ನವದೆಹಲಿ, ಫೆ.9- ತೀವ್ರ ಕುತೂಹಲ ಕೆರಳಿಸಿರುವ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ನಾಳೆ ನಡೆಯಲಿದೆ. ಶಾಮ್ಲಿ, ಮುಝಾಫರ್‍ನಗರ್, ಬಗತ್, ಮೇರುತ್, ಘಾಜಿಯಾಬಾದ್, ಹಪುರ್, ಗೌತಮ್‍ಬುದ್ಧನಗರ್, ಬುಲಂಶಹರ್, ಆಲಿಘರ್, ಮಥುರಾ, ಆಗ್ರಾ ಸೇರಿ 11 ಜಿಲ್ಲೆಗಳ 58 ವಿಧಾನಸಭಾ ಕ್ಷೇತ್ರಗಳಿಗೆ ನಾಳೆ ಚುನಾವಣೆ ನಡೆಯಲಿದೆ. 623 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಒಟ್ಟು 403 ಕ್ಷೇತ್ರಗಳಿರುವ ಉತ್ತರ ಪ್ರದೇಶದಲ್ಲಿ ಏಳು ಹಂತದಲ್ಲಿ ಚುನಾವಣೆ ನಡೆಯಲಿದೆ. ಎರಡನೆ ಹಂತದ ಚುನಾವಣೆಗೆ ಫೆಬ್ರವರಿ 14ರಂದು ದಿನ ನಿಗದಿಯಾಗಿದೆ. ಅಂದು ಪಂಚರಾಜ್ಯಗಳ ಪೈಕಿ ಉತ್ತರಕಾಂಡ್, ಮಣಿಪುರ, ಗೋವಾ ರಾಜ್ಯಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಯಲಿದೆ. ಪಂಜಾಬ್‍ನಲ್ಲಿ ಫೆ.20ರಂದು ಮತದಾನ ನಡೆಯಲಿದೆ.
ಪಂಜಾಬ್‍ನಲ್ಲಿ ಏಕ-ಹಂತದ ಮತದಾನದಲ್ಲಿ 1,304 ಅಭ್ಯರ್ಥಿಗಳು 117 ಕ್ಷೇತ್ರಗಳಲ್ಲಿ ಕಣದಲ್ಲಿದ್ದಾರೆ. ಸಾಹ್ನೆವಾಲ್ ಮತ್ತು ಪಟಿಯಾಲ ಕ್ಷೇತ್ರಗಳಿಗೆ ತಲಾ 19 ಅಭ್ಯರ್ಥಿಗಳು ಸ್ರ್ಪಸುತ್ತಿದ್ದರೆ, ದಿನನಗರ ಕ್ಷೇತ್ರಕ್ಕೆ ಕನಿಷ್ಠ ಐದು ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಮಣಿಪುರದಲ್ಲಿ 176 ನಾಮಪತ್ರಗಳು ಕಳೆದ ಸಂಜೆಯವರೆಗೆ ಸಲ್ಲಿಕೆಯಾಗಿವೆ. ಇಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ಫೆಬ್ರವರಿ 11 ಕೊನೆಯ ದಿನವಾಗಿರುತ್ತದೆ. ಗೋವಾದಲ್ಲಿ 40 ಸ್ಥಾನಗಳಿಗೆ 301 ಅಭ್ಯರ್ಥಿಗಳು ಮತ್ತು ಉತ್ತರಾಖಂಡದ 70 ಸ್ಥಾನಗಳಿಗೆ 632 ಅಭ್ಯರ್ಥಿಗಳು ಸ್ರ್ಪಸುತ್ತಿದ್ದಾರೆ.
ಉತ್ತರಪ್ರದೇಶದ ಎರಡನೇ ಹಂತದ ಮತದಾನದ ವೇಳೆ 55 ವಿಧಾನಸಭಾ ಕ್ಷೇತ್ರಗಳಿಗೆ 586 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮೊದಲ ಹಂತದ ಮತದಾನ ನಡೆಯುವ ವೇಳೆಗೆ ಉತ್ತರ ಪ್ರದೇಶದಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ಎರಡನೇ ಹಂತದ ಪ್ರಚಾರದಲ್ಲಿ ತೊಡಗಿಸಿಕೊಂಡಿವೆ. ಮನೆ-ಮನೆ ಪ್ರಚಾರ ಮತ್ತು ವರ್ಚುವಲ್ ಸಭೆಗಳು ಮುಂದುವರೆದಿದೆ.
ರಾಜಕೀಯ ಚಟುವಟಿಕೆಗಳು ಪಂಜಾಬ್ ಮತ್ತು ಮಣಿಪುರ ಸೇರಿದಂತೆ ಇತರ ಚುನಾವಣೆಗೆ ಒಳಪಡುವ ರಾಜ್ಯಗಳಲ್ಲಿ ವೇಗ ಪಡೆದುಕೊಳ್ಳುತ್ತಿವೆ. ಕೊನೆ ಕ್ಷಣದ ಕಸರತ್ತಿನಲ್ಲಿ ತೊಡಗಿರುವ ರಾಜಕೀಯ ಪಕ್ಷಗಳು ಮತದಾರರ ಮನವೋಲಿಕೆಯಲ್ಲಿ ತೊಡಗಿವೆ.
ರಾಜ್ಯದಲ್ಲಿನ ಮೂರನೇ ಹಂತದ 59 ಸ್ಥಾನಗಳಿಗೆ 627 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇಟಾಹ್, ಮೆಹ್ರೋನಿ ಮತ್ತು ಮಹೋಬಾ ಸೇರಿದಂತೆ ಮೂರು ಕ್ಷೇತ್ರಗಳಲ್ಲಿ ತಲಾ ಗರಿಷ್ಠ 15 ಅಭ್ಯರ್ಥಿಗಳು ಸ್ರ್ಪಸುತ್ತಿದ್ದರೆ, ಕನಿಷ್ಠ ಮೂರು ಅಭ್ಯರ್ಥಿಗಳು ಕರ್ಹಾಲ್ ಸ್ಥಾನಕ್ಕೆ ಕಣದಲ್ಲಿದ್ದಾರೆ.
ನಾಲ್ಕನೆ ಹಂತಕ್ಕೆ ಅಸೂಚನೆ ಪ್ರಗತಿಯಲ್ಲಿದ್ದು, ನಿನ್ನೆ ಸಂಜೆ ಉಮೇದುವಾರಿಕೆ ಹಿಂಪಡೆಯಲು ಕೊನೆ ಕಾಲಾವಕಾಶವಾಗಿತ್ತು.
ಅಂತಿಮವಾಗಿ 59 ವಿಧಾನಸಭಾ ಕ್ಷೇತ್ರಗಳಿಗೆ 624 ಅಭ್ಯರ್ಥಿಗಳು ನಾಲ್ಕನೆ ಹಂತದಲ್ಲಿ ಕಣದಲ್ಲಿದ್ದಾರೆ. ಸವಾಜ್‍ಪುರಕ್ಕೆ ಗರಿಷ್ಠ 15 ಅಭ್ಯರ್ಥಿಗಳು ಸ್ರ್ಪಸುತ್ತಿದ್ದರೆ, ಪಾಲಿಯಾ ಮತ್ತು ಸೇವಾತಾ ಸ್ಥಾನ ಸೇರಿದಂತೆ ಎರಡು ಸ್ಥಾನಗಳಿಗೆ ಕನಿಷ್ಠ ಆರು ಅಭ್ಯರ್ಥಿಗಳು ಸ್ರ್ಪಸುತ್ತಿದ್ದಾರೆ. ಐದನೇ ಹಂತಕ್ಕೆ ನಾಮಪತ್ರ ಸಲ್ಲಿಕೆ ನಡೆಯುತ್ತಿದೆ. ಉತ್ತರ ಪ್ರದೇಶದಲ್ಲಿ ಒಟ್ಟು 965 ನಾಮಪತ್ರಗಳು ಸಲ್ಲಿಕೆಯಾಗಿದೆ.
ಉತ್ತರ ಪ್ರದೇಶದ ಏಳು ಹಂತದ ವಿಧಾನಸಭಾ ಚುನಾವಣೆಯ ಆರನೇ ಹಾಗೂ ಮಣಿಪುರದಲ್ಲಿ ಎರಡನೇ ಮತ್ತು ಕೊನೆಯ ಹಂತದ ಮತದಾನಕ್ಕೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆಯೂ ನಡೆಯುತ್ತಿದೆ. ಒಟ್ಟಾರೆಯಾಗಿ, ಉತ್ತರ ಪ್ರದೇಶದಲ್ಲಿ 149 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಮಣಿಪುರದಲ್ಲಿ ಕಳೆದ ಸಂಜೆಯವರೆಗೆ ಸುಮಾರು 13 ನಾಮಪತ್ರಗಳು ಸಲ್ಲಿಕೆಯಾಗಿವೆ.
ಶುಕ್ರವಾರದವರೆಗೆ ನಾಮಪತ್ರ ಸಲ್ಲಿಸಬಹುದಾಗಿದ್ದು, ಸೋಮವಾರದಂದು ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ಫೆಬ್ರವರಿ 16 ಕೊನೆಯ ದಿನವಾಗಿರುತ್ತದೆ.ಏಳನೇ ಮತ್ತು ಕೊನೆಯ ಹಂತದ ಚುನಾವಣೆಗೆ ಫೆ.17 ರವರೆಗೆ ನಾಮಪತ್ರ ಸಲ್ಲಿಸಬಹುದು, 18 ರಂದು ಪರಿಶೀಲನೆಯನ್ನು ಕೈಗೊಳ್ಳಲಾಗುತ್ತದೆ. ಉಮೇದುವಾರಿಕೆ ಹಿಂಪಡೆಯಲು ಫೆಬ್ರವರಿ 21 ಕೊನೆಯ ದಿನವಾಗಿರುತ್ತದೆ.
ಏಳನೇ ಹಂತದಲ್ಲಿ ಒಟ್ಟು 2,05,51,521 ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿರುತ್ತಾರೆ. ಅವರಲ್ಲಿ 1,09,01,009 ಪುರುಷರು, 96,49,495 ಮಹಿಳೆಯರು ಮತ್ತು 1,017 ತೃತೀಯಲಿಂಗಿ ಮತದಾರರು ಸೇರಿದ್ದಾರೆ.
