ಒಕ್ಕಲಿಗರ ಸಂಘದಿಂದ ಸಾಧಕರ ಕೃತಿ ಸಂಗ್ರಹ

Spread the love

ಬೆಂಗಳೂರು,ಫೆ.17- ಒಕ್ಕಲಿಗರ ಇತಿಹಾಸವೂ ಸೇರಿದಂತೆ ಒಕ್ಕಲಿಗ ಸಮುದಾಯದವರು ವಿವಿಧ ಕ್ಷೇತ್ರಗಳ ಸಾಧಕರ ಬಗ್ಗೆ ಪ್ರಕಟಗೊಂಡಿರುವ ಕೃತಿಗಳನ್ನು ಸಂಗ್ರಹಿಸಿ ಮುಂದಿನ ಪೀಳಿಗೆಗೆ ಉಳಿಸಬೇಕೆಂಬ ಹಿನ್ನೆಲೆಯಲ್ಲಿ ರಾಜ್ಯಒಕ್ಕಲಿಗರ ಸಂಘ ಮಹತ್ವದ ಕೃತಿ ಸಂಗ್ರಹ ಕಾರ್ಯಕ್ಕೆ ಮುಂದಾಗಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಂಘದ ಪ್ರಧಾನಕಾರ್ಯದರ್ಶಿ ಟಿ.ಕೋನಪ್ಪ ರೆಡ್ಡಿ , ನೂರು ವರ್ಷಗಳಿಗೂ ಹೆಚ್ಚು ಇತಿಹಾಸ ಹೊಂದಿರುವ ರಾಜ್ಯ ಒಕ್ಕಲಿಗರ ಸಂಘವು, ನಾಡಿನ ಒಕ್ಕಲಿಗ ಸಮುದಾಯದ ಬಹುದೊಡ್ಡ ಸಂಸ್ಥೆ. ಸಮುದಾಯದ ಬಹಳಷ್ಟು ಮಹನೀಯರು ಕೃಷಿ, ಸಾಹಿತ್ಯ, ಸಂಸ್ಕøತಿ, ಕಲೆ, ರಾಜಕೀಯ, ಶಿಕ್ಷಣ, ಕ್ರೀಡೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. ಬೆಂಗಳೂರು ನಿರ್ಮಾತೃ ಕೆಂಪೇಗೌಡರಿಂದ ಹಿಡಿದು ಒಕ್ಕಲಿಗ ಇತಿಹಾಸ ಒಳಗೊಂಡಂತೆ ಸಮುದಾಯದ ಸಾಧಕರ ಬಗ್ಗೆ ಹಲವಾರು ಕೃತಿಗಳು ಮೂಡಿ ಬಂದಿವೆ.

ಸಮುದಾಯದ ಜಗದ್ಗುರುಗಳಾದ ಆದಿಚುಂಚನಗಿರಿ ಶ್ರೀ ಡಾ.ಬಾಲಂಗಾಧರನಾಥ ಸ್ವಾಮೀಜಿ, ರಾಷ್ಟ್ರಕವಿ ಕುವೆಂಪು ಸೇರಿದಂತೆ ನಾಡಿನ ಒಕ್ಕಲಿಗರ ಸಾಧಕರ ಬಗ್ಗೆ ಪ್ರಕಟಗೊಂಡಿರುವ ಸಾಹಿತ್ಯದ ಎಲ್ಲಾ ಪ್ರಕಟಣೆಗಳ ಪುಸ್ತಕಗಳು ಒಂದೇ ಸೂರಿನಡಿ ಅಧ್ಯಯನಕ್ಕೆ ದೊರಕಬೇಕೆಂಬ ಮಹದಾಸೆಯ ಹಿನ್ನೆಲೆಯಲ್ಲಿ ಒಕ್ಕಲಿಗರ ಸಂಘ ಕೃತಿ ಸಂಗ್ರಹ ಕಾರ್ಯಕ್ಕೆ ಮುಂದಾಗಿದೆ ಎಂದಿದ್ದಾರೆ.

ಸಂಘವು ಹರಿದು ಹಂಚಿ ಹೋಗಿರುವ ಒಕ್ಕಲಿಗ ಸಮುದಾಯದ ಸಾಧಕರ ಕೃತಿಗಳನ್ನು ಸಂಗ್ರಹಿಸಿಡಲು ತೀರ್ಮಾನಿಸಿದೆ. ಆದ್ದರಿಂದ ಲೇಖಕರು, ಮುದ್ರಕರು (ಪಬ್ಲಿಷರ್) ಮತ್ತು ಓದುಗರು ಒಕ್ಕಲಿಗರ ಸಮುದಾಯಕ್ಕೆ ಸಂಬಂಧಪಟ್ಟ ಕೃತಿಗಳ ಬಗ್ಗೆ ಮಾಹಿತಿ ಮತ್ತು ಪುಸ್ತಕಗಳಿದ್ದರೆ ರಾಜ್ಯ ಒಕ್ಕಲಿಗರ ಸಂಘ, ವಿವಿ ಪುರಂ, ಬೆಂಗಳೂರು-560004 ವಿಳಾಸಕ್ಕೆ ಕಳುಹಿಸಬೇಕೆಂದು ಸಂಘದ ಪ್ರಧಾನಕಾರ್ಯದರ್ಶಿ ಟಿ.ಕೋನಪ್ಪ ರೆಡ್ಡಿ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಲೇಖಕರು ಹಾಗೂ ಮುದ್ರಕರು ಪ್ರಕಟಗೊಂಡಿರುವ ಒಂದು ಪ್ರತಿಯನ್ನು ಸಂಘಕ್ಕೆ ಕಳುಹಿಸಿಕೊಟ್ಟರೆ ಅವಶ್ಯಕತೆಗೆ ತಕ್ಕಂತೆ ಸಂಘದ ವತಿಯಿಂದ ಹೆಚ್ಚಿನ ಪುಸ್ತಕಗಳನ್ನು ಖರೀದಿ ಮಾಡಲು ನಿರ್ಧರಿಸಲಾಗುವುದು ಎಂದು ತಿಳಿಸಿದ್ದಾರೆ.

Facebook Comments