ಬೆಂಗಳೂರು,ಜ.8-ಕೊರೊನಾ ಸೋಂಕು ತಡೆ ಉದ್ದೇಶದಿಂದ ಕರೆ ನೀಡಲಾಗಿರುವ ವಿಕೇಂಡ್ ಕಫ್ರ್ಯೂ ಪರಿಣಾಮ ಇಡಿ ಬೆಂಗಳೂರು ಸ್ಥಬ್ದಗೊಂಡಿದೆ.ಪ್ರತಿನಿತ್ಯ ಜನಜಂಗುಳಿಯಿಂದ ಕೂಡಿರುವ ಪ್ರದೇಶಗಳಾದ ಮೆಜೆಸ್ಟಿಕ್, ಮಲ್ಲೇಶ್ವರಂ, ಕೆ.ಆರ್.ಮಾರುಕಟ್ಟೆ ಪ್ರದೇಶಗಳು ಬಿಕೋ ಎನ್ನುತ್ತಿವೆ.
ತಾಸಿಗೊಂದು ಬಸ್ ವ್ಯವಸ್ಥೆ ಇರುವುದರಿಂದ ಮೆಜೆಸ್ಟಿಕ್ ಬಸ್ ನಿಲ್ದಾಣ ಖಾಲಿ ಖಾಲಿಯಾಗಿದೆ.ಬೆರಳೇಣಿಕೆಯಷ್ಟು ಪ್ರಯಾಣಿಕರು ಮಾತ್ರ ಕಂಡು ಬರುತ್ತಿದ್ದು, ಬಸ್ ಸಿಗದೆ ಕೆಲವರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.ಕಫ್ರ್ಯೂ ಬಗ್ಗೆ ತಿಳಿಯದ ಕೂಲಿ ಕಾರ್ಮಿಕರು ಬಸ್ ಇಲ್ಲದಿರುವುದನ್ನು ಕಂಡು ಬರಿಗಾಲಿನಲ್ಲೆ ತಮ್ಮ ಮನೆಗಳ ಕಡೆ ತೆರಳುತ್ತಿದ್ದ ದೃಶ್ಯ ಕಂಡು ಬಂತು.ಕೆಲವರಂತೂ ಹಾಗೊಮ್ಮೆ ಈಗೊಮ್ಮೆ ಬಸ್ ಓಡಿಸುವ ಸರ್ಕಾರದ ನಿರ್ಧಾರದ ವಿರುದ್ಧ ಹರಿಹಾಯ್ದರು.
ಬಂದ್ ಮಾಡಿದರೆ ಎಲ್ಲ ಬಸ್‍ಗಳನ್ನು ನಿಲ್ಲಿಸಬೇಕು. ತಾಸಿಗೊಂದು ಬಸ್ ವ್ಯವಸ್ಥೆ ಮಾಡಬಾರದಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.ಇನ್ನು ಮಲ್ಲೇಶ್ವರಂ, ಜಯನಗರ, ಕೆ.ಆರ್.ಮಾರುಕಟ್ಟೆ ಸುತ್ತಮುತ್ತಲ ಪ್ರದೇಶಗಳ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಲಾಗಿರುವುದರಿಂದ ಇಡಿ ನಗರ ಬಿಕೋ ಎನ್ನುತ್ತಿದೆ.
ವಿಕೇಂಡ್‍ಗಳಲ್ಲಿ ಜನಸಮೂಹ ಸೇರುವ ಮಾಲ್‍ಗಳಿಗೆ ಬಿಗ ಜಡಿದಿರುವುದರಿಂದ ನಗರದೆಲ್ಲೆಡೆ ನೀರವ ಮೌನ ಆವರಿಸಿದೆ.
ಮಂತ್ರಿ ಮಾಲ್, ಓರಾಯನ್ ಮಾಲ್, ಲುಲು ಮಾಲ್‍ಗಳ ಮುಂದೆ ಪೊಲೀಸರು ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಮಾಡಿದ್ದಾರೆ.
ರಸ್ತೆಗಳಲ್ಲಿ ಪೊಲೀಸರು ಬ್ಯಾರಿಕೆಡ್ ಹಾಕಿ ಅನವಶ್ಯಕ ಓಡಾಡುವವರ ಮೇಲೆ ಹದ್ದಿನಕಣ್ಣಿಟ್ಟಿರುವುದರಿಂದ ಜನ ಮನೆ ಸೇರಿಕೊಂಡಿದ್ದಾರೆ. ಅತಿ ಹೆಚ್ಚು ವಾಹನ ಸಂಚಾರವಿರುವ ಕಾರ್ಪೋರೇಷನ್ ವೃತ್ತದಲ್ಲಿ ಸಂಚರಿಸುವ ಪ್ರತಿಯೊಂದು ವಾಹನಗಳನ್ನು ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ.
ಗುರುತಿನ ಚೀಟಿ ಇರುವವರನ್ನು ಬಿಟ್ಟು ಅನಗತ್ಯವಾಗಿ ಓಡಾಡುವ ವಾಹನಗಳನ್ನು ಸೀಜ್ ಮಾಡಲಾಗುತ್ತಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಪಹರೆ ಕಾಯುತ್ತಿರುವುದರಿಂದ ಒಂದು ಕಡೆ ತಪ್ಪಿಸಿಕೊಂಡು ಹೋದರೂ ಮತ್ತೊಂದು ಕಡೆ ಸಿಕ್ಕಿಹಾಕಿಕೊಳ್ಳಬೇಕಾಗುತ್ತದೆ.
