ಬೆಂಗಳೂರು, ನ.2- ರಾಜ್ಯದಲ್ಲಿ ಹಿಂಗಾರು ಮಳೆ ಆರಂಭದಲ್ಲೇ ದುರ್ಬಲಗೊಂಡ ಪರಿಣಾಮ ಉತ್ತರ ಕರ್ನಾಟಕ ಭಾಗದಲ್ಲಿ ತೀವ್ರ ಮಳೆಯ ಕೊರತೆಯಾಗಿದೆ.ಅಕ್ಟೋಬರ್ ತಿಂಗಳಲ್ಲಿ ರಾಜ್ಯದಲ್ಲಿ ಒಟ್ಟಾರೆ ವಾಡಿಕೆ ಪ್ರಮಾಣದ ಮಳೆಯಾಗಿದ್ದರೂ ಹಿಂಗಾರು ಹಂಗಾಮಿನ ಬೆಳೆಯನ್ನು ಪ್ರಮುಖವಾಗಿ ಬೆಳೆ ಬೆಳೆಯುವ ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಕೊರತೆ ಉಂಟಾಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ.
ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಅಕ್ಟೋಬರ್‌ನಲ್ಲಿ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ವಾಡಿಕೆಗಿಂತ ಶೇ.18ರಷ್ಟು, ಮಲೆನಾಡು ಭಾಗದಲ್ಲಿ ಶೇ.42ರಷ್ಟು ಹಾಗೂ ಕರಾವಳಿ ಭಾಗದಲ್ಲಿ ಶೇ.33ರಷ್ಟು ಅಧಿಕ ಮಳೆಯಾಗಿದೆ. ಆದರೆ, ಉತ್ತರ ಒಳನಾಡಿನಲ್ಲಿ ವಾಡಿಕೆಗಿಂತ ಶೇ.33 ರಷ್ಟು ಮಳೆ ಕಡಿಮೆಯಾಗಿದೆ. ಅಕ್ಟೋಬರ್‌ನಲ್ಲಿ 107 ಮಿ.ಮೀ. ವಾಡಿಕೆ ಮಳೆ ಈ ಭಾಗದಲ್ಲಿದ್ದು, ಕೇವಲ 71 ಮಿ.ಮೀ.ನಷ್ಟು ಮಾತ್ರ ಮಳೆಯಾಗಿದೆ.ರಾಜ್ಯದಲ್ಲಿ ಅಕ್ಟೋಬರ್ ತಿಂಗಳ ವಾಡಿಕೆ ಮಳೆ 131 ಮಿ.ಮೀ. ಇದ್ದು, 137 ಮಿ.ಮೀ.ನಷ್ಟು ಮಳೆ ಬಿದ್ದಿದ್ದು, ವಾಡಿಕೆಗಿಂತ ಶೇ.5ರಷ್ಟು ಹೆಚ್ಚು ಮಳೆಯಾಗಿದೆ.
ಆದರೆ, ಜೂನ್ ಒಂದರಿಂದ ಅಕ್ಟೋಬರ್ ಅಂತ್ಯದವರೆಗೆ ರಾಜ್ಯದಲ್ಲಿ ವಾಡಿಕೆಗಿಂತ ಶೇ.4ಷ್ಟು ಅಧಿಕ ಮಳೆಯಾಗಿದೆ. ಕರಾವಳಿಯಲ್ಲಿ ಶೇ.3ರಷ್ಟು, ಉತ್ತರ ಒಳನಾಡಿನಲ್ಲಿ ಶೇ.21ರಷ್ಟು ಅಧಿಕ ಮಳೆಯಾಗಿದ್ದರೆ, ಮಲೆನಾಡು ಭಾಗದಲ್ಲಿ ಶೇ.7ರಷ್ಟು ಹಾಗೂ ದಕ್ಷಿಣ ಒಳನಾಡಿನಲ್ಲಿ ಶೇ.9ರಷ್ಟು ಮಳೆ ಕೊರತೆಯಾಗಿರುವುದು ಕಂಡುಬಂದಿದೆ.
ಜನವರಿ ಒಂದರಿಂದ ಅಕ್ಟೋಬರ್ ಅಂತದ್ಯವರೆಗೆ ರಾಜ್ಯದಲ್ಲಿ ಶೇ.19ರಷ್ಟು ವಾಡಿಕೆಗಿಂತ ಅಧಿಕ ಮಳೆ ಬಿದ್ದಿದೆ. ಈ ಅವಧಿಯಲ್ಲಿ ರಾಜ್ಯದ ವಾಡಿಕೆ ಮಳೆ ಪ್ರಮಾಣ 1102 ಮಿ.ಮೀ. ಆಗಿದ್ದು, 1306 ಮಿ.ಮೀ.ನಷ್ಟು ಮಳೆ ಬಿದ್ದಿದೆ. ದಕ್ಷಿಣ ಒಳನಾಡಿನಲ್ಲಿ ಶೇ.12ರಷ್ಟು, ಉತ್ತರ ಒಳನಾಡಿನಲ್ಲಿ ಶೇ.26ರಷ್ಟು, ಮಲೆನಾಡು ಭಾಗದಲ್ಲಿ ಶೇ.12ರಷ್ಟು ಹಾಗೂ ಕರಾವಳಿ ಭಾಗದಲ್ಲಿ ಶೇ.21ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.
ಮುಂಗಾರು ಹಂಗಾಮಿನ ರಾಗಿ, ತೊಗರಿ, ಅವರೆ, ಹಲಸಂದೆ ಸೇರಿದಂತೆ ವಿವಿಧ ಬೆಳೆಗಳಿಗೆ ಮಳೆಯ ಅಗತ್ಯವಿದೆ. ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಒಣಹವೆ ಇದ್ದು, ಚಳಿ ಆರಂಭವಾಗಿದೆ. ಇಂದು ಬೆಂಗಳೂರು ಸೇರಿದಂತೆ ಹಲವೆಡೆ ಬೆಳಿಗ್ಗೆ ಮಂಜು ಮುಸುಕಿದ ವಾತಾವರಣ ಕಂಡು ಬಂದಿದೆ.
ನಾಳೆಯಿಂದ ರಾಜ್ಯದಲ್ಲಿ ಮೂರು-ನಾಲ್ಕು ದಿನಗಳ ಕಾಲ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆಗಳಿವೆ. ನಿರೀಕ್ಷೆಯಂತೆ ಮಳೆ ಬಂದರೆ ರೈತರಿಗೆ ಅನುಕೂಲ ಆಗಲಿದೆ. ಇಲ್ಲದಿದ್ದರೆ ಕೈಗೆ ಬಂದ ತುತ್ತು, ಬಾಯಿಗೆ ಬಾರದಂತಹ ಪರಿಸ್ಥಿತಿ ರೈತರಿಗೆ ಆಗಲಿದೆ.
