ಬೆಂಗಳೂರು,ಜು.29- ನಕಲಿ ಮತದಾನಕ್ಕೆ ಕಡಿವಾಣ ಹಾಕಲು ಗಂಭೀರ ಚಿಂತನೆ ನಡೆಸಿರುವ ಚುನಾವಣಾ ಆಯೋಗ ಶೀಘ್ರದಲ್ಲೇ ಮತದಾರರ ಗುರುತಿನ ಚೀಟಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಕಾರ್ಯವನ್ನು ಕೈಗೆತ್ತಿಕೊಳ್ಳಲಿದೆ.
ಮತದಾರರ ಗುರುತಿನ ಚೀಟಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿದರೆ, ಎರಡು-ಮೂರು ಕಡೆ ಮತದಾನ ಮಾಡುತ್ತಿದ್ದ ನಕಲಿ ಮತದಾರರ ಪತ್ತೆ ಮಾಡಬಹುದಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.
ಮುಂಬರುವ ದಿನಗಳಲ್ಲಿ ಸಾಲು ಸಾಲು ಚುನಾವಣೆಗಳು ಎದುರಾಗುತ್ತಿರುವ ಸಂದರ್ಭದಲ್ಲೇ ಚುನಾವಣಾ ಆಯೋಗ ಮತದಾರರ ಗುರುತಿನ ಚೀಟಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಮಹತ್ವದ ಕಾರ್ಯ ಕೈಗೆತ್ತಿಕೊಂಡಿದೆ.
ಕೇಂದ್ರ ಚುನಾವಣಾ ಆಯೋಗದ ಆದೇಶದ ಮೇರೆಗೆ ರಾಜ್ಯದಲ್ಲಿ ಮತ ದಾರರ ಗುರುತಿನ ಚೀಟಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಕಾರ್ಯ ಕೈಗೆತ್ತಿಕೊಂಡಿದ್ದೇವೆ ಎಂದು ಮೀನಾ ವಿವರಿಸಿದ್ದಾರೆ.
2023ಕ್ಕೆ ರಾಜ್ಯ ವಿಧಾನಸಭೆ ಚುನಾವಣೆ ಹಾಗೂ 2024 ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ ವೇಳೆಗೆ ಮತದಾರರ ಗುರುತಿನ ಚೀಟಿಗೆ ಆಧಾರ್ ಕಾರ್ಡ್ ಜೋಡಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ಅವರು ವಿವರಿಸಿದರು.
17 ವರ್ಷ ತುಂಬಿದವರಿಗೂ ಗುರುತಿನ ಚೀಟಿ: ಇದುವರೆಗೂ 18 ವರ್ಷ ಪೂರೈಸಿದವರಿಗೆ ಮಾತ್ರ ಮತದಾರರ ಗುರುತಿನ ಚೀಟಿ ನೀಡಲಾಗುತ್ತಿತ್ತು. ಇನ್ನು ಮುಂದೆ 17 ವರ್ಷ ತುಂಬಿದವರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಮೀನಾ ಹೇಳಿದರು.
18 ವರ್ಷ ತುಂಬಲು 6 ತಿಂಗಳು ಕಡಿಮೆ ಇದ್ದರೂ ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳಬಹುದಾಗಿಗೆ ಇಂತಹ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಲು ಯುವ ಜನತೆ ಮುಂದೆ ಬರಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ಸೇರ್ಪಡೆ ಮಾಡಿಕೊಳ್ಳಲು ಬಯಸುವವರು ಆನ್ಲೈನ್ ಮೂಲಕವೇ ಫಾರಂ 8 ಭರ್ತಿ ಮಾಡಿ ತುಂಬಲು ಅವಕಾಶ ನೀಡಲಾಗಿದೆ.