ಬೆಂಗಳೂರು,ಜ.19- ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ನಿಯಂತ್ರಣಕ್ಕಾಗಿ ಶನಿವಾರ ಮತ್ತು ಭಾನವಾರ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದ್ದು ಸಾರ್ವಜನಿಕರು ಸೇರಿದಂತೆ ಉದ್ಯಮ ವಲಯದಲ್ಲಿ ವೀಕೆಂಡ್ ಕರ್ಫ್ಯೂಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿಸಿರುವ ವಾರಾಂತ್ಯದ ಲಾಕ್‍ಡೌನ್ ಮತ್ತು ರಾತ್ರಿ ಕರ್ಫ್ಯೂ ಹಿಂಪಡೆಯುವುದು ಬಹುತೇಕ ಖಚಿತವಾಗಿದೆ.
ಇದೇ 21ರಂದು ಶುಕ್ರವಾರ ನಡೆಯುವ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ತಮ್ಮ ಸಂಪುಟದ ಸಹೋದ್ಯೋಗಿಗಳು ಮತ್ತು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರ ಜೊತೆ ಚರ್ಚಿಸಿ ಸರ್ಕಾರದ ಅಂತಿಮ ನಿರ್ಧಾರವನ್ನು ಪ್ರಕಟಿಸಲಿದ್ದಾರೆ.
ಕೋವಿಡ್‍ನಿಂದಾಗಿ ಈಗಾಗಲೇ ನಷ್ಟದಲ್ಲಿರುವ ವ್ಯಾಪಾರ ಕ್ಷೇತ್ರ ವೀಕೆಂಡ್ ಕಫ್ರ್ಯೂ ಜಾರಿಯಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ. ಈ ನಿಟ್ಟಿನಲ್ಲಿ ವೀಕೆಂಡ್ ಕರ್ಫ್ಯೂ ತೆರವುಗೊಳಿಸಬೇಕು ಎಂಬ ಒತ್ತಡವೂ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಭೆ ಕರೆಯಲಾಗಿದೆ.
ಈ ಸಭೆಯಲ್ಲಿ ಕೋವಿಡ್ ಪರಿಸ್ಥಿತಿ ಹಾಗೂ ಮುಂಜಾಗ್ರತ ಕ್ರಮಗಳ ಬಗ್ಗೆ ಚರ್ಚೆ ನಡೆಯಲಿದೆ. ವೀಕೆಂಡ್ ಕರ್ಫ್ಯೂ ತೆರವು ಗೊಳಿಸಬೇಕೇ, ಬೇಡವೇ ಎಂಬುದರ ಕುರಿತು ಇದೇ ಸಭೆಯಲ್ಲಿ ನಿರ್ಧಾರವಾಗಲಿದೆ.
ಕೋವಿಡ್‍ನಿಂದಾಗಿ ಹೋಟೆಲ್ ಉದ್ಯಮಕ್ಕೆ ದೊಡ್ಡ ಮಟ್ಟಿನ ಹೊಡೆತ ಬಿದ್ದಿದೆ. ಈಗಾಗಲೇ ಶೇ.50ರಷ್ಟು ಗ್ರಾಹಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ಇನ್ನು ವೀಕೆಂಡ್‍ಗಳಲ್ಲಿ ಪಾರ್ಸೆಲ್‍ಗೆ ಮಾತ್ರ ಅವಕಾಶವಿದೆ. ಇದು ಹೋಟೆಲ್ ಉದ್ಯಮದ ಮೇಲೆ ಭಾರೀ ಪರಿಣಾಮ ಬೀರಲಿದೆ. ಈ ನಿಟ್ಟಿನಲ್ಲಿ ವೀಕೆಂಡ್ ಕರ್ಫ್ಯೂ ತೆರವುಗೊಳಿಸಬೇಕು ಎಂಬುದು ಹೋಟೆಲ್ ಉದ್ಯಮಿಗಳ ಬೇಡಿಕೆಯಾಗಿದೆ.
ಪ್ರಸ್ತುತ ಜಾರಿಯಲ್ಲಿರುವ ವಾರಾಂತ್ಯದ ಲಾಕ್‍ಡೌನ್ ಮತ್ತು ರಾತ್ರಿ 10ರಿಂದ ಮುಂಜಾನೆ 5ರವರೆಗೆ ಎಲ್ಲಾ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಕರ್ಫ್ಯೂವನ್ನು ಸಹ ತೆಗೆದು ಹಾಕಲಿದ್ದು, ಶನಿವಾರದಿಂದಲೇ ಕರ್ನಾಟಕ ಮತ್ತೆ ಸಹಜಸ್ಥಿತಿಗೆ ಮರಳಲಿದೆ.ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಜ್ಞರು ನೀಡಿರುವ ಶಿಫಾರಸ್ಸುಗಳನ್ನು ಪರಾಮರ್ಶೆ ಮಾಡುವುದಾಗಿ ಹೇಳಿದ್ದಾರೆ.
ಇನ್ನೊಂದೆಡೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಸುಧಾಕರ್ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಜನರ ಪರವಾದ ಸರ್ಕಾರ ತೀರ್ಮಾನವನ್ನು ತೆಗೆದುಕೊಳ್ಳಲಿದೆ.
ನಮಗೆ ಜನರ ಆರೋಗ್ಯ ಮತ್ತು ಜೀವನವು ಅಷ್ಟೇ ಮುಖ್ಯ ಎನ್ನುವ ಮೂಲಕ ಪರೋಕ್ಷವಾಗಿ ಈಗಿರುವ ನಿರ್ಬಂಧಗಳನ್ನು ಸಡಿಲ ಮಾಡುವ ಸುಳಿವು ನೀಡಿದರು. ಇನ್ನು ಸಚಿವ ಅಶ್ವಥ್ ನಾರಾಯಣ ಮತ್ತು ಸಂಸದ ಪ್ರತಾಪ್ ಸಿಂಹ ಸರ್ಕಾರ ನಿಬಂಧನೆಗಳನ್ನು ಸಡಿಲಗೊಳಿಸಲಿದೆ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿರುವ ವೈದ್ಯಕೀಯ ಶಿಕ್ಷಣ ಸಚಿವ ಅಶ್ವಥ್ ನಾರಾಯಣ, ಶುಕ್ರವಾರ ನಡೆಯಲಿರುವ ಸಭೆಯಲ್ಲಿ ಸರ್ಕಾರ ಯಾರಿಗೂ ತೊಂದರೆಯಾಗದಂತೆ ಸೂಕ್ತವಾದ ನಿರ್ಧಾರವನ್ನು ತೆಗೆದುಕೊಳ್ಳಲಿದೆ. ಸಾರ್ವಜನಿಕರು ಆತಂಕಪಡಬೇಕಾದ ಅಗತ್ಯವಿಲ್ಲ ಎಂದು ಅಭಯ ನೀಡಿದ್ದಾರೆ.
ಮೈಸೂರಿನಲ್ಲಿ ಪ್ರತಾಪ್ ಸಿಂಹ ಸರ್ಕಾರದ ನಿರ್ಧಾರಕ್ಕೆ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದ್ದು, ಜನರು ಆಸ್ಪತ್ರೆಗೆ ದಾಖಲಾಗುತ್ತಿಲ್ಲ. ಸರ್ಕಾರ ಲಾಕ್‍ಡೌನ್ ಜಾರಿ ಮಾಡುವುದಾದರೆ ಲಸಿಕೆ ಏಕೆ ನೀಡಬೇಕೆಂದು ಪ್ರಶ್ನಿಸಿದ್ದಾರೆ.
ಸರ್ಕಾರದ ತೀರ್ಮಾನಕ್ಕೆ ಉದ್ಯಮ ವಲಯದಿಂದಲೂ ವಿರೋಧ ವ್ಯಕ್ತವಾಗಿದೆ. ಹೋಟೆಲ್ ಮಾಲೀಕರ ಸಂಘ, ಬಾರ್ ಅಂಡ್ ರೆಸ್ಟೋರೆಂಟ್ ಸಂಘ, ಗಾರ್ಮೆಂಟ್ಸ್ ನೌಕರರು, ಆಟೋ, ಓಲಾ, ಊಬರ್, ಖಾಸಗಿ ನೌಕರರು, ಬಸ್, ಲಾರಿ ಸೇರಿದಂತೆ ಎಲ್ಲ ವಲಯದಿಂದಲೂ ತೀವ್ರವಾದ ವಿರೋಧ ವ್ಯಕ್ತವಾಗಿದೆ.
ಈ ಬಾರಿ ಸರ್ಕಾರ ಶನಿವಾರ ಮತ್ತು ಭಾನುವಾರ ಲಾಕ್‍ಡೌನ್ ಘೋಷಣೆ ಮಾಡಿದರೆ ನಾವು ಪಾಲನೆ ಮಾಡುವುದಿಲ್ಲ. ನಮ್ಮ ವಿರುದ್ಧ ಬೇಕಾದರೆ ದೂರು ದಾಖಲಿಸಲಿ ಮೊದಲೇ ಆರ್ಥಿಕ ಸಂಕಷ್ಟದಲ್ಲಿದ್ದೇವೆ. ಖಾಸಗಿ ಆಸ್ಪತ್ರೆಗಳಿಗೆ ಅನುಕೂಲ ಮಾಡಿಕೊಡಲು ಪದೇ ಪದೇ ಲಾಕ್‍ಡೌನ್ ಮಾಡಲಾಗುತ್ತದೆ. ಯಾವುದೇ ಕಾರಣಕ್ಕೂ ನಾವು ಈ ಬಾರಿ ಸರ್ಕಾರದ ನಿಯಮಗಳನ್ನು ಪಾಲಿಸುವುದಿಲ್ಲ ಎಂದು ಸೆಡ್ಡು ಹೊಡೆದಿವೆ.
ತಾಂತ್ರಿಕ ಸಲಹಾ ಸಮಿತಿಯಲ್ಲೇ ಗೊಂದಲ: ರಾಜ್ಯದಲ್ಲಿ ವಾರಾಂತ್ಯದ ಲಾಕ್‍ಡೌನ್ ಮತ್ತು ನೈಟ್ ಕರ್ಫ್ಯೂ ವಿಸ್ತರಣೆ ಮಾಡುವ ಕುರಿತಾಗಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರಲ್ಲಿ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ.
ಕೆಲವು ಸದಸ್ಯರು ರಾಜ್ಯದಲ್ಲಿ ಈ ತಿಂಗಳ ಅಂತ್ಯದವರೆಗೆ ಈಗಿರುವ ಯಥಾಸ್ಥಿತಿಯನ್ನೇ ಮುಂದುವರೆಸಬೇಕು. ಯಾವುದೇ ಕಾರಣಕ್ಕೂ ನಿಯಮಾವಳಿಗಳಲ್ಲಿ ಬದಲಾವಣೆ ಬೇಡ ಎಂದು ಸಲಹೆ ಕೊಟ್ಟಿದ್ದಾರೆ. ಆದರೆ ಇದಕ್ಕೆ ವ್ಯತಿರಿಕ್ತ ಎಂಬಂತೆ ಸಮಿತಿಯ ಇನ್ನು ಕೆಲವು ಸದಸ್ಯರು 3ನೇ ಅಲೆಯಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿಲ್ಲ.
ಬಹುತೇಕರು ಹೋಮ್ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ. ಆರ್ಥಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಲಾಕ್‍ಡೌನ್ ಇಲ್ಲವೇ ಕರ್ಫ್ಯೂ ಅಗತ್ಯವಿಲ್ಲ. ಜ.25ರ ನಂತರ ಪರಿಸ್ಥಿತಿ ನೋಡಿಕೊಂಡು ಈಗ ವಿಸಿರುವ ನಿಯಮಗಳಲ್ಲಿ ಕೆಲವು ರಿಯಾಯ್ತಿ ನೀಡುವುದು ಉತ್ತಮ ಎಂದಿದ್ದಾರೆ.
ಮಹಾರಾಷ್ಟ್ರ, ದೆಹಲಿ, ಪಶ್ಚಿಮ ಬಂಗಾಳ ಸೇರಿದಂತೆ ಹೆಚ್ಚು ಸೋಂಕು ಪೀಡಿತ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಮುಂದಿನ ದಿನಗಳು ಇನ್ನಷ್ಟು ಅಪಾಯಕಾರಿಯಾಗಲಿವೆ ಎಂದು ಮತ್ತಷ್ಟು ಸದಸ್ಯರು ಆತಂಕ ವ್ಯಕ್ತಪಡಿಸಿದ್ದಾರೆ.
ಹೀಗೆ ಸಮಿತಿ ಸದಸ್ಯರಲ್ಲೇ ಭಿನ್ನಾಭಿಪ್ರಾಯ ವ್ಯಕ್ತವಾಗಿರುವುದರಿಂದ ಸರ್ಕಾರ ಕೂಡ ಖಚಿತ ನಿರ್ಧಾರ ತೆಗೆದುಕೊಳ್ಳಲು ಮೀನಾಮೇಷ ಎಣಿಸಿದೆ. ತಾಂತ್ರಿಕ ಸಲಹಾ ಸಮಿತಿಯ ಒಬ್ಬೊಬ್ಬ ಸದಸ್ಯರು ವಿಭಿನ್ನವಾದ ವರದಿ ಕೊಟ್ಟಿರುವುದು ಸರ್ಕಾರಕ್ಕೆ ತಲೆ ಬಿಸಿ ಮಾಡಿದೆ. ಸೋಮವಾರದ ಸಭೆಯಲ್ಲೂ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ.
