ವೆಂಕಯ್ಯ ನಾಯ್ಡು ಅವರಿಗೆ ಗೌರವಪೂರ್ವಕ ಬೀಳ್ಕೊಡುಗೆ

Social Share

ನವದೆಹಲಿ , ಆ.8 – ಉಪರಾಷ್ಟ್ರಪತಿ ಹಾಗೂ ರಾಜ್ಯಸಭಾ ಸದಸ್ಯರಾಗಿ ಐದು ವರ್ಷ ಯಶಸ್ವಿಯಾಗಿ ಕೆಲಸ ಮಾಡಿದ ಎಂ.ವೆಂಕಯ್ಯ ನಾಯ್ಡು ಅವರಿಗೆ ಇಂದು ಸದನದಲ್ಲಿ ಗೌರವಪೂರ್ಣ ಬೀಳ್ಕೊಡುಗೆ ನೀಡಲಾಯಿತು. ನಾಯ್ಡು ಅವರ ಅಧಿಕಾರಾವಧಿ ಬುಧವಾರ ಅಂತ್ಯವಾಗಲಿದ್ದು, ಉತ್ತರಾಧಿಕಾರಿ ಜಗದೀಪ್ ಧನಕರ್ ಅವರು ಆಗಸ್ಟ್ 11ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಮೊಹರಂ ಮತ್ತು ರಕ್ಷಾ ಬಂಧನದ ನಿಮಿತ್ತ ಮಂಗಳವಾರ ಮತ್ತು ಗುರುವಾರ ಸದನದ ಕಲಾಪಗಳಿಗೆ ರಜೆ ಇದೆ. ಹೀಗಾಗಿ ಇಂದು ಸದನದಲ್ಲಿ ನಾಯ್ಡು ಅವರಿಗೆ ಬೀಳ್ಕೊಡುಗೆ ನೀಡಲಾಯಿತು. ಪ್ರಧಾನಿ ನರೇಂದ್ರ ಮೋದಿ, ಇತರ ಉನ್ನತ ನಾಯಕರು ಮತ್ತು ಸದಸ್ಯರು ವೆಂಕಯ್ಯ ನಾಯ್ಡು ಅವರ ಗುಣಗಾನ ಮಾಡಿದರು.

ಸದನದ ಬೀಳ್ಕೊಡುಗೆ ಬಳಿಕ ಸಂಜೆ ಜಿ.ಎಂ.ಸಿ ಬಾಲಯೋಗಿ ಆಡಿಟೋರಿಯಂನಲ್ಲಿ ಸದನದ ಎಲ್ಲ ಸದಸ್ಯರ ಪರವಾಗಿ ನಾಯ್ಡು ಅವರಿಗೆ ಸನ್ಮಾನ ಸಮಾರಂಭ ಆಯೋಜಿಸಲಾಗಿದೆ. ಅಲ್ಲಿ ಪ್ರಧಾನ ಮಂತ್ರಿಗಳು ನಾಯ್ಡು ಅವರಿಗೆ ಸ್ಮರಣಿಕೆ ನೀಡಿ ಸನ್ಮಾನಿಸಲಿದ್ದಾರೆ.

ರಾಜ್ಯಸಭೆಯ ಉಪಾಧ್ಯಕ್ಷರು ಬೀಳ್ಕೊಡುಗೆ ಭಾಷಣ ಮಾಡಲಿದ್ದಾರೆ. ಬಳಿಕ ಉಪರಾಷ್ಟ್ರಪತಿ ಮತ್ತು ರಾಜ್ಯಸಭೆಯ ಅಧ್ಯಕ್ಷರಾಗಿದ್ದ ನಾಯ್ಡು ಅವರ ಅವಯ ನಡೆದ ಯಶಸ್ವಿ ಅನುಷ್ಠಾನಗಳನ್ನು ವಿವರಿಸುವ ಪುಸ್ತಕವನ್ನು ಪ್ರಧಾನ ಮಂತ್ರಿಯವರು ಬಿಡುಗಡೆ ಮಾಡಲಿದ್ದಾರೆ. ನಂತರ ಸಂತೋಷ ಕೂಟ ನಡೆಯಲಿದೆ.

Articles You Might Like

Share This Article