ರಾಜ್ಯದಲ್ಲಿ ಉತ್ತಮ ಮುಂಗಾರು, ಜಲಾಶಯಗಳ ಒಳ ಹರಿವು ಹೆಚ್ಚಳ

ಬೆಂಗಳೂರು, ಜು.5- ರಾಜ್ಯದಲ್ಲಿ ನೈರುತ್ಯ ಮುಂಗಾರು ಚುರುಕಾಗಿರುವುದರಿಂದ ಪ್ರಮುಖ ಜಲಾಶಯಗಳ ಜಲಾನಯನ ಭಾಗದಲ್ಲೂ ಉತ್ತಮ ಮಳೆಯಾಗುತ್ತಿದೆ. ಇದರಿಂದ ಜಲಾಶಯಗಳ ಒಳ ಹರಿವಿನ ಪ್ರಮಾಣ ಗಣನೀಯ ವಾಗಿ ಏರಿಕೆಯಾಗುತ್ತಿದೆ.

ಜೀವನದಿ ಕಾವೇರಿ ಜಲಾನಯನ ಭಾಗದಲ್ಲೂ ಒಳ್ಳೆಯ ಮಳೆಯಾಗುತ್ತಿದ್ದು, ಕೆಆರ್ ಎಸ್ ಜಲಾಶಯಕ್ಕೂ ಒಳ ಹರಿವಿನ ಪ್ರಮಾಣ ಹೆಚ್ಚಳವಾಗಿದೆ. ಸದ್ಯದಲ್ಲೇ ಜಲಾ ಶಯದ ನೀರಿನ ಮಟ್ಟ ನೂರು ಅಡಿ ತಲುಪುವ ಸಾಧ್ಯತೆಗಳಿವೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ, ಕೆಆರ್ ಎಸ್ ಜಲಾಶಯದ ಗರಿಷ್ಠ ನೀರಿನ ಸಂಗ್ರಹದ ಪ್ರಮಾಣ 124.80 ಅಡಿಗಳಾಗಿದ್ದು, ಪ್ರಸ್ತುತ ಸುಮಾರು 98 ಅಡಿಗಳಷ್ಟು ನೀರಿದ್ದು, ಕಳೆದ ವರ್ಷಕ್ಕಿಂತ ಹೆಚ್ಚಿನ ಪ್ರಮಾಣದ ನೀರಿದೆ. ಕಳೆದ ವರ್ಷ ಇದೇ ಅವ?ಯಲ್ಲಿ 89.20 ಅಡಿಗಳಷ್ಟು ನೀರು ಸಂಗ್ರಹವಾಗಿತ್ತು.

ಕಾವೇರಿ ಕೊಳ್ಳದ ಜಲಾಶಯ ಗಳಾದ ಹಾರಂಗಿ, ಹೇಮಾವತಿ, ಕಬಿನಿ ಹಾಗೂ ಕೆಆರ್ ಎಸ್ ಜಲಾಶಯಗಳ ಒಳಹರಿವು ಏರಿಕೆಯಾಗುತ್ತಿದೆ. ಕೆಆರ್ ಎಸ್ ಗೆ 2000ಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರು ?ರುತ್ತಿದೆ. ಕಬಿನಿ ಜಲಾಶಯಕ್ಕೆ ಸುಮಾರು 5000 ಕ್ಯೂಸೆಕ್ಸ್ ಹರಿದುಬರುತ್ತಿದೆ. ಹಾರಂಗಿ ಜಲಾಶಯಕ್ಕೆ ಒಂದೂವರೆ ಸಾವಿರ ಹಾಗೂ ಹೇಮಾವತಿ ಜಲಾಶಯಕ್ಕೆ ಎರಡುವರೆ ಸಾವಿರ ಕ್ಯೂಸೆಕ್ಸ್ ನಷ್ಟು ನೀರು ಹರಿದು ಬರುತ್ತಿದೆ.

ಹಾಗೆಯೇ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ನೀರಿನ ಮಟ್ಟ ಹೆಚ್ಚಾಗಿದೆ. ಕಳೆದ ವರ್ಷ ಮುಂಗಾರು ಮಳೆ ಉತ್ತಮವಾಗಿ ಆಗಿದ್ದರಿಂದ ಎಲ್ಲ ಜಲಾಶಯಗಳು ಭರ್ತಿಯಾಗಿದ್ದವು.

ಈ ವರ್ಷವೂ ಮುಂಗಾರು ಮಳೆ ವಾಡಿಕೆ ಪ್ರಮಾಣದಲ್ಲಿ ಬೀಳುತ್ತಿರುವುದರಿಂದ ಜಲಾಶಯ ಗಳು ಸಕಾಲದಲ್ಲಿ ಭರ್ತಿಯಾಗುವ ಸಾಧ್ಯತೆಗಳಿವೆ. ಈ ವರ್ಷ ನೀರಿನ ಸಮಸ್ಯೆಗಳು ಉದ್ಭವ ವಾಗುವ ಸಾಧ್ಯತೆಗಳು ವಿರಳ ಎನ್ನುತ್ತಾರೆ ಹವಮಾನ ತಜ್ಞರು.

ಮುಂಗಾರು ಮಳೆ ಕ್ರಿಯಾಶೀಲ ವಾಗಿರುವುದರಿಂದ ಮಳೆ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಹೀಗಾಗಿ ಜಲಾಶಗಳ ಒಳ ಹರಿವಿನ ಪ್ರಮಾಣವೂ ಹೆಚ್ಚಾಗುವ ಸಾಧ್ಯತೆಗಳಿವೆ.

Sri Raghav

Admin