ಮತದಾರರನ್ನ ಮರುಳುಮಾಡಲು ‘ಉಚಿತ’ ಪೈಪೋಟಿಗಳಿದ ರಾಜಕೀಯ ಪಕ್ಷಗಳು

Social Share

ಬೆಂಗಳೂರು,ಜ.17- ರಾಜ್ಯ ರಾಜಕಾರಣದಲ್ಲಿ ಮತದಾರರನ್ನು ಓಲೈಸಿಕೊಳ್ಳಲು ರಾಜಕೀಯ ಪಕ್ಷಗಳು ನಾನಾ ಕಸರತ್ತು ನಡೆಸುತ್ತಿರುವುದರ ಜೊತೆಗೆ ಉಚಿತ ಕೊಡುಗೆಗಳನ್ನು ಭರ್ಜರಿಯಾಗಿಯೇ ಘೋಷಣೆ ಮಾಡುತ್ತಿವೆ.
ನಾವು ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೂ 200 ವ್ಯಾಟ್ ವಿದ್ಯುತ್ ಹಾಗೂ ನಾರಿಯರಿಗೆ ಮಾಸಿಕ 2000 ರೂ. ನೀಡುವುದಾಗಿ ಕಾಂಗ್ರೆಸ್ ಹೇಳಿಕೊಂಡಿದೆ.

ನಾವೇನು ಕಮ್ಮಿ ಎಂಬಂತೆ ಆಡಳಿತಾರೂಢ ಬಿಜೆಪಿ ಕೂಡ ಕೋವಿಡ್ ಮತ್ತು ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಬಡ ಕುಟುಂಬಗಳ ಮನೆ ವೆಚ್ಚ ನಿರ್ವಹಣೆಗಾಗಿ ಕುಟುಂಬದ ಯಜಮಾನಿ ಮಹಿಳೆಯರಿಗೆ ಗೃಹಿಣಿಶಕ್ತಿ ಯೋಜನೆ ಜಾರಿ ಮಾಡುವುದಾಗಿ ಘೋಷಿಸಿದೆ.

ಎರಡು ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆದಿರುವ ಪ್ರಾದೇಶಿಕ ಪಕ್ಷ ಜೆಡಿಎಸ್ ಕೂಡ ನಾಡಿನ ಜನರ ಕಲ್ಯಾಣಕ್ಕಾಗಿ ರೈತ ಚೈತನ್ಯ, ಕೃಷಿಬಂಧು ಜಾರಿ ಮಾಡುವುದರ ಜೊತೆಗೆ ಈಗಾಗಲೇ ಪಂಚರತ್ನ ಯೋಜನೆಯನ್ನು ಜಾರಿ ಮಾಡುವುದಾಗಿ ಹೇಳಿಕೊಂಡಿದೆ.

ಹೀಗೆ ಮೂರು ಪಕ್ಷಗಳು ಮತದಾರರನ್ನು ಸೆಳೆಯಲು ನಾನಾ ರೀತಿಯ ಕಸರತ್ತು ನಡೆಸುತ್ತಿದ್ದು, ಉಚಿತವಾಗಿ ಭರಪೂರ ಕೊಡುಗೆಗಳನ್ನು ಕೊಡುವುದಾಗಿ ಘೋಷಣೆ ಮಾಡಿದೆ. ವಾಸ್ತವವಾಗಿ ರಾಜಕೀಯ ಪಕ್ಷಗಳು ಘೋಷಣೆ ಮಾಡುವ ಯೋಜನೆಗಳನ್ನು ಅನುಷ್ಠಾನ ಮಾಡಲು ಸಾಧ್ಯವೇ ಎಂಬುದನ್ನು ಲೆಕ್ಕ ಹಾಕಿದರೆ ಇದು ಸಾರ್ವಜನಿಕರಿಗೆ ಕಿತ್ತುಕೊಂಡೇ ಕಾರ್ಯಗತ ಮಾಡಬೇಕಾಗುತ್ತದೆ.

ಏಕೆಂದರೆ ರಾಜಕೀಯ ಪಕ್ಷಗಳು ಘೋಷಣೆ ಮಾಡುತ್ತಿರುವ ಯೋಜನೆಗಳನ್ನು ಅನುಷ್ಠಾನ ಮಾಡಬೇಕೆಂದರೆ ವಾರ್ಷಿಕವಾಗಿ ಒಂದೊಂದು ಯೋಜನೆಗೆ 10ರಿಂದ 12 ಸಾವಿರ ಕೋಟಿ ಅನುದಾನ ಬೇಕಾಗುತ್ತದೆ.

ಭಾರತದಲ್ಲೂ ಆರ್ಥಿಕ ಹಿಂಜರಿತ : ಸತ್ಯ ಮುಚ್ಚಿಡುತ್ತಿರುವ ಕೇಂದ್ರ ಸರ್ಕಾರ

ಕಾಂಗ್ರೆಸ್ ಘೋಷಣೆ ಮಾಡಿರುವ 200 ಮೆಗಾವ್ಯಾಟ್ ವಿದ್ಯುತ್ ಯೋಜನೆಯನ್ನು ಅನುಷ್ಠಾನ ಮಾಡಲು ವಾರ್ಷಿಕ 13 ಸಾವಿರ ಕೋಟಿ ಅನುದಾನ ಮೀಸಲಿಡಬೇಕಾಗುತ್ತದೆ ಎಂದು ಇಂಧನ ಇಲಾಖೆಯೇ ಹೇಳಿದೆ. ಕಳೆದ ವಾರ ಇಂಧನ ಸಚಿವ ವಿ.ಸುನೀಲ್‍ಕುಮಾರ್ ಮಾಡಿದ್ದ ಟ್ವೀಟರ್‍ನಲ್ಲಿ ಇದನ್ನು ಖಚಿತಪಡಿಸಿದ್ದರು.

ರಾಜ್ಯದ ಪ್ರತಿ ಕುಟುಂಬದ ಯಜಮಾನಿಗೆ ಮಾಸಿಕ 2 ಸಾವಿರ ರೂ. ಕೊಡುವುದಾಗಿ ಘೋಷಣೆ ಮಾಡಿರುವುದರಿಂದ ಈ ಯೋಜನೆಗೂ ವಾರ್ಷಿಕ ಸಾವಿರಾರು ಕೋಟಿ ಬೇಕಾಗುತ್ತದೆ.

ಬಿಜೆಪಿ ಘೋಷಣೆ ಮಾಡಿರುವ ಗೃಹಿಣಿ ಶಕ್ತಿ ಯೋಜನೆಗೂ ವಾರ್ಷಿಕ 10 ಸಾವಿರ ಕೋಟಿ ಅನುದಾನ ಮೀಸಲಿಡಬೇಕು. ಹೀಗೆ ರಾಜಕೀಯ ಪಕ್ಷಗಳು ಯಥೇಚ್ಛವಾಗಿ ಜನರಿಗೆ ಪುಕ್ಕಟೆ ಯೋಜನೆಗಳನ್ನು ಘೋಷಣೆ ಮಾಡುತ್ತಿರುವುದು ಪರೋಕ್ಷವಾಗಿ ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕಬೇಕಾಗುತ್ತದೆ.

ಅಂದರೆ ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಿತ್ತುಕೊಳ್ಳದೆ ಬೇರೆ ದಾರಿ ಇಲ್ಲ. ಸರ್ಕಾರದ ಬೊಕ್ಕಸಕ್ಕೆ ಆದಾಯದ ಮೂಲವಾಗಿರುವ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಹೆಚ್ಚಳ ಮಾಡಲೇಬೇಕಾಗುತ್ತದೆ.

ಇಂಧನ ಮೇಲಿನ ಮಾರಾಟ ತೆರಿಗೆ ಹೆಚ್ಚಳ ಮಾಡುವ ಅಧಿಕಾರ ಆಯಾ ರಾಜ್ಯ ಸರ್ಕಾರಗಳಿಗೆ ಇರುವುದರಿಂದ ಘೋಷಣೆ ಮಾಡಿರುವ ಯೋಜನೆಗಳ ಅನುಷ್ಠಾನಕ್ಕೆ ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕದೆ ಬೇರೆ ದಾರಿ ಇಲ್ಲ.
ಸರ್ಕಾರದ ಇನ್ನೊಂದು ಮೂಲವಾದ ನೋಂದಣಿ ಮತ್ತು ಮುದ್ರಾಂಕ ದರವನ್ನು ಪರಿಷ್ಕರಣೆ ಮಾಡಲೇಬೇಕಾಗುತ್ತದೆ. ಜೊತೆಗೆ ಸರ್ಕಾರದ ಬಜೆಟ್‍ನ ಶೇ. 20ರಷ್ಟು ಆದಾಯ ಹೊಂದಿರುವ ಮದ್ಯದ ದರವನ್ನು ಹೆಚ್ಚಿಸಲೇಬೇಕಾಗುತ್ತದೆ. ಇದು ಕೂಡ ಪ್ರತಿದಿನ ಸರ್ಕಾರದ ಬೊಕ್ಕಸಕ್ಕೆ ಹತ್ತಾರು ಕೋಟಿ ವರಮಾನ ನೀಡುತ್ತದೆ.

ಸಾಲದ ಸುಳಿಯಲ್ಲಿ ಎಸ್ಕಾಂಗಳು:
ರಾಜ್ಯದ ಐದು ಎಸ್ಕಾಂಗಳು ಸಾಲದ ಸುಳಿಯಲ್ಲಿ ಸಿಲುಕಿವೆ. ಪ್ರತಿ ವರ್ಷ ಸಾವಿರಾರು ಕೋಟಿ ರೂ. ಸಾಲದ ಹೊರೆ ಹೊತ್ತುಕೊಂಡಿವೆ. ಡಿಸೆಂಬರ್ 2022ರವರೆಗೆ 05 ಎಸ್ಕಾಂ, ಕೆಪಿಟಿಸಿಎಲ್ ಹಾಗೂ ಕೆಪಿಸಿಎಲ್ ಸುಮಾರು 72,169 ಕೋಟಿ ರೂ. ಸಾಲ ಮಾಡಿವೆ ಎಂದು ಇಂಧನ ಇಲಾಖೆ ಮಾಹಿತಿ ನೀಡಿದೆ.

ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಅಂದರೆ 2013-2018 ವರೆಗೆ ಎಸ್ಕಾಂ ಹಾಗೂ ಕೆಪಿಸಿಎಲ್ ಮತ್ತು ಕೆಪಿಟಿಸಿಎಲ್ ಸುಮಾರು 33,414.20 ಕೋಟಿ ರೂ. ಸಾಲ ಮಾಡಲಾಗಿತ್ತು. ಇತ್ತ ಮೈತ್ರಿ ಸರ್ಕಾರದ ವೇಳೆ ಎಸ್ಕಾಂಗಳ ಸಾಲದ ಮೊತ್ತ 27,178.88 ಕೋಟಿ ರೂ. ಆಗಿತ್ತು. ಪ್ರಸಕ್ತ ಬಿಜೆಪಿ ಸರ್ಕಾರದಲ್ಲಿ ಈವರೆಗೆ 56,111.35 ಕೋಟಿ ರೂ. ಸಾಲ ಮಾಡಲಾಗಿದೆ.

ಪಂಜಾಬ್‍ನಲ್ಲಿ ರಾಹುಲ್ ಯಾತ್ರೆ, ಜ.19ಕ್ಕೆ ಕಾಶ್ಮೀರ ಪ್ರವೇಶ

ಸಿದ್ದರಾಮಯ್ಯ ಸರ್ಕಾರ ಅವಧಿಯಲ್ಲಿ ಎಸ್ಕಾಂಗಳು ಮಾಡಿದ ಸಾಲದ ಪೈಕಿ 23,988.44 ಕೋಟಿ ಸಾಲ ಮರುಪಾವತಿ ಮಾಡಲಾಗಿದೆ. ಅದೇ ಮೈತ್ರಿ ಸರ್ಕಾರದ ವೇಳೆ ಮಾಡಿದ ಸಾಲದ ಪೈಕಿ ಸುಮಾರು 17,550 ಕೋಟಿ ರೂ. ಮರುಪಾವತಿ ಮಾಡಲಾಗಿದೆ.

ಪ್ರಸಕ್ತ ಬಿಜೆಪಿ ಸರ್ಕಾರ ಈವರೆಗೆ 45,550.63 ಕೋಟಿ ರೂ. ಸಾಲ ಮರು ಪಾವತಿ ಮಾಡಿರುವುದಾಗಿ ಇಲಾಖೆ ಅಂಕಿಅಂಶ ನೀಡಿದೆ. ಇಂಧನ ಸಚಿವರ ಕಚೇರಿ ನೀಡಿದ ಮಾಹಿತಿ ಪ್ರಕಾರ, ರಾಜ್ಯದ ಎಲ್ಲಾ ಎಸ್ಕಾಂಗಳು ಸುಮಾರು 29,329 ಕೋಟಿ ರೂ. ಸಾಲದ ಸುಳಿಯಲ್ಲಿವೆ. ಇನ್ನು ವಿದ್ಯುತ್ ಉತ್ಪಾದನಾ ನಿಗಮವಾದ ಕೆಪಿಸಿಎಲ್ 31,259 ಕೋಟಿ ರೂ. ಸಾಲದಲ್ಲಿ ಮುಳುಗಿದೆ. ಇತ್ತ ಕೆಪಿಟಿಸಿಎಲ್ ಸುಮಾರು 10,302 ಕೋಟಿ ರೂ. ಸಾಲದ ಸುಳಿಯಲ್ಲಿದೆ.

ನೀಡಬೇಕಾದ ಬಾಕಿ ಹಣ ಎಷ್ಟು?:
ಎಸ್ಕಾಂಗಳು ಸುಮಾರು 16,322 ಕೋಟಿ ರೂ ಬಾಕಿ ಬಿಲ್ ಪಾವತಿಸಬೇಕಿದೆ. ಕೆಪಿಸಿಎಲ್‍ಗೆ 9,936 ಕೋಟಿ ರೂ., ಕೇಂದ್ರ ಗ್ರಿಡ್‍ಗೆ 1,316 ಕೋಟಿ ರೂ., ಆರ್‍ಇ ಜನರೇಟರ್‍ಗೆ ಸುಮಾರು 2,621 ಕೋಟಿ ರೂ., ಕೆಪಿಟಿಸಿಎಲ್‍ಗೆ 1,905 ಕೋಟಿ ರೂ., ಯುಪಿಸಿಎಲ್‍ಗೆ 282 ಕೋಟಿ ರೂ. ಸೇರಿ ಸುಮಾರು 16,322 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ.

ಈಗಾಗಲೇ ಎಸ್ಕಾಂಗಳು ಆರ್ಥಿಕವಾಗಿ ದುರ್ಬಲವಾಗಿದ್ದು, ಸಾಲದ ಸುಳಿಯಲ್ಲಿ ಸಿಲುಕಿವೆ. ಮತ್ತೆ ಉಚಿತ ವಿದ್ಯುತ್ ಯೋಜನೆ ಜಾರಿಗೊಳಿಸಿದರೆ ಎಸ್ಕಾಂಗಳ ಆರ್ಥಿಕ ಸ್ಥಿತಿ ಮತ್ತಷ್ಟು ಹದಗೆಡುವುದರಲ್ಲಿ ಅನುಮಾನ ಇಲ್ಲ.

voters, free, gifts, political, parties,

Articles You Might Like

Share This Article