ವೋಟರ್ ಐಡಿ ಹಗರಣಕ್ಕೆ ಮಹತ್ವದ ಟ್ವಿಸ್ಟ್..?!

Social Share

ಬೆಂಗಳೂರು, ನ.22- ಮತದಾರರ ಪಟ್ಟಿ ಅಕ್ರಮಗಳ ಬಗ್ಗೆ ತನಿಖೆ ನಡೆಸುತ್ತಿರುವ ಹಲಸೂರು ಗೇಟ್ ಠಾಣೆ ಪೊಲೀಸರು ಎಲೆಕ್ಟ್ರಾನಿಕ್ ಡಿವೈಸ್‍ಗಳ ವಿಶ್ಲೇಷಣೆಗಳಿಂದ ಮತ್ತಷ್ಟು ಮಾಹಿತಿ ದೊರೆಯುವ ನಿರೀಕ್ಷೆಯಲ್ಲಿದ್ದು, ತನಿಖೆಗೆ ಮಹತ್ವದ ತಿರುವು ದೊರೆಯುವ ಸಾಧ್ಯತೆ ಇದೆ.

ಅಕ್ರಮದ ಪ್ರಮುಖ ಆರೋಪಿ ಸ್ಥಾನದಲ್ಲಿರುವ ಚಿಲುಮೆ ಸಂಸ್ಥೆ ಸಾಫ್ಟ್‍ವೇರ್ ಇಂಜಿನಿಯರ್‍ಗಳಿಂದ ಸಮೀಕ್ಷಾ ಎಂಬ ಖಾಸಗಿ ಆಪ್ ಅಭಿವೃದ್ಧಿ ಪಡಿಸಿತು. ಅದರಲ್ಲಿ ಮತದಾರರ ಹೆಸರು, ಮೊಬೈಲ್ ಸಂಖ್ಯೆ, ಸಂಪರ್ಕ ವಿಳಾಸ, ಜಾತಿ, ಧರ್ಮ, ಉದ್ಯೋಗ ಸೇರಿದಂತೆ ಹಲವಾರು ಮಾಹಿತಿಗಳ ಕಾಲಂಗಳು ಅಡಕವಾಗಿದ್ದವು.

ಚುನಾವಣಾ ಆಯೋಗದ ಹೆಸರಿನಲ್ಲಿ ಮತಗಟ್ಟೆ ಅಧಿಕಾರಿ ಎಂಬ ಗುರುತಿನ ಚೀಟಿ ಹೊಂದಿದವರು ಮನೆ-ಮನೆಗಳಿಗೆ ತೆರಳಿ ಸಮೀಕ್ಷೆ ನಡೆಸುತ್ತಿದ್ದರು. ಆಯೋಗದಿಂದಲೇ ಸಿಬ್ಬಂದಿ ಬಂದಿದ್ದಾರೆ ಎಂದು ನಂಬುತ್ತಿದ್ದ ಮತದಾರರು ಎಲ್ಲಾ ಮಾಹಿತಿಗಳನ್ನು ಒದಗಿಸುತ್ತಿದ್ದರು.

ಆಯಾ ಕ್ಷೇತ್ರದ ಸಂಭವನೀಯ ಅಭ್ಯರ್ಥಿಗಳ ಜೊತೆ ವ್ಯವಹಾರ ಕುದುರಿಸಿ ಹಣ ಪಡೆದ ಬಳಿಕ ಮಾಹಿತಿ ಸಂಗ್ರಹಿಸಲಾಗುತ್ತಿತ್ತು. ಆ ಮಾಹಿತಿಯನ್ನು ಸಂಭವನೀಯ ಅಭ್ಯರ್ಥಿಗಳಿಗೆ ಮಾರಿಕೊಳ್ಳುತ್ತಿತ್ತು ಎಂದು ಕಾಂಗ್ರೆಸ್ ಆರೋಪಿಸಿದೆ.

ಮಂಗಳೂರಲ್ಲಿ ಸ್ಪೋಟ ಸಂಭವಿಸಿದ ಸ್ಥಳಕ್ಕೆ ಗೃಹ ಸಚಿವರ ಭೇಟಿ

ಆದರೆ ಈ ಆರೋಪಕ್ಕೆ ಪೂರಕವಾಗಿ ಸಾಕ್ಷಿ ಸಂಗ್ರಹಿಸಲು ಪೊಲೀಸರು ಸೈಬರ್ ಕ್ರೈಂನ ತಜ್ಞರ ಮೊರೆ ಹೋಗಿದ್ದಾರೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಚಿಲುಮೆ ಸಂಸ್ಥೆ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿದ್ದ ಎಲ್ಲಾ ದಾಖಲಾತಿಗಳನ್ನು ಹೊರ ವಲಯದ ತೋಟದ ಮನೆಗೆ ಸ್ಥಳಾಂತರಿಸಿ, ಕಚೇರಿಗೆ ಬೀಗ ಹಾಕಿ ಮುಖ್ಯಸ್ಥರು ನಾಪತ್ತೆಯಾಗಿದ್ದರು.

ತನಿಖೆ ಆರಂಭಿಸಿದ ಪೊಲೀಸರು ಕಚೇರಿಯಲ್ಲಿದ್ದ ಕಂಪ್ಯೂಟರ್‍ಗಳ ಹಾರ್ಡ್‍ಡಿಸ್ಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಆರೋಪಿಗಳೆಂದು ಗುರುತಿಸಲಾಗಿರುವವರ ಮೊಬೈಲ್ ಸೇರಿದಂತೆ ಇತರ ಎಲೆಕ್ಟ್ರಾನಿಕ್ ಡಿವೈಸ್‍ಗಳನ್ನು ಪರಿಶೀಲಿಸಿದ್ದಾರೆ.

ಚಿಲುಮೆ ಸಂಸ್ಥೆ ಬೆಂಗಳೂರಿನಲ್ಲಿ ಹಲವಾರು ಮಂದಿಗೆ ಇ-ಮೇಲ್ ಕಳುಹಿಸಿ ಸಮೀಕ್ಷೆ ಮಾಡಿಕೊಡುವುದಾಗಿ, ದತ್ತಾಂಶ ನೀಡುವುದಾಗಿ ಮಾಹಿತಿ ನೀಡಿತ್ತು.

ಈ ರೀತಿಯ ಇ-ಮೇಲ್ ಗೆ ಸ್ಪಂದಿಸಿ ಎಷ್ಟು ಮಂದಿ ರಾಜಕಾರಣಿಗಳು ವ್ಯವಹಾರ ಮಾಡಿದ್ದಾರೆ, ಚಿಲುಮೆ ಸಂಸ್ಥೆಯ ಹಣವೆಷ್ಟು, ಯಾರೆಲ್ಲಾ ಹಣ ಪಾವತಿಸಿದ್ದಾರೆ. ಯಾವ ಸ್ವರೂಪದಲ್ಲಿ ಹಣ ಪಾವತಿಯಾಗಿದೆ ಎಂಬ ವಿವರಗಳು ಕಂಪ್ಯೂಟರ್ ಮತ್ತು ಎಲೆಕ್ಟ್ರಾನಿಕ್ ಡಿವೈಸ್‍ಗಳಲ್ಲಿ ಅಡಕವಾಗಿದೆ ಎನ್ನಲಾಗಿದೆ.

ಸೈಬರ್ ತಜ್ಞರ ವಿಶ್ಲೇಷಣೆಯ ಮೂಲಕ ಮತ್ತಷ್ಟು ಮಾಹಿತಿ ಹೊರ ಬರುವ ಸಾಧ್ಯತೆ ಇದ್ದು, ಆರೋಪಗಳಿಗೆ ಪೂರಕ ಸಾಕ್ಷ್ಯ ದೊರೆಯುವ ನಿರೀಕ್ಷೆ ಇದೆ. 2012ರಿಂದಲೂ ಚಿಲುಮೆ ಸಂಸ್ಥೆ ಮತದಾರರ ಜಾಗೃತಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದೆ. ಕೆಲವೆಡೆ ಬಿಬಿಎಂಪಿ ನೀಡಲಾಗಿರುವ ಆದೇಶಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೂ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿದು ಬಂದಿದೆ.

ಎಷ್ಟು ಮಂದಿಯ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಹೊಸದಾಗಿ ಸೇರ್ಪಡೆಯಾಗಿರುವ ಹೆಸರುಗಳೆಷ್ಟು, ಬೇರೆ ಕ್ಷೇತ್ರಕ್ಕೆ ಸ್ಥಳಾಂತರವಾಗಿರುವವರ ಸಂಖ್ಯೆ ಎಷ್ಟು, ಇದಕ್ಕೆಲ್ಲಾ ಯಾವ ಮಾನದಂಡವನ್ನು ಅನುಸರಿಸಬೇಕಾಗಿದೆ. ಸರ್ಕಾರದ ಅಕಾರಿಗಳ ಪಾತ್ರವೇನು, ಯಾರ ಒತ್ತಡ ಇದರ ಹಿಂದಿದೆ ಎಂಬೆಲ್ಲಾ ಮಾಹಿತಿಗಳಿಗೆ ಕಂಪ್ಯೂಟರ್ ಡಿವೈಸ್‍ಗಳು ಸುಳಿವು ನೀಡಬಹುದು ಎಂಬ ನಿರೀಕ್ಷೆ ತನಿಖಾಧಿಕಾರಿಗಳಲ್ಲಿದೆ.

ಮತ ಮಾಹಿತಿಗೆ ಕನ್ನ : ಆರೋಪ ಮುಚ್ಚಿಹಾಕುವ ಯತ್ನ ನಡೆದಿತ್ತೆ..?

ಪ್ರಕರಣ ದಾಖಲಾಗುತ್ತಿದ್ದಂತೆ ದಾಖಲೆಗಳನ್ನು ಸಾಗಿಸಿದ ಚಿಲುಮೆ ಸಂಸ್ಥೆ ದತ್ತಾಂಶಗಳನ್ನು ಅಡಕ ಮಾಡಿಕೊಂಡಿದ್ದ ಸಮಿಕ್ಷಾ ಆಪ್ ಅನ್ನು ಬ್ಲಾಕ್ ಮಾಡಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದೆ ಎಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಆಪ್‍ನ ರಚನೆ ಮಾಡಿದ್ದ ಸಾಫ್ಟ್‍ವೇರ್ ಕಂಪೆನಿಯ ಸಿಬ್ಬಂದಿಗಳನ್ನು ಪೊಲೀಸರು ವಿಚಾರಣೆ ಮಾಡಿ ಐಪಿ ಅಡ್ರಸ್ ಮೂಲಕ ಪರಿಶೀಲನೆ ನಡೆಸುತ್ತಿದ್ದಾರೆ.

ಬಾಂಬ್ ಸ್ಪೋಟಕ್ಕೆ ಮೊಬೈಲ್ ಬಳಸಲು ಮೈಸೂರಲ್ಲಿ ತರಬೇತಿ ಪಡೆದಿದ್ದ ಕುಕ್ಕರ್ ಕ್ರಿಮಿ

ತನಿಖಾಧಿಕಾರಿಗಳು ದತ್ತಾಂಶಗಳು ಯಾವ ರೀತಿ ಸೋರಿಕೆಯಾಗಿವೆ ಎಂಬುದನ್ನು ವಿಶ್ಲೇಷಿಸಿಸುತ್ತಿರುವುದಾಗಿ ತಿಳಿದು ಬಂದಿದೆ.

Voter, data, theft, case, BBMP, BLO, cards, Chilume, agents,

Articles You Might Like

Share This Article