ಬೆಂಗಳೂರು,ಜ.10-ಎರಡು ದಿನಗಳಿಂದ ಸ್ತಬ್ಧಗೊಂಡಿದ್ದ ಬೆಂಗಳೂರು ಇಂದಿನಿಂದ ಸಹಜ ಸ್ಥಿತಿಗೆ ಮರುಳಿದೆ. ವೀಕೆಂಡ್ ಕರ್ಫ್ಯೂ ಅವಧಿ ಮುಗಿಯುತ್ತಿದ್ದಂತೆ ನಗರದಲ್ಲಿ ವಾಹನಗಳ ಓಡಾಟ ಆರಂಭಗೊಂಡಿದ್ದು, ರಸ್ತೆಗಳಲ್ಲಿ ಸಾಲು ಸಾಲು ವಾಹನಗಳು ಸಂಚರಿಸುತ್ತಿರುವ ದೃಶ್ಯ ಕಂಡು ಬಂದಿದೆ.
ವೀಕೆಂಡ್ ಸಂದರ್ಭದಲ್ಲಿ ರಸ್ತೆಗಳಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್‍ಗಳನ್ನು ಪೊಲೀಸರು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಬಂದ್ ಮಾಡಲಾಗಿದ್ದ ಮೇಲ್ಸೆತುವೆಗಳ ಮೇಲೂ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಶುಕ್ರವಾರವೇ ಊರುಗಳತ್ತ ಮುಖ ಮಾಡಿದ್ದವರು ಹಳ್ಳಿಯಿಂದ ವಾಪಾಸ್ಸಾಗುತ್ತಿರುವುದರಿಂದ ಹೆದ್ದಾರಿಗಳಲ್ಲಿ ಭಾರಿ ವಾಹನ ದಟ್ಟಣೆ ಉಂಟಾಗಿದೆ. ವೀಕೆಂಡ್ ಕರ್ಫ್ಯೂ ಮುಗಿದಿದ್ದು, ಇಂದು ರಾತ್ರಿ 10 ರಿಂದ ಬೆಳಿಗ್ಗೆ ಐದು ಗಂಟೆಯವರೆಗೆ ಕೇವಲ ನೈಟ್ ಕಫ್ರ್ಯೂ ಮಾತ್ರ ಇರಲಿದೆ. ಉಳಿದಂತೆ ನಗರದಲ್ಲಿ ಕೊರೊನಾ ನಿಯಮಗಳನುಸಾರ ವಾಣಿಜ್ಯ ಚಟುವಟಿಕೆಗಳು ಆರಂಭಗೊಂಡಿವೆ.
ವಾಣಿಜ್ಯ ಉದ್ದಿಮೆಗಳು 50-50 ರೂಲ್ಸ್ ಅನ್ವಯವಾಗಲಿದೆ. ಮಾಲ್ , ಬಾರ್, ಪಬ್, ಸಿನಿಮಾ ಮಂದಿರಗಳು ಸೇರಿದಂತೆ ವ್ಯಾಪಾರ ವಹಿವಾಟುಗಳು ಎಂದಿನಂತೆ ಶುರುವಾಗಿವೆ.
10 ರಿಂದ 12 ತರಗತಿಗಳು ಹಾಗೂ ಮೆಡಿಕಲ್ ಮತ್ತು ಪ್ಯಾರಾ ಮೆಡಿಕಲ್ ಕಾಲೇಜುಗಳು ಆರಂಭಗೊಂಡಿವೆ. ಆಟೋ, ಟ್ಯಾಕ್ಸಿ, ಮೆಟ್ರೋ, ಬಿಎಂಟಿಸಿ ಬಸ್ ಸಂಚಾರ ಎಂದಿನಂತೆ ಇದ್ದು, ಎಲ್ಲೇಡೆ ಜನಜಂಗುಳಿ ಕಂಡುಬರುತ್ತಿದೆ.
