ಪಣಜಿ,ಜ.18- ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ತಡೆಗಟ್ಟಲು ಸರ್ಕಾರ ಜಾರಿ ಮಾಡಿರುವ ವಾರಾಂತ್ಯದ ಲಾಕ್‍ಡೌನ್ ಮತ್ತು ರಾತ್ರಿ ಕರ್ಫ್ಯೂಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿರೋಧ ವ್ಯಕ್ತಪಡಿಸಿದ್ದಾರೆ. ಗೋವಾ ರಾಜ್ಯದ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿರುವ ಅವರು ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರಬಹುದು. ಆದರೆ ಅದರ ಪರಿಣಾಮ ಕಡಿಮೆಯಿದೆ. ಹೀಗಾಗಿ ಲಾಕ್‍ಡೌನ್ ಇಲ್ಲವೇ ನೈಟ್ ಕರ್ಫ್ಯೂ ವಿಧಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಾನು ಕರ್ನಾಟಕ ಸರ್ಕಾರದ ನಿರ್ಧಾರವನ್ನು ವಿರೋಧಿಸುತ್ತಿಲ್ಲ. ಆದರೆ ಪ್ರಸ್ತುತ ಸಂದರ್ಭದಲ್ಲಿ ಲಾಕ್‍ಡೌನ್ ಮತ್ತು ನೈಟ್ ಕರ್ಫ್ಯೂ ವಿಧಿಸಿದರೆ ಜನಸಾಮಾನ್ಯರಿಗೆ ಹೊರೆಯಾಗಲಿದೆ. ಸರ್ಕಾರ ಇದರ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು ಎಂದು ಅವರು ಮನವಿ ಮಾಡಿದರು.
ಪರಿಸ್ಥಿತಿಯನ್ನು ಪರಾಮರ್ಶಿಸಿ ತಜ್ಞರ ಸಲಹೆ ಪಡೆದು ಸರ್ಕಾರ ಕ್ರಮ ತೆಗೆದುಕೊಳ್ಳಲು ನನ್ನ ಅಭ್ಯಂತರವಿಲ್ಲ. ವೈದ್ಯರ ಅಭಿಪ್ರಾಯ ಒಂದು ರೀತಿ ಇದ್ದರೆ, ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರ ಅಭಿಪ್ರಾಯ ಇನ್ನೊಂದು ರೀತಿಯಿದೆ. ಇದು ಸಹಜವಾಗಿ ಜನರಲ್ಲಿ ಆತಂಕ ಸೃಷ್ಟಿಸಿದೆ ಎಂದರು.
ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಹೇಳುವುದಾದರೆ ಲಾಕ್‍ಡೌನ್ ಹೇರಬಾರದು. ವೈದ್ಯರ ಅಭಿಪ್ರಾಯವೂ ಇದೇ ಆಗಿದೆ. ಕೊರೊನಾ ಸೋಂಕು ವೇಗವಾಗಿ ಹರಡಿದರೂ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ. ಹಾಗಾಗಿ ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಮಾತ್ರವಲ್ಲ ಮಹಾರಾಷ್ಟ್ರ, ದೆಹಲಿಯಲ್ಲೂ ಸೋಂಕಿನ ಪ್ರಮಾಣ ಹೆಚ್ಚಾಗುತ್ತಲೇ ಇದೆ. ರಾಜ್ಯದಲ್ಲೂ ದಿನೇದಿನೇ ಕೋವಿಡ್ ಹೆಚ್ಚಾಗಿದೆ. ಅದೃಷ್ಟವಶಾತ್ ಮೂರನೇ ಅಲೆಯಲ್ಲಿ ಪ್ರಾಣಾಪಾಯ ಕಡಿಮೆ ಇದೆ. ಐಸಿಯು ವೆಂಟಿಲೇಟರ್‍ಗೆ ಹೋಗುವ ರೋಗಿಗಳ ಸಂಖ್ಯೆ ಕಡಿಮೆ ಇದೆ. ವೇಗವಾಗಿ ಹಬ್ಬುತ್ತಿದೆ. ಆದರೆ ಯಾವುದೇ ಪ್ರಾಣಾಪಾಯ ಆಗಿಲ್ಲ ಎಂದು ಹೇಳಿದರು.
ಮಹಾರಾಷ್ಟ್ರ, ದೆಹಲಿ, ಪಶ್ಚಿಮ ಬಂಗಾಳ ಸೇರಿದಂತೆ ಮತ್ತಿತರ ಕಡೆ ಕಳೆದೆರಡು ದಿನಗಳಿಂದ ಸೋಂಕು ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಪಾಸಿವಿಟಿ ದರವೂ ಕಡಿಮೆಯಾಗಿದೆ. ಜನರು ಕೋವಿಡ್ ಕಾರಣಕ್ಕಾಗಿ ಹೆದರಬೇಕಾದ ಅಗತ್ಯವಿಲ್ಲ. ಸೋಂಕು ಕಾಣಿಸಿಕೊಂಡಾಗ ಸೂಕ್ತ ಚಿಕಿತ್ಸೆ ಪಡೆದುಕೊಂಡರೆ ಸಾಕು ಎಂದು ವೈದ್ಯರೇ ಹೇಳುತ್ತಿದ್ದಾರೆ. ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕೆಂದು ಮನವಿ ಮಾಡಿದರು.
ಕೋವಿಡ್ ಮೂರನೇ ಅಲೆ ಪರಿಣಾಮ ಬಹಳ ಕಡಿಮೆ ಇದೆ. ಲಾಕ್‍ಡೌನ್ ಮಾಡಿ ಜೀವನ ಏಕೆ ಸಂಕಷ್ಟಕ್ಕೆ ದೂಡಬೇಕು ಎಂದು ಪ್ರಶ್ನಿಸಿದರು. ಜೀವನಕ್ಕಿಂತ ಜೀವ ಮುಖ್ಯ. 3ನೇ ಅಲೆಯ ಪ್ರಕರಣಗಳ ದಾಖಲೆಗಳನ್ನು ನೋಡಿದಾಗ ಜೀವಕ್ಕೆ ಹಾನಿಯಾಗುವ ಪ್ರಮಾಣ ಕಡಿಮೆಯಿದೆ. ಹೀಗಿರುವಾಗ ಆತಂಕ ಪಡುವುದು ಏಕೆ? ಯಾರು ಎರಡು ಡೋಸ್ ಲಸಿಕೆ ಪಡೆದಿದ್ದಾರೆ ಅವರಿಗೆ ಕಡಿಮೆ ಹಾನಿಯಾಗಿದೆ. ಐಸಿಯುಗೆ ಹೋಗುವಂತಹ ಗಂಭೀರ ಸ್ಥಿತಿ ಬಂದಿಲ್ಲ.
ಅನಗತ್ಯವಾಗಿ ಭಯಕ್ಕೆ ದೂಡುವ ಅವಶ್ಯಕತೆ ಇಲ್ಲ, ಆದರೆ ಎಚ್ಚರ ವಹಿಸಬೇಕು. ಕಠಿಣ ನಿಯಮ ಹೇರಬೇಕು. ಕಫ್ರ್ಯೂ, ಲಾಕ್‍ಡೌನ್ ನಿಂದ ಜೀವನ ಕಟ್ಟಿಕೊಂಡವರನ್ನು ಮತ್ತಷ್ಟು ದುಸ್ತರಗೊಳಿಸುತ್ತದೆ. ಎಚ್ಚರ ವಹಿಸುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.
