ಉಪರಾಷ್ಟಪತಿ ಚುನಾವಣೆ : ಇಂದು ಮತದಾನ, ಸಂಜೆ 5 ಗಂಟೆಯ ನಂತರ ಮತ ಎಣಿಕೆ

Social Share

ನವದೆಹಲಿ,ಆ.6- ದೇಶದ 14ನೇ ಉಪರಾಷ್ಟ್ರಪತಿ ಆಯ್ಕೆಗೆ ಇಂದು ಸಂಸತ್ ಭವನದಲ್ಲಿ ಚುನಾವಣೆ ನಡೆದಿದ್ದು, ಸಂಜೆ ವೇಳೆಗೆ ಫಲಿತಾಂಶ ಪ್ರಕಟಗೊಳ್ಳುವ ಸಾಧ್ಯತೆ ಇದೆ. ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ಸಂಸತ್ ಭವನದ ಕೊಠಡಿ ಸಂಖ್ಯೆ 63ರಲ್ಲಿ ಮತದಾನ ನಡೆದಿದೆ.

ಬಿಜೆಪಿ ನೇತೃತ್ವದ ಎನ್‍ಡಿಎ ಹಾಗೂ ಮಿತ್ರ ಪಕ್ಷಗಳ ಅಭ್ಯರ್ಥಿಯಾಗಿ ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಜಗದೀಪ್ ಧನ್ಕರ್ ಮತ್ತು ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಕಾಂಗ್ರೆಸ್‍ನ ಹಿರಿಯ ನಾಯಕಿ ಮಾರ್ಗರೇಟ್ ಆಳ್ವಾ ಕಣದಲ್ಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವರಾದ ಅಮಿತ್ ಷಾ, ರಾಜ್ ನಾಥ್ ಸಿಂಗ್, ನಿರ್ಮಲ ಸೀತಾರಾಮನ್, ಪ್ರಹ್ಲಾದ್ ಜೋಶಿ ಸೇರಿದಂತೆ ಲೋಕಸಭಾ ಹಾಗೂ ರಾಜ್ಯಸಭಾ ಸದಸ್ಯರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಜಗದೀಪ್ ಧನ್ಕರ್‍ಗೆ ಎನ್‍ಡಿಎಯೇತರ ಪಕ್ಷಗಳಾದ ವೈಎಸ್‍ಆರ್‍ಸಿಪಿ, ಬಿಎಸ್‍ಪಿ, ಎಐಎಡಿಎಂಕೆ, ಬಿಜೆಡಿ, ಜೆಡಿಯು, ಶಿವಸೇನೆ(ಬಂಡಾಯ), ಆರ್‍ಎಲ್‍ಜೆಪಿ ಬೆಂಬಲ ಪ್ರಕಟಿಸಿವೆ. ಹೀಗಾಗಿ 515ಕ್ಕೂ ಹೆಚ್ಚು ಮತಗಳು ಲಭ್ಯವಾಗುವ ಸಾಧ್ಯತೆಯಿದೆ.
ವಿಪಕ್ಷಗಳ ಅಭ್ಯರ್ಥಿಯಾದ ಮಾರ್ಗರೇಟ್ ಆಳ್ವಾಗೆ ಕಾಂಗ್ರೆಸ್, ಎನ್‍ಸಿಪಿ, ಜೆಎಂಎಂ, ಡಿಎಂಕೆ, ಟಿಆರ್‍ಎಸ್, ಎಎಪಿ ಬೆಂಬಲ ಘೋಷಿಸಿವೆ. ಪ್ರತಿಪಕ್ಷಗಳ ಸಾಲಿನಲ್ಲಿ ಗುರುತಿಸಿಕೊಂಡಿದ್ದ ಟಿಎಂಸಿ ಮತದಾನದಿಂದ ದೂರ ಉಳಿದಿದೆ.

ಲೋಕಸಭೆಯಲ್ಲಿ 23 ಮತ್ತು ರಾಜ್ಯಸಭೆಯಲ್ಲಿ 16 ಸಂಸದರನ್ನು ಹೊಂದಿರುವ ತೃಣಮೂಲ ಕಾಂಗ್ರೆಸ್ ಚುನಾವಣೆಯಲ್ಲಿ ಮತದಾನದಿಂದ ದೂರವಿರಲು ನಿರ್ಧರಿಸಿದ್ದು, ಎನ್‍ಡಿಎ ಅಭ್ಯರ್ಥಿ ಗೆಲುವಿಗೆ ದಾರಿ ಸುಗಮ ಮಾಡಿಕೊಟ್ಟಿದೆ.

ಮತದಾನದಿಂದ ದೂರ ಉಳಿದಿರುವ ಕುರಿತು ಲೋಕಸಭೆಯ ತೃಣಮೂಲ ಕಾಂಗ್ರೆಸ್‍ನ ಸಂಸದೀಯ ನಾಯಕ ಸುದೀಪ್ ಬಂಡೋಪಾಧ್ಯಾಯ ಎಲ್ಲ ಸಂಸದರಿಗೂ ಪತ್ರ ಬರೆದು ಮಾಹಿತಿ ನೀಡಿದ್ದಾರೆ. ಈ ಪತ್ರವನ್ನು ಸಂಸದ ಶಿರಿಸ್ ಅಧಿಕಾರಿ ಬಹಿರಂಗಪಡಿಸಿದ್ದಾರೆ.

ಆಳ್ವಾ ಪ್ರಾದೇಶಿಕ ಪಕ್ಷವಾದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‍ಎಸ್), ಆಮ್ ಆದ್ಮಿ ಪಕ್ಷ , ಎಐಎಂಐಎಂ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಬೆಂಬಲ ಪಡೆದಿದ್ದಾರೆ. ಬಿಜೆಪಿ ಬೆಂಬಲಿತ ಎನ್‍ಡಿಎ ಮೈತ್ರಿಕೂಟದ ಅಭ್ಯರ್ಥಿ ಜಗದೀಪ್ ಧನಕರ್ ಗೆಲುವು ಬಹುತೇಕ ಖಚಿತವಾಗಿದೆ.

ಹಾಲಿ ಉಪರಾಷ್ಟಪತಿ ಎಂ.ವೆಂಕಯ್ಯನಾಯ್ಡು ಅವರ ಅಧಿಕಾರಾವಧಿ ಆಗಸ್ಟ್ 10ಕ್ಕೆ ಮುಕ್ತಾಯಗೊಳ್ಳುತ್ತಿದ್ದು, ಆಗಸ್ಟ್ 11 ರಂದು ನೂತನ ಉಪರಾಷ್ಟ್ರಪತಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸಂಸತ್‍ನ 790 ಸದಸ್ಯರ ಪೈಕಿ 788 ಮಂದಿ ಎಲೆಕ್ಟ್ರೋಲ್ ಕಾಂಗ್ರೆಸ್ ಸದಸ್ಯರು ಮತ ಚಲಾಯಿಸಿದ್ದಾರೆ.

ಇದರಲ್ಲಿ ರಾಜ್ಯಸಭೆಯ 233 ಚುನಾಯಿತ ಸದಸ್ಯರು, 12 ನಾಮನಿರ್ದೇಶಿತ ಸದಸ್ಯರು, ಲೋಕಸಭೆಯ 543 ಚುನಾಯಿತ ಸದಸ್ಯರು ಮತ್ತು 2 ನಾಮನಿರ್ದೇಶಿತ ಸದಸ್ಯರು ಮತದಾನದ ಹಕ್ಕು ಹೊಂದಿದ್ದಾರೆ. ಉಪರಾಷ್ಟ್ರಪತಿಯಾಗಿ ಆಯ್ಕೆಯಾದವರು ರಾಜ್ಯಸಭೆಯಲ್ಲಿ ಅಧ್ಯಕ್ಷರಾಗಿಯೂ ಕೆಲಸ ಮಾಡಲಿದ್ದಾರೆ. ಹೀಗಾಗಿ ಉಪರಾಷ್ಟ್ರಪತಿಯ ಆಯ್ಕೆ ಆಡಳಿತ ಮತ್ತು ಪ್ರತಿಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದ್ದು, ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರತಿಪಕ್ಷಗಳ ಬೆಂಬಲ ಪಡೆದು ತನ್ನದೇ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದ ತೃಣಮೂಲ ಕಾಂಗ್ರೆಸ್ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಅಭ್ಯರ್ಥಿ ಆಯ್ಕೆ ವೇಳೆ ತನ್ನೊಂದಿಗೆ ಚರ್ಚೆ ಮಾಡಿಲ್ಲ ಎಂಬ ನೆಪ ಹೇಳಿ ಮತದಾನದಿಂದ ದೂರ ಉಳಿದಿತ್ತು. ಒಂದು ವೇಳೆ ತೃಣಮೂಲ ಕಾಂಗ್ರೆಸ್ ಬೆಂಬಲ ನೀಡಿದ್ದರೂ ಕೂಡ ಪ್ರತಿಪಕ್ಷಗಳ ಅಭ್ಯರ್ಥಿ ಗೆಲ್ಲುವ ಸಾಧ್ಯತೆಗಳು ಕಡಿಮೆ ಇತ್ತು.

Articles You Might Like

Share This Article