ಬೆಂಗಳೂರು, ಜ.4- ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರು ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ನಾಳೆ ತೆರೆ ಬೀಳಲಿದೆ. ಸಂಘದ ಪದಾಧಿಕಾರಿಗಳ ಆಯ್ಕೆಗೆ ನಾಳೆ ಚುನಾವಣೆ ನಡೆಯಲಿದ್ದು, ಅಧ್ಯಕ್ಷ ಸ್ಥಾನಕ್ಕೆ ಶಾಸಕ ಸಿ.ಎನ್.ಬಾಲಕೃಷ್ಣ ಹಾಗೂ ಸಂಘದ ಮಾಜಿ ಅಧ್ಯಕ್ಷ ಬಿ.ಕೆಂಚಪ್ಪಗೌಡ ನಡುವೆ ತೀವ್ರ ಪೈvಟಿ ಏರ್ಪಟ್ಟಿದೆ.
ನಾಳೆ ನಡೆಯುವ ಪದಾಕಾರಿಗಳ ಚುನಾವಣೆಯಲ್ಲಿ ಕೆಂಚಪ್ಪಗೌಡ ಮತ್ತು ಬಾಲಕೃಷ್ಣ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಲಿದ್ದು, ಅದೇ ರೀತಿ ಉಳಿದ ಪದಾಧಿಕಾರಿಗಳ ಸ್ಥಾನಕ್ಕೂ ತಮ್ಮ ತಮ್ಮ ಬೆಂಬಲಿಗರನ್ನು ಕಣಕ್ಕಿಳಿಸಲಿದ್ದಾರೆ. ಎರಡು ಪ್ರತ್ಯೇಕ ಬಣಗಳಾಗಿದ್ದು, ತಮ್ಮ ತಮ್ಮ ಬೆಂಬಲಿಗ ನಿರ್ದೇಶಕರನ್ನು ಒಂದೆಡೆ ಹಿಡಿದಿಟ್ಟುಕೊಳ್ಳುವ ಪ್ರಯತ್ನವೂ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಚುನಾವಣೆ ಹಿನ್ನೆಲೆಯಲ್ಲಿ ನೂತನ ನಿರ್ದೇಶಕರು ರೆಸಾರ್ಟ್‍ನಲ್ಲಿ ವಾಸ್ತವ್ಯ ಹೂಡಿದ್ದಾರೆ ಎನ್ನಲಾಗಿದೆ.
ಸಂಘದ 35 ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆಗೆ ಡಿ.12ರಂದು ಚುನಾವಣೆ ನಡೆದಿತ್ತು. ಮುಂದಿನ ಐದು ವರ್ಷಗಳ ಅವಗಾಗಿ ನೂತನ ನಿರ್ದೇಶಕರು ಆಯ್ಕೆಗೊಂಡಿದ್ದರು. 30 ತಿಂಗಳ ಅವಗಾಗಿ ಪದಾಧಿಕಾರಿಗಳ ಆಯ್ಕೆ ಚುನಾವಣೆ ನಡೆಯುತ್ತಿದೆ. ಸಂಘದ ತಾಂತ್ರಿಕ ಮಹಾವಿದ್ಯಾಲಯದ ಎಂಬಿಎ ಸೆಮಿನಾರ್ ಹಾಲ್‍ನಲ್ಲಿ ಪದಾಧಿಕಾರಿಗಳ ಚುನಾವಣಾ ಪ್ರಕ್ರಿಯೆ ನಡೆಯಲಿದೆ ಎಂದು ಒಕ್ಕಲಿಗರ ಸಂಘದ ಪದಾಧಿಕಾರಿಗಳ ಚುನಾವಣಾಕಾರಿ ಹಾಗೂ ಸಹಕಾರ ಸಂಘಗಳ ನಿಬಂಧಕ ಎಸ್.ಜಿಯಾವುಲ್ಲಾ ಪ್ರಕಟಿಸಿದ್ದಾರೆ.
ಸಂಘದ ಎರಡು ಉಪಾಧ್ಯಕ್ಷ ಸ್ಥಾನಗಳು, ಪ್ರಧಾನ ಕಾರ್ಯದರ್ಶಿ, ಸಹಾಯಕ ಕಾರ್ಯದರ್ಶಿ ಹಾಗೂ ಖಜಾಂಚಿ ಒಂದು ಸ್ಥಾನಕ್ಕೆ ನಾಳೆ ಬೆಳಗ್ಗೆ 10 ಗಂಟೆಯಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಳೆ 11 ಗಂಟೆಗೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, 11.45ಕ್ಕೆ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಚುನಾವಣಾಧಿಕಾರಿ ಪ್ರಕಟಿಸಲಿದ್ದಾರೆ.
ನಾಮಪತ್ರಗಳನ್ನು ವಾಪಸ್ ಪಡೆಯಲು ನಾಳೆ ಮಧ್ಯಾಹ್ನ 12.15ರ ವರೆಗೂ ಕಾಲಾವಕಾಶವಿದ್ದು, 12.45ಕ್ಕೆ ಕಣದಲ್ಲಿ ಉಳಿಯುವ ಅಂತಿಮ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಅವಿರೋಧ ಆಯ್ಕೆ ನಡೆಯದೆ ಮತದಾನ ಅನಿವಾರ್ಯವಾದರೆ ಮಧ್ಯಾಹ್ನ 2 ರಿಂದ 3.30ರ ವರೆಗೆ ಗುಪ್ತ ಮತದಾನದ ಮೂಲಕ ಚುನಾವಣೆ ನಡೆಯಲಿದೆ. ಆ ಬಳಿಕ ಮತ ಎಣಿಕೆ ನಡೆದು ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ.
