ಬೆಂಗಳೂರು, ಜು.12- ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿದ್ದ ವರುಣನ ಆರ್ಭಟಕ್ಕೆ ಮನೆಗೋಡೆ ಕುಸಿದು ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲ್ಲೂಕಿನ ಮುರ್ಕುವಾಡ ಗ್ರಾಮದಲ್ಲಿ ರುಕ್ಮಿಣಿ ವಿಠ್ಠಲ ಮಾಚಕ್ಕ (37), ಶ್ರೀದೇವಿ ವಿಠ್ಠಲ ಮಾಚಕ್ಕ (17) ಗೋಡೆ ಕುಸಿದು ಸಾವನ್ನಪ್ಪಿದ ತಾಯಿ-ಮಗಳು. ರಾತ್ರಿ ನಿದ್ರೆ ಮಾಡುತ್ತಿದ್ದ ತಾಯಿ-ಮಗಳ ಮೇಲೆ ಬೆಳಗಿನ ಜಾವ ಗೋಡೆ ಕುಸಿದು ದುರ್ಮರಣಕ್ಕೀಡಾಗಿದ್ದಾರೆ.
ಮಣ್ಣಿನ ಗೋಡೆಯಾಗಿದ್ದರಿಂದ ನಿರಂತರ ಮಳೆಗೆ ಗೋಡೆ ನೆನೆದು ಕುಸಿತವಾಗಿದೆ.ಘಟನಾ ಸ್ಥಳಕ್ಕೆ ತಹಸೀಲ್ದಾರ್ ಪ್ರಕಾಶ್ ಗಾಯಕ್‍ವಾಡ್, ತಾಪಂ ಕಾರ್ಯನಿರ್ವಹಣಾಕಾರಿ ಗಸ್ತಿ ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಇತ್ತ ಜಿಲ್ಲೆಯ ಕಿಡಗು ಪ್ರದೇಶದಲ್ಲಿ ದನದ ಕೊಟ್ಟಿಗೆ ಕುಸಿದು ಎರಡು ಜಾನುವಾರುಗಳು ಸಾವನ್ನಪ್ಪಿವೆ. ಕುಶಾಲನಗರ ತಾಲ್ಲೂಕಿನಲ್ಲಿ ಮಾದಪ್ಪ ಎಂಬುವವರಿಗೆ ಸೇರಿದ ದನಗಳು ಕೊಟ್ಟಿಗೆ ಕುಸಿತದಿಂದ ಸಾವನ್ನಪ್ಪಿವೆ.
ಕರಾವಳಿ, ಮಲೆನಾಡು ಭಾಗದಲ್ಲಿ ಮಳೆ ನಿಲ್ಲುವ ಸೂಚನೆ ಕಂಡುಬರುತ್ತಿಲ್ಲ. ಸತತ ಮಳೆಯಿಂದ ಪ್ರವಾಹಭೀತಿ ಎದುರಾಗಿದ್ದು, ಜಿಲ್ಲೆಯ ಹಲವು ಭಾಗಗಳಲ್ಲಿ ಕಡಲ್ಕೊರೆತದ ಕಂಟಕ ಎದುರಾಗಿದೆ. ಉಡುಪಿ, ದಕ್ಷಿಣ ಕನ್ನಡದ ಜನ ಭಾರೀ ಮಳೆಯಿಂದ ಅಕ್ಷರಶಃ ಹೈರಾಣಾಗಿದ್ದಾರೆ. ಮಳೆಯ ಅಬ್ಬರಕ್ಕೆ ನದಿಗಳು ಉಕ್ಕಿ ಹರಿಯುತ್ತಿದ್ದು, ನದಿ ತೀರದಲ್ಲಿರುವ ಜನ ಆತಂಕದ ಪರಿಸ್ಥಿತಿ ಎದುರಿಸುವಂತಾಗಿದೆ.
ಅರಬ್ಬಿ ಸಮುದ್ರದ ಅಲೆಗಳ ತೀವ್ರತೆ ಹೆಚ್ಚಾಗಿದ್ದು, ಅಲೆಗಳ ಹೊಡೆತಕ್ಕೆ ಕಡಲ್ಕೊರೆತ ಹೆಚ್ಚಾಗಿದೆ. ಉಡುಪಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಹಲವಾರು ಗ್ರಾಮಗಳು ಜಲಾವೃತವಾಗಿವೆ. ಹೊಲ-ಗದ್ದೆಗಳು ನೀರಿನಿಂದ ಆವೃತವಾಗಿವೆ. ದಕ್ಷಿಣ ಕನ್ನಡದಲ್ಲಿ ವರುಣನ ಆರ್ಭಟಕ್ಕೆ ಮರದ ಸೇತುವೆ ಕೊಚ್ಚಿಹೋಗಿ ಸಂಪರ್ಕ ಕಡಿತಗೊಂಡಿದೆ.
ಕುಮಾರಧಾರಾ ನದಿಗೆ ಕಟ್ಟಿದ್ದ ಮರದ ಸೇತುವೆ ಮುರಿದು ಬಿದ್ದಿರುವುದರಿಂದ ಓಡಾಡಲು ಸೇತುವೆ ಇಲ್ಲದೆ ಜನ ಪರದಾಡುವಂತಾಗಿದೆ. ಕಡಲ್ಕೊರೆತಕ್ಕೆ ಬಾಟಪ್ಪಾಡಿ ರಸ್ತೆ ಕೊಚ್ಚಿಹೋಗಿದ್ದು, ಸಮುದ್ರ ತೀರದ ಜನರನ್ನು ಸ್ಥಳಾಂತರ ಮಾಡಲಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲೂ ವರುಣನ ಆರ್ಭಟ ಉಂಟಾಗಿದ್ದು, ಜೋಯ್ಡಾ ತಾಲ್ಲೂಕಿನ ಹಣಸಿಘಟ್ಟದಲ್ಲಿ ಮತ್ತೆ ಭೂಕುಸಿತ ಉಂಟಾಗಿದೆ. ಕಲ್ಲು-ಮಣ್ಣು ರಸ್ತೆ ಮೇಲೆ ಕುಸಿಯುತ್ತಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಇನ್ನೂ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಜನರು ಜಾಗೃತರಾಗಿರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.