ಬೆಂಗಳೂರು,ಜ.21- ರಾಜ್ಯದಲ್ಲಿ ಕೋವಿಡ್ ಹಾಗೂ ಓಮಿಕ್ರಾನ್ ಸೋಂಕು ಹೆಚ್ಚುತ್ತಿರುವ ನಡುವೆಯೂ ಸರ್ಕಾರ ವಿಧಿಸಿದ್ದ ವಾರಾಂತ್ಯದ ಲಾಕ್‍ಡೌನ್ ರದ್ದಾಗಲಿದ್ದು, ಎಂದಿನಂತೆ ತಿಂಗಳಾಂತ್ಯದವರೆಗೂ ರಾತ್ರಿ ಕರ್ಫ್ಯೂ ಮಾತ್ರ ಮುಂದುವರೆಯಲಿದೆ. ಒಂದು ಕಡೆ ಸ್ವಪಕ್ಷೀಯರು, ಮತ್ತೊಂದು ಕಡೆ ವಿರೋಧ ಪಕ್ಷದವರು, ಜತೆಗೆ ಉದ್ಯಮ ವಲಯ ಮತ್ತು ಸಾರ್ವಜನಿಕರಿಂದಲೂ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತಿಂಗಳಾಂತ್ಯದವರೆಗೆ ವಿಸಿದ್ದ ವಾರಾಂತ್ಯದ ಲಾಕ್‍ಡೌನ್‍ನನ್ನು ಇಂದಿನಿಂದಲೇ ಜಾರಿಯಾಗುವಂತೆ ತೆಗೆದುಹಾಕಲು ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ.
ಮುಖ್ಯ ಮಂತ್ರಿಗಳ ನೇತೃತ್ವದಲ್ಲಿ ನಡೆದ ಸುದೀರ್ಘ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಆರ್.ಆಶೋಕ್ ಮಾಧ್ಯಮಗಳಿಗೆ ವೀಕೆಂಡ್ ಕರ್ಫ್ಯೂ ರದ್ದತಿ ಕುರಿತು ಮಾಹಿತಿ ನೀಡಿದರು. ಒಂದು ವೇಳೆ ಕರ್ಫ್ಯೂ ಸಡಿಲಗೊಂಡ ನಂತರ ಆಸ್ಪತ್ರೆ ಸೇರುವ ಸೋಂಕಿತರ ಸಂಖ್ಯೆ ಹೆಚ್ಚಾದಲ್ಲಿ ಮತ್ತೆ ವೀಕೆಂಡ್ ಕರ್ಫ್ಯೂ ವಿಧಿಸಲಾಗುವುದು, ಹೀಗಾಗಿ ಜನ ಕೊರೋನಾ ನಿಯಮ ಪಾಲಿಸಬೇಕು ಎಂದು ಅವರು ಮನವಿ ಮಾಡಿಕೊಂಡರು.
ಆದರೆ, ಪ್ರತಿ ದಿನ ರಾತ್ರಿ 10 ಗಂಟೆಯಿಂದ ಮುಂಜಾನೆ 5 ಗಂಟೆವರೆಗೂ ವಿಸಿರುವ ರಾತ್ರಿ ಕಫ್ರ್ಯೂ ಜ.31ರವರೆಗೆ ಮುಂದುವರೆಯಲಿದ್ದು, ಮಾರ್ಗಸೂಚಿಯಲ್ಲಿ ವಿಧಿಸಿರುವ ಕೆಲವು ನಿಯಮಗಳು ಕೂಡ
ಮುಂದುವರೆಯಲಿವೆ. ಮಾರುಕಟ್ಟೆಗಳು, ಸಂತೆ ಮೈದಾನ, ಬಸ್ ಹಾಗೂ ರೈಲು ನಿಲ್ದಾಣ, ಮಾಲ್‍ಗಳು ಸೇರಿದಂತೆ ಮತ್ತಿತರ ಕಡೆ ಜನ ಜಂಗಳಿ ಸೇರುವಂತಿಲ್ಲ. ಹೋಟೆಲ್‍ಗಳು, ಬಾರ್ ಆ್ಯಂಡ್ ರೆಸ್ಟೋರೆಂಟ್, ಡಿಸ್ಕೋತೆಕ್, ಕ್ಲಬ್ ಮತ್ತಿತರ ಕಡೆ ಒಟ್ಟು ಆಸನ ಸಾಮಥ್ರ್ಯದ ಶೇ.50ರಷ್ಟು ಮಂದಿ ಮಾತ್ರ ಕೂರಬೇಕು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿಂದು ಸಚಿವರಾದ ಆರ್.ಅಶೋಕ್, ಡಾ.ಕೆ.ಸುಧಾಕರ್, ಡಾ.ಸಿ.ಎನ್.ಅಶ್ವತ್ಥನಾರಾಯಣ, ಬಿ.ಶ್ರೀರಾಮುಲು, ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್, ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ತಜ್ಞರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಬಿಬಿಎಂಪಿ ಅಧಿಕಾರಿಗಳ ಜತೆ ನಡೆದ ಸಭೆಯಲ್ಲಿ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ.
ರಾಜ್ಯದಲ್ಲಿ ಫೆ.15ರವರೆಗೆ ಕೋವಿಡ್ ಸೋಂಕು ಹೆಚ್ಚಿದರೂ ಸಾರ್ವಜನಿಕರ ಆರೋಗ್ಯದ ಮೇಲೆ ಹೆಚ್ಚಿನ ದುಷ್ಪರಿಣಾಮ ಬೀರುವುದಿಲ್ಲ ಎಂದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‍ಸಿ)ವರದಿ ನೀಡಿದ ಹಿನ್ನೆಲೆಯಲ್ಲಿ ಅಳೆದೂ ತೂಗಿ ಸರ್ಕಾರ ಈಗಾಗಲೇ ವಿಸಿದ್ದ ವಾರಾಂತ್ಯದ ಕಫ್ರ್ಯೂವನ್ನು ತೆಗೆದು ಹಾಕುವ ಒಮ್ಮತದ ತೀರ್ಮಾನ ಕೈಗೊಂಡಿತು.
ಐಐಎಸ್‍ಸಿ ಹಾಗೂ ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆ ನೀಡಿದ್ದ ವರದಿಯನ್ನು ಸಭೆಯಲ್ಲಿ ಮಂಡಿಸಿದ ತಜ್ಞರು, ವಾರಾಂತ್ಯದ ಲಾಕ್‍ಡೌನ್ ಮತ್ತು ರಾತ್ರಿ ಕಫ್ರ್ಯೂವಿನಿಂದ ಹೆಚ್ಚೆಂದರೆ 7ಸಾವಿರ ಪ್ರಕರಣಗಳು ಕಡಿಮೆಯಾಗಿವೆ. 300 ಮಂದಿ ಆಸ್ಪತ್ರೆಗೆ ದಾಖಲಾಗಿರುವುದು ಹಾಗೂ 80ಮಂದಿಯ ಸಾವನ್ನು ತಪ್ಪಿಸಿರುವುದನ್ನು ಬಿಟ್ಟರೆ ಸೋಂಕಿನಿಂದ ಯಾರಿಗೂ ಆರೋಗ್ಯದ ಮೇಲೆ ಪರಿಣಾಮ ಬೀರಿಲ್ಲ ಎಂದು ಪ್ರತಿಪಾದಿಸಿದರು.
ಪ್ರಸ್ತುತ ರಾಜ್ಯದಲ್ಲಿ ಪ್ರತಿದಿನ ಒಂದು ಲಕ್ಷ ಕೋವಿಡ್ ಸೋಂಕು ಬಂದರೂ ಹಾಸಿಗೆಗಳ ಸಮಸ್ಯೆ ಇಲ್ಲ. ಅಲ್ಲದೆ, ಒಂದು ಮತ್ತು ಎರಡನೇ ಅಲೆಯಂತೆ ಸೋಂಕು ಕಾಣಿಸಿಕೊಂಡವರಿಗೆ ಆಕ್ಸಿಜನ್ ಕೊರತೆ, ಇಲ್ಲವೇ ಐಸಿಯುಗೆ ದಾಖಲಾಗುವ ಪರಿಸ್ಥಿತಿಯೂ ಉದ್ಭವವಾಗುತ್ತಿಲ್ಲ. ಬಹುತೇಕರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ನಿರ್ಬಂಧಗಳನ್ನು ವಿಸುವುದರಿಂದ ಸರ್ಕಾರಕ್ಕೆ ಆರ್ಥಿಕವಾಗಿ ನಷ್ಟವೇ ಹೊರತು ಉಪಯೋಗವಿಲ್ಲ ಎಂದು ತಜ್ಞರು ಹೇಳಿದರು.
ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ರಾಜಧಾನಿ ಬೆಂಗಳೂರು ಸೇರಿದಂತೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸಾಕಷ್ಟು ಬೆಡ್‍ಗಳು, ಆಕ್ಸಿಜನ್, ಐಸಿಯು ಎಲ್ಲವೂ ಲಭ್ಯವಿವೆ. ಈಗ ಜನರಿಗೆ ಶೀತ, ಕೆಮ್ಮು, ನೆಗಡಿ, ಜ್ವರ ಕಾಣಿಸಿಕೊಂಡಿರುವುದರಿಂದ ಸ್ವಲ್ಪ ಭಯಭೀತರಾಗಿದ್ದಾರೆ. ಇದರಿಂದ ಯಾರಿಗೂ ತೊಂದರೆಯಾಗುವುದಿಲ್ಲ ಎಂದು ಮುಖ್ಯಮಂತ್ರಿಗೆ ಮನವರಿಕೆ ಮಾಡಿಕೊಟ್ಟರು.
ಬೆಂಗಳೂರಿನಲ್ಲಿ ಬಿಬಿಎಂಪಿಯ 8 ವಲಯಗಳು ಸೇರಿ ಶೇ.25.76ರಷ್ಟು ಪಾಸಿಟಿವಿಟಿ ದರ ಇದೆ. ಇಷ್ಟು ಪ್ರಮಾಣದಲ್ಲಿದ್ದರೂ ಆಸ್ಪತ್ರೆಗೆ ಬೆರಳೆಣಿಕೆಯಷ್ಟು ಮಾತ್ರ ದಾಖಲಾಗುತ್ತಿದ್ದಾರೆ. ಸರ್ಕಾರ ಈಗಿರುವ ನಿಯಮಗಳನ್ನು ಬದಲಾಯಿಸುವುದು ಸೂಕ್ತ ಎಂದು ಸಲಹೆ ಮಾಡಿದ್ದಾರೆ.
ಪ್ರಮುಖವಾಗಿ ಹೋಟೆಲ್, ಬಾರ್, ಪಬ್, ರೆಸ್ಟೋರೆಂಟ್, ಡಾಬಾ ಮತ್ತಿತರ ಕಡೆ ಶೇ.50:50ರಷ್ಟು ಜನ ಸಂದಣಿಗೆ ಅವಕಾಶ ಮಾಡಿಕೊಡಬೇಕು. ಸದ್ಯದ ಪರಿಸ್ಥಿತಿಯಲ್ಲಿ ಚಿತ್ರೋದ್ಯಮಗಳನ್ನು ಪರಿಸ್ಥಿತಿಗೆ ಅನುಗುಣವಾಗಿ ಪ್ರಾರಂಭಿಸಲಿ ಎಂದು ತಜ್ಞರ ಸಮಿತಿ ಹೇಳಿದೆ.
ಶಾಲಾ-ಕಾಲೇಜುಗಳನ್ನು ಪರಿಸ್ಥಿತಿ ನೋಡಿಕೊಂಡು ಆರಂಭಿಸಲು ಆಯಾ ಜಿಲ್ಲಾಕಾರಿಗಳಿಗೆ ಜವಾಬ್ದಾರಿ ನೀಡಬೇಕು. ಒಂದೊಂದು ಜಿಲ್ಲೆಯಲ್ಲಿ ಒಂದು ರೀತಿಯ ಪಾಸಿಟಿವಿಟಿ ದರ ಇದೆ. ತಿಂಗಳಾಂತ್ಯವರೆಗೂ ಪರಾಮರ್ಶಿಸಿ ಬಳಿಕವೇ ಸೂಕ್ತ ತೀರ್ಮಾನ ಕೈಗೊಳ್ಳಲು ಜಿಲ್ಲಾಕಾರಿಗಳಿಗೆ ಸೂಚನೆ ನೀಡಬೇಕು ಎಂದು ತಜ್ಞರು ತಿಳಿಸಿದ್ದಾರೆ.
ತಿಂಗಳಾಂತ್ಯದವರೆಗೂ ಪರಿಸ್ಥಿತಿಯನ್ನು ಪರಾಮರ್ಶಿಸಬೇಕು. ಒಂದು ವೇಳೆ ಐಸಿಯು ಮತ್ತು ಆಕ್ಸಿಜನ್‍ಕೊರತೆ ಎದುರಾಗುವಂತಹ ಪರಿಸ್ಥಿತಿ ನಿರ್ಮಾಣವಾದರೆ ಸರ್ಕಾರ ತನ್ನ ನಿರ್ಧಾರವನ್ನು ಪುನರ್ ಪರಿಶೀಲನೆ ಮಾಡಲಿದೆ.
