ಪಂಚರತ್ನ ಕಾರ್ಯಕ್ರಮಗಳ ಜೊತೆ ಜಲ ಪ್ರಣಾಳಿಕೆ ಬಿಡುಗಡೆಗೆ ಜೆಡಿಎಸ್ ನಿರ್ಧಾರ

Social Share

ಬೆಂಗಳೂರು, ಫೆ 19- ಮುಂಬರುವ ವಿಧಾನಸಭೆ ಚುನಾವಣೆಗೆ ಪಂಚರತ್ನ ಕಾರ್ಯಕ್ರಮಗಳ ಜತೆಗೆ ಜಲ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲು ಜೆಡಿಎಸ್ ಉದ್ದೇಶಿಸಿದೆ. ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ 123 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬರಬೇಕೆಂಬ ಗುರಿ ಹೊಂದಿರುವ ಜೆಡಿಎಸ್ ಪಂಚರತ್ನ ಕಾರ್ಯಕ್ರಮದ ಅಂಗವಾಗಿ ನೆನೆಗುದಿಗೆ ಬಿದ್ದಿರುವ ರಾಜ್ಯದ ನೀರಾವರಿ ಯೋಜನೆಗಳ ಅನುಷ್ಠಾನದ ವಾಗ್ದಾನ ಮಾಡಲಿದೆ.
ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ನೀರಾವರಿ ವಿಚಾರದಲ್ಲಿ ಸಮತೋಲನ ಕಾಪಾಡುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ. ಕೋವಿಡ್ ಉಲ್ಬಣದಿಂದಾಗಿ ಮುಂದೂಡಲಾಗಿದ್ದ ಜನತಾ ಜಲಧಾರೆಯನ್ನು ಮಹಾಶಿವರಾತ್ರಿ ಹಬ್ಬದ ಬಳಿಕ ಫೆಬ್ರವರಿ ಮೊದಲ ವಾರದಲ್ಲಿ ಆರಂಭಿಸಲು ತೀರ್ಮಾನಿಸಲಾಗಿದೆ. ರಾಮನಗರದ ಶ್ರೀ ಚಾಮುಂಡೇಶ್ವರಿ ದೇವಾಲಯದ ಬಳಿ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಸೇರಿದಂತೆ ಪಕ್ಷದ ಪ್ರಮುಖರು ಚಾಲನೆ ನೀಡಲಿದ್ದಾರೆ.
ಅಲ್ಲಿಂದ 15 ದಿಕ್ಕುಗಳಿಗೆ ಪವಿತ್ರ ಗಂಗಾಜಲ ಸಂಗ್ರಹಕ್ಕಾಗಿ 15 ಗಂಗಾರಥ ವಾಹನಗಳು ತೆರಳಲಿವೆ. ಕಾವೇರಿ, ಕಬಿನಿ, ಕೃಷ್ಣಾ ಸೇರಿದಂತೆ ಪ್ರಮುಖ ನದಿಗಳ ಪವಿತ್ರ ಜಲವನ್ನು ಸಂಗ್ರಹಿಸಲಾಗುತ್ತದೆ. ಪವಿತ್ರ ಸ್ಥಳದಲ್ಲಿ ಪೂಜೆ-ಪುನಸ್ಕಾರ ಮಾಡುವುದಲ್ಲದೆ ಕಳಶ ಹಾಗೂ ಕಲಾತಂಡಗಳ ಮೆರವಣಿಗೆಯೊಂದಿಗೆ ಕಳಶಗಳಲ್ಲಿ ಜಲಸಂಗ್ರಹವನ್ನು ಮಾಡಲಾಗುತ್ತದೆ.
ಗಂಗಾರಥಗಳು ಹಾದುಹೋಗುವ ಮಾರ್ಗದ ಆಯಾ ಕ್ಷೇತ್ರದ ಪಕ್ಷದ ಮುಖಂಡರು ಸ್ವಾಗತ ಮಾಡಿ ಬೀಳ್ಕೊಡಲಿದ್ದಾರೆ. ಇದೇ ರೀತಿ ಸುಮಾರು 15 ದಿನಗಳ ಕಾಲ ನಾಡಿನ 15 ದಿಕ್ಕುಗಳಿಂದಲೂ ಜಲ ಸಂಗ್ರಹಿಸಿ ಬರುವ ಗಂಗಾರಥಗಳನ್ನು ಅರಮನೆ ಮೈದಾನದಲ್ಲಿ ಬರಮಾಡಿಕೊಳ್ಳಲಾಗುತ್ತದೆ. ರಥಗಳಲ್ಲಿ ತಂದ ಪವಿತ್ರ ಗಂಗಾ ಜಲವನ್ನು ಪೂಜೆ ಮಾಡಿ ಬ್ರಹ್ಮ ಕಳಶಕ್ಕೆ ಅಭಿಷೇಕ ಮಾಡಲಾಗುತ್ತದೆ.
ಅಲ್ಲಿ ದೊಡ್ಡ ಸಮಾವೇಶ ಮಾಡಿ ಪಕ್ಷದ ಎಲ್ಲ ಮುಖಂಡರು ಮೈತ್ರಿಕೂಟದ ಎಲ್ಲರಿಗೂ ಆಹ್ವಾನಿಸಲಾಗುತ್ತದೆ. ಅಲ್ಲದೆ, ವಿವಿಧ ಮಠಾೀಶರು, ನೀರಾವರಿ ತಜ್ಞರು, ಕನ್ನಡಪರ ಹೋರಾಟಗಾರರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗುತ್ತದೆ.
ಆ ನಂತರ ಪಕ್ಷದ ಕೇಂದ್ರ ಕಚೇರಿ ಜೆಪಿ ಭವನಕ್ಕೆ ಬ್ರಹ್ಮ ಕಳಶ ತಂದು ಸುಮಾರು ಒಂದು ವರ್ಷ ಕಾಲ ಪೂಜಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Articles You Might Like

Share This Article