ಬೆಂಗಳೂರು,ಫೆ.7- ಬಹುನಿರೀಕ್ಷಿತ ಮೈಸೂರು- ಬೆಂಗಳೂರು ಎಕ್ಸ್‍ಪ್ರೆಸ್ ಹೈವೇಗೆ ಯಾವ ಹೆಸರಿಡಬೇಕು ಎಂಬುದು ರಾಜಕೀಯ ಪಕ್ಷಗಳ ನಡುವೆ ವಾಕ್ಸಮರಕ್ಕೆ ನಾಂದಿಯಾಗಿದೆ.
ಈ ಎಕ್ಸ್‍ಪ್ರೆಸ್ ಹೈವೇಗೆ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ರಾಜಕೀಯ ಲಾಭಕ್ಕಾಗಿ ಒಂದೊಂದು ಹೆಸರುಗಳನ್ನು ಮುಂದಿಡುತ್ತಿರುವುದು ಕಗ್ಗಂಟಾಗಿ ಪರಿಣಮಿಸಿದೆ. ಎಕ್ಸ್‍ಪ್ರೆಸ್ ಹೈ ವೇಗೆ ಬಿಜೆಪಿ, ಕಾವೇರಿ ಇಲ್ಲವೇ ಮೈಸೂರು ಮಹಾಸಂಸ್ಥಾನದ ಕೃಷ್ಣರಾಜ ಒಡೆಯರ್ ಹೆಸರು ಇಡಬೇಕೆಂದು ಒತ್ತಾಯಿಸಿದೆ. ಇನ್ನು ಜೆಡಿಎಸ್ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹೆಸರಿಡಲು ಒತ್ತಾಯಿಸಿದ್ದರೆ, ಕಾಂಗ್ರೆಸ್ ಕಾದುನೋಡುವ ತಂತ್ರ ಅನುಸರಿಸುತ್ತಿದೆ.
ಮುಂದಿನ ತಿಂಗಳು ಬೆಂಗಳೂರು-ಮೈಸೂರು ಎಕ್ಸ್‍ಪ್ರೆಸ್ ವೇ ಉದ್ಘಾಟನೆಯಾಗುವ ನಿರೀಕ್ಷೆಯಿದ್ದು, ಪ್ರಧಾನಿ ನರೇಂದ್ರಮೋದಿ ಅವರೇ ಲೋಕಾರ್ಪಣೆ ಮಾಡಲಿದ್ದಾರೆ. ಅಷ್ಟಕ್ಕೂ ಮೈಸೂರು-ಬೆಂಗಳೂರು ಎಕ್ಸ್‍ಪ್ರೆಸ್ ಹೈ ವೇಗೆ ನಾಮಕರಣ ಮಾಡುವುದರ ಹಿಂದೆ ಮೂರು ಪಕ್ಷಗಳಲ್ಲಿ ರಾಜಕೀಯ ಲೆಕ್ಕಾಚಾರ ಅಡಗಿದೆ.
ಮುಂಬೈ ಮೇಲಿನ ಉಗ್ರ ದಾಳಿ ಇನ್ನು ಜೀವಂತ ; ಅಮೆರಿಕ
ಮೈಸೂರು ಎಕ್ಸ್‍ಪ್ರೆಸ್ ರಸ್ತೆ ಹೆದ್ದಾರಿ ಹಲವು ಜಿಲ್ಲೆಗಳಲ್ಲಿ ಹಾದು ಹೋಗುತ್ತದೆ. ಹಳೇ ಮೈಸೂರು ಭಾಗದ ಜಿಲ್ಲೆಗಳಾದ ಬೆಂಗಳೂರು, ರಾಮನಗರ, ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಈ ರಸ್ತೆ ಹಾದು ಹೋಗುತ್ತದೆ. ಈ ಭಾಗದಲ್ಲಿ ಒಕ್ಕಲಿಗ ಸಮುದಾಯವೇ ಪ್ರಾಬಲ್ಯ ಸಾಧಿಸಿದೆ.
ಗಮನಾರ್ಹ ಸಂಗತಿ ಎಂದರೆ ಹಳೇ ಮೈಸೂರು ಭಾಗದ ಈ ಜಿಲ್ಲೆಗಳಲ್ಲಿ ಬೆಂಗಳೂರು, ಮೈಸೂರಿನ ಕೆಲವೆಡೆ ಹೊರತುಪಡಿಸಿದರೆ ಇನ್ನುಳಿದ ಕಡೆ ಅಷ್ಟಾಗಿ ಪ್ರಬಲ ಮತ ಬ್ಯಾಂಕ್ ಹೊಂದಿಲ್ಲ. ಈ ಭಾಗದ ಮತದಾರರು ಜೆಡಿಎಸ್ ಅಥವಾ ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ಮತದಾರರು. ಹೀಗಾಗಿ, ಬಿಜೆಪಿ ಈ ಭಾಗದ ಮೇಲೆ ಹೆಚ್ಚಿನ ಗಮನ ಹರಿಸಿದೆ.
ಮುಂಭರುವ 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 224 ಕ್ಷೇತ್ರಗಳ ಪೈಕಿ 150 ಕ್ಷೇತ್ರಗಳನ್ನು ಗೆಲ್ಲಲೇ ಬೇಕೆಂದು ಪಣ ತೊಟ್ಟಿರುವ ಬಿಜೆಪಿ, ಹಳೇ ಮೈಸೂರು ಭಾಗದ ಜಿಲ್ಲೆಗಳಲ್ಲಿ ಪ್ರಾಬಲ್ಯ ಸಾಧಿಸಿದರೆ ಮಾತ್ರ ಈ ಗುರಿಯನ್ನು ತಲುಪಲು ಸಾಧ್ಯವಿದೆ.
ಈ ಎಲ್ಲಾ ಕಾರಣಗಳಿಂದಾಗಿ ಬೆಂಗಳೂರು – ಮೈಸೂರು ಎಕ್ಸ್ಪ್ರೆಸ್ ವೇಗೆ ನಾಮಕರಣ ಮಾಡುವ ವಿಚಾರದಲ್ಲೂ ಪ್ರಬಲ ಸಮುದಾಯದ ಮತ ಬ್ಯಾಂಕ್ ಗಮನದಲ್ಲಿ ಇಟ್ಟುಕೊಂಡು ನಿರ್ಧಾರ ಕೈಗೊಳ್ಳಬೇಕಾದ ಅಗತ್ಯತೆ ಬಿಜೆಪಿ ಇದೆ. ಈ ಮೂಲಕ ಚುನಾವಣೆ ವೇಳೆ ಜನರ ಮನಗೆಲ್ಲಲು ಎಕ್ಸ್ಪ್ರೆಸ್ ವೇಯನ್ನು ರಹದಾರಿ ಮಾಡಿಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ.
ಉದ್ಘಾಟನೆ ಹೊತ್ತಿಗೆ ಎಕ್ಸ್ಪ್ರೆಸ್ ವೇಗೆ ಹೆಸರು ಅಂತಿಮಗೊಳಿಸಲು ಬಿಜೆಪಿ ನಿರ್ಧರಿಸಿದೆ. ನಾಮಕರಣ ವಿಚಾರ ರಾಜ್ಯ ಬಿಜೆಪಿ ಹಾಗೂ ಕೇಂದ್ರ ಬಿಜೆಪಿಯ ಉನ್ನತ ವಲಯದಲ್ಲಿ ಚರ್ಚೆಯಾಗಿ ನಿರ್ಧಾರ ಆಗಲಿದೆ.
ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಈ ಹಿಂದೆ ಬೆಂಗಳೂರು – ಮೈಸೂರು ಎಕ್ಸ್ಪ್ರೆಸ್ ವೇಗೆ ಕಾವೇರಿ ನದಿಯ ಹೆಸರನ್ನು ಇಡಬೇಕೆಂದು ಮನವಿ ಮಾಡಿದ್ದರು. ಎಕ್ಸ್‍ಪ್ರೆಸ್ ವೇ ನಿರ್ಮಾಣಕ್ಕೆ ಶ್ರಮಿಸಿರುವ ಪ್ರತಾಪ್ ಸಿಂಹ, ರಸ್ತೆಗೆ ಕಾವೇರಿ ಹೆಸರಿಡಿ ಎಂದು ಕೇಂದ್ರ ಹೆದ್ದಾರಿ ಹಾಗೂ ರಸ್ತೆ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದರು. ಪ್ರತಾಪ್ ಸಿಂಹ ಅವರ ಈ ಪತ್ರ ಭಾರೀ ವಿವಾದ ಸೃಷ್ಟಿಸಿತ್ತು. ಆದರೆ ಪ್ರತಾಪ್ ಸಿಂಹ ಅವರ ಪ್ರಸ್ತಾಪಕ್ಕೆ ಬಿಜೆಪಿಯಲ್ಲೇ ಬೆಂಬಲ ಸಿಗಲಿಲ್ಲ.
ಮದ್ರಾಸ್ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಗೌರಿ ಪ್ರಮಾಣ ವಚನ
ಬಿಜೆಪಿಯ ಹಿರಿಯ ಮುಖಂಡ, ಮಾಜಿ ಸಿಎಂ ಎಸ್. ಎಂ. ಕೃಷ್ಣ ಅವರು ಈ ಸಂಬಂಧ ಕೇಂದ್ರಕ್ಕೆ ಪತ್ರ ಬರೆದಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರನ್ನು ಈ ಹೆದ್ದಾರಿಗೆ ಇಟ್ಟು ಗೌರವ ಸೂಚಿಸಿ ಎಂದು ಮನವಿ ಮಾಡಿದ್ದರು.
ಇತ್ತ ಪ್ರತಾಪ್ ಸಿಂಹ ಅವರು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದರು. ಈ ದೇಶದ ಬಹುತೇಕ ಎಕ್ಸ್‍ಪ್ರೆಸ್ ವೇ ಹೆಸರುಗಳನ್ನು ಆ ಭಾಗದ ನದಿಯ ಹೆಸರಿನಲ್ಲೇ ಇಡಲಾಗಿದೆ ಎಂದು ವಾದಿಸಿದ್ದರು. ಆದರೆ ಇದಕ್ಕೆ ತಿರುಗೇಟು ನೀಡಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ನಾಲ್ವಡಿ ಅವರ ಹೆಸರನ್ನು ಇಡುವ ಮೂಲಕ ಮೈಸೂರು ಸಂಸ್ಥಾನವನ್ನು ಆಳಿದ ಜನಾನುರಾಗಿ ಪ್ರಭುವಿಗೆ ಗೌರವ ಸೂಚಿಸಬೇಕು ಎಂದಿದ್ದರು.
ಕಾಂಗ್ರೆಸ್ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರೂ ಕೂಡ ಎಸ್.ಎಂ.ಕೃಷ್ಣ ಅವರ ನಿಲುವಿನ ಪರ ನಿಂತಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕರ್ನಾಟಕ ರಾಜ್ಯದ ಆಧುನೀಕರಣಕ್ಕೆ, ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಹೆಸರೇ ಇಡಿ ಎಂದು ಕಾಂಗ್ರೆಸ್ ಕೂಡ ವಾದಿಸಿದೆ.
ದೇವೇಗೌಡರ ಹೆಸರಿಡಲು ಜೆಡಿಎಸ್ ಆಗ್ರಹ!
ಹಳೇ ಮೈಸೂರು ಭಾಗದಲ್ಲಿ ಭದ್ರ ನೆಲೆ ಹೊಂದಿರುವ ಜೆಡಿಎಸ್, ಈ ಭಾಗದಲ್ಲಿ ಹಾದು ಹೋಗುವ ರಸ್ತೆಗೆ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ಹೆಸರಿಡಿ ಎಂದು ಆಗ್ರಹಿಸಿದೆ. ಈ ಭಾಗದಲ್ಲಿ ದೇವೇಗೌಡರು ದೊಡ್ಡ ನಾಯಕರು. ಹೀಗಾಗಿ ಅವರ ಹೆಸರು ಇಟ್ಟರೆ ಸೂಕ್ತ ಎಂದು ವಾದಿಸಿದೆ. ಇತ್ತ ಒಕ್ಕಲಿಗ ಎನ್‍ಆರ್‍ಐ ಯೂತ್ ಬ್ರಿಗೇಡ್ ಕೂಡ ನಾಮಕರಣ ಜಟಾಪಟಿಯ ಅಖಾಡಕ್ಕೆ ಧುಮುಕಿದೆ.
ಭೂಕಂಪ ಪೀಡಿತ ಟರ್ಕಿಗೆ ಸಹಾಯಹಸ್ತ ಚಾಚಿದ ಭಾರತ
ಈ ಸಂಬಂಧ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದು, ಎಕ್ಸ್ಪ್ರೆಸ್ ವೇಗೆ ಆದಿ ಚುಂಚನಗಿರಿ ಮಠದ ದಿವಂಗತ ಬಾಲಗಂಗಾಧರನಾಥ ಶ್ರೀಗಳ ಹೆಸರಿಡುವಂತೆ ಆಗ್ರಹಿಸಿದೆ. ಅಂತಿಮವಾಗಿ ಕೇಂದ್ರ ಸರ್ಕಾರ, ಬಿಜೆಪಿ ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳುತ್ತೆ ಅನ್ನೋದು ಭಾರೀ ಕುತೂಹಲ ಕೆರಳಿಸಿದೆ.
war , over, name, Bengaluru-Mysuru, expressway,