ಫೆ.17ರಿಂದ ರಾಜ್ಯ ಒಕ್ಕಲಿಗರ ಸಂಘದ ಹೊಸ ಸದಸ್ಯತ್ವ ಪ್ರಾರಂಭ

Social Share

ಬೆಂಗಳೂರು,ಫೆ.15- ಬಹು ನಿರೀಕ್ಷಿತ ರಾಜ್ಯ ಒಕ್ಕಲಿಗರ ಸಂಘದ ಹೊಸ ಸದಸ್ಯತ್ವಕ್ಕಾಗಿ ಆನ್ಲೈನ್ ಮತ್ತು ಆಫ್ ಲೈನ್ ವಿಧಾನಗಳ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ.ಹೊಸ ಸದಸ್ಯತ್ವ ಅಭಿಯಾನ ಕೈಗೊಂಡಿದ್ದು, ಫೆ.17ರಿಂದ ಆಗಸ್ಟ್ 31ರವರೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ.

ಹೊಸ ಸದಸ್ಯತ್ವ ನೀಡುವಂತೆ ಸಮಾಜದವರಿಂದ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಸಂಘದ ಪದಾಕಾರಿಗಳು ಹಾಗೂ ನಿರ್ದೇಶಕರ ಸಹಕಾರದೊಂದಿಗೆ ಹೊಸ ಸದಸ್ಯತ್ವ ನೀಡಲು ತೀರ್ಮಾನಿಸಲಾಗಿದೆ ಎಂದು ಶಾಸಕ ಮತ್ತು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್.ಬಾಲಕೃಷ್ಣ ತಿಳಿಸಿದ್ದಾರೆ.

18 ವರ್ಷ ತುಂಬಿರುವ ಒಕ್ಕಲಿಗ ಸಮುದಾಯದವರು ಅರ್ಜಿ ಸಲ್ಲಿಸಿ ಹೊಸ ಸದಸ್ಯತ್ವ ಪಡೆಯಬಹುದಾಗಿದೆ. ಬೆಂಗಳೂರು, ಮೈಸೂರು, ಮಂಡ್ಯ, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ, ದಕ್ಷಿಣ ಕನ್ನಡ, ಶಿವಮೊಗ್ಗ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಹಾಗೂ ಕೊಡಗು ಜಿಲ್ಲೆಗಳ ಡಿಸಿಸಿಸಿ ಬ್ಯಾಂಕ್ನ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಸಂಘದ ಸದಸ್ಯತ್ವದ ಅರ್ಜಿಗಳನ್ನು ವಿತರಿಸಲಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಜಿ ಸ್ವೀಕರಿಸಿದ ದಿನಾಂಕದಿಂದ 30 ದಿನದೊಳಗೆ ಅಗತ್ಯ ದಾಖಲೆಗಳೊಂದಿಗೆ ಆಯಾ ಬ್ಯಾಂಕಿಗೆ ಅರ್ಜಿ ಹಿಂದಿರುಗಿಸಬೇಕು. ಅರ್ಜಿಯೊಂದಿಗೆ ವಿಳಾಸ ದೃಢೀಕರಣಕ್ಕೆ ಸಂಬಂಧಿಸಿದಂತೆ ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ ಸೇರಿದಂತೆ ಅರ್ಜಿಯಲ್ಲಿ ಕೋರಿರುವ ಎಲ್ಲಾ ಅಗತ್ಯ ದಾಖಲೆಗಳನ್ನು ಒದಗಿಸುವುದು ಕಡ್ಡಾಯವಾಗಿದೆ ಎಂದು ಹೇಳಿದ್ದಾರೆ. ಆನ್ಲೈನ್ ಮೂಲಕವೂ ಅರ್ಜಿ ಸಲ್ಲಿಕೆ ಅವಕಾಶವಿದ್ದು, ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಕೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಪಡೆಯಬಹುದು.

ಅರ್ಜಿ ಸಲ್ಲಿಕೆ ಶುಲ್ಕ 1650 ರೂ. ನಿಗದಿಪಡಿಸಲಾಗಿದೆ. ಹಣವನ್ನು ಡೆಬಿಟ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಸೇರಿದಂತೆ ಆನ್ಲೈನ್ ವಿಧಾನ ಮೂಲಕ ಶುಲ್ಕ ಪಾವತಿ ಮಾಡಬಹುದು ಎಂದು ಸಂಘದ ಉಪಾಧ್ಯಕ್ಷ ಹಾಗೂ ಸದಸ್ಯತ್ವ ನೋಂದಣಿ ಸಮಿತಿ ಅಧ್ಯಕ್ಷ ಡಿ. ಹನುಮಂತಯ್ಯ ತಿಳಿಸಿದ್ದಾರೆ. ವಿವರಗಳಿಗೆ ಸಂಘದ ದೂರ ವಾಣಿ ಸಂಖ್ಯೆ 080-26611031 ಸಂಪರ್ಕಿಸಬಹುದಾಗಿದೆ.

#VokkaligaraSangha, #Membership, #Registration,

Articles You Might Like

Share This Article