು ಪತ್ರದಲ್ಲಿ ಮನವಿ ಮಾಡಲಾಗಿದೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ ಮೀಸಲಾತಿ ಹೆಚ್ಚಳ ಮಾಡಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ವರದಿಯನ್ನು ಅನುಷ್ಠಾನ ಮಾಡಲು ಮುಂದಾಗಿರುವುದು ಸ್ವಾಗತಾರ್ಹ ಬೆಳವಣಿಗೆ. ಅದೇ ರೀತಿ ಒಕ್ಕಲಿಗ ಸಮುದಾಯಕ್ಕೂ ಮೀಸಲಾತಿ ಹೆಚ್ಚಿಸಲು ತಕ್ಷಣವೇ ಕ್ರಮ ಕೈಗಳ್ಳಬೇಕೆಂದು ಒಕ್ಕಲಿಗ ಮಹಾಸಭಾದ ರಾಜ್ಯಾಧ್ಯಕ್ಷ ಎ.ಎಚ್. ಆನಂದ್ ಅವರು ಒತ್ತಾಯಿಸಿದ್ದಾರೆ.

ಒಟ್ಟು ಜನಸಂಖ್ಯೆಯ ಶೇ.20ರಷ್ಟು ಜನಸಂಖ್ಯೆ ಹೊಂದಿರುವ 3ಎಗೆ ಶೇ.4ರಷ್ಟು ಮೀಸಲಾತಿಯನ್ನು ನೀಡಲಾಗಿದೆ. ಕಲ್ಯಾಣ ಕರ್ನಾಟಕದ ಕೋಟಾದಲ್ಲಿ ಎಲ್ಲ ಜನಾಂಗದಲ್ಲೂ ಮೀಸಲಾತಿ ಪಡೆಯಲು ಅವಕಾಶವಿದೆ. ಜನರಲ್ ಮೆರಿಟ್ ಕೋಟಾವನ್ನು ಶೇ.29.2ರಷ್ಟು ಕಡಿಮೆ ಮಾಡಿರುವುದರಿಂದ ಅವಕಾಶಗಳು ಕಡಿಮೆಯಾಗಿವೆ ಎಂದು ಪತ್ರದಲ್ಲಿ ಮುಖ್ಯಮಂತ್ರಿ ಹಾಗೂ ಮುಖ್ಯ ಕಾರ್ಯದರ್ಶಿಗೆ ಮನವರಿಕೆ ಮಾಡಿದ್ದಾರೆ.

ಒಕ್ಕಲಿಗ ಸಮುದಾಯವನ್ನು ಇತ್ತೀಚೆಗೆ ಸರ್ಕಾರಗಳು ಕಡೆಗಣಿಸುತ್ತಿದೆ. ಶೇ.16ರಷ್ಟು ಜನಸಂಖ್ಯೆಯನ್ನು ಹೊಂದಿದ್ದು ಶೇ.20ರಷ್ಟಿರುವ 3ಎ ಗುಂಪಿಗೆ ಶೇ.4ರಷ್ಟು ಮೀಸಲಾತಿ ನೀಡಿರುವುದು ಸರಿಯಲ್ಲ. ನಾವು ಯಾವುದೇ ಸಮುದಾಯದ ಮೀಸಲಾತಿ ಹೆಚ್ಚಳ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿಲ್ಲ. ನಮಗೂ ಕೂಡ ಜನಸಂಖ್ಯೆಗನುಗುಣವಾಗಿ ಶೇ.12ರಷ್ಟು ಮೀಸಲಾತಿ ಹೆಚ್ಚಿಸಬೇಕೆಂದು ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿಗೆ ಬರೆದಿರುವ ಪತ್ರದಲ್ಲಿ ಗೌರವಾಧ್ಯಕ್ಷ ತಲಕಾಡು ಚಿಕ್ಕರಂಗೇಗೌಡ, ಪ್ರಧಾನ ಕಾರ್ಯದರ್ಶಿ ಸತೀಶ್ ಕಡತನಮನೆ, ಕಾರ್ಯದರ್ಶಿ ಗಂಗಹನುಮಯ್ಯ, ಖಚಾಂಚಿ ಅರಮನೆ ಶಂಕರ್ ಅವರು ಬೆಂಬಲ ಸೂಚಿಸಿ ಸಹಿ ಹಾಕಿದ್ದಾರೆ.

Articles You Might Like

Share This Article