ನವದೆಹಲಿ, ಫೆ. 7- ಗಾಯದ ಸಮಸ್ಯೆ ಯಿಂದಾಗಿ ಅರಬ್ಬರ ನಾಡಿನಲ್ಲಿ ನಡೆದ ಚುಟುಕು ವಿಶ್ವಕಪ್ ಅನ್ನು ತಪ್ಪಿಸಿಕೊಂಡಿದ್ದು ತುಂಬಾ ಬೇಸರ ತಂದಿದೆ ಎಂದು ಭಾರತದ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ವಿಶ್ವಕಪ್‍ನಲ್ಲಿ ತಂಡದ ಸದಸ್ಯನಾಗಬೇಕೆಂಬ ಬಯಕೆ ಇದ್ದು ಅದಕ್ಕಾಗಿ ಮುಂದಿನ 18 ತಿಂಗಳ ಕಾಲ ಕಠಿಣ ಶ್ರಮ ಪಡುತ್ತೇನೆ, ಏಕೆಂದರೆ ಮುಂದಿನ ಒಂದೂವರೆ ವರ್ಷದಲ್ಲಿ ಭಾರತ ತಂಡವು ಚುಟುಕು ಹಾಗೂ ಏಕದಿನ ವಿಶ್ವಕಪ್‍ನಲ್ಲಿ ಪಾಲ್ಗೊಳ್ಳಲಿದೆ ಎಂದು ಅವರು ಹೇಳಿದರು.
ನಿನ್ನೆ ನಡೆದ ವೆಸ್ಟ್‍ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ತಮ್ಮ ಸ್ಪಿನ್ ಮೋಡಿಯಿಂದ ಸುಂದರ್ 3 ವಿಕೆಟ್‍ಗಳನ್ನು ಕಬಳಿಸುವ ಮೂಲಕ ಉತ್ತಮ ಕಮ್‍ಬ್ಯಾಕ್ ಮಾಡಿದ್ದಾರೆ. ನಾವು ಉತ್ತಮ ಪ್ರದರ್ಶನ ನೀಡುತ್ತಿದ್ದರೆ ತಂಡದಲ್ಲಿ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಾ ಹೋಗುತ್ತೇವೆ, ಮುಂದಿನ 18 ತಿಂಗಳಲ್ಲಿ ಐಸಿಸಿ ನಡೆಸುವ 2 ಪ್ರಮುಖ ವಿಶ್ವಕಪ್ ಬರುವುದರಿಂದ ನಾನು ಅದರತ್ತ ಚಿತ್ತ ಹರಿಸಿದ್ದು ಭಾರತ ತಂಡವನ್ನು ವಿಶ್ವಕಪ್‍ನಲ್ಲಿ ಪ್ರತಿನಿಸಲು ಕಾಯುತ್ತಿದ್ದೇನೆ ಎಂದು ಹೇಳಿದರು.
2017ರಂದು ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ ವಾಷಿಂಗ್ಟನ್ ಸುಂದರ್ ಚುಟುಕು ಮಾದರಿ ಕ್ರಿಕೆಟ್‍ನಲ್ಲಿ ಭಾರತ ತಂಡಕ್ಕೆ ಉತ್ತಮ ಕಾಣಿಕೆ ನೀಡಿದ್ದು, ಕಳೆದ ವರ್ಷವಷ್ಟೇ ಟೆಸ್ಟ್ ಪಂದ್ಯಕ್ಕೂ ಪಾದಾರ್ಪಣೆ ಮಾಡಿದ್ದರು. ವಾಷಿಂಗ್ಟನ್ ಸುಂದರ್ ಅವರನ್ನು 2021ರ ಚುಟುಕು ವಿಶ್ವಕಪ್‍ಗೆ ಆಯ್ಕೆ ಮಾಡಲಾಗಿತ್ತಾದರೂ ಕೈ ಬೆರಳಿನ ಗಾಯದಿಂದಾಗಿ ಐಪಿಎಲ್ ಅನ್ನು ಅರ್ಧಕ್ಕೆ ಮೊಟಕು ಗೊಳಿಸಿದ ಸುಂದರ್ ವಿಶ್ವಕಪ್‍ನಿಂದಲೂ ದೂರ ಉಳಿದರು.
ಕಾಮನಬಿಲ್ಲು ನಾಡೆಂದು ಬಿಂಬಿಸಿಕೊಂಡಿದ್ದ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಹಾಗೂ ಟ್ವೆಂಟಿ-20 ಸರಣಿಗೆ ಸುಂದರ್ ಆಯ್ಕೆಯಾಗಿದ್ದರಾದರೂ ಕೊರೊನಾದಿಂದಾಗಿ ಇಡೀ ಸರಣಿಯಿಂದ ಹೊರಗುಳಿದಿದ್ದರೂ, ಈಗ ಮತ್ತೆ ತಂಡಕ್ಕೆ ಮರಳಿರುವ ಅವರು ಮುಂಬರುವ ಚುಟುಕು ವಿಶ್ವಕಪ್‍ನಲ್ಲಿ ಆಡುವ ಹೆಬ್ಬಯಕೆಯನ್ನು ಹೊಂದಿದ್ದಾರೆ.
