ಬೆಂಗಳೂರು, ಜ.22- ಕೊರೊನಾ ನಿಯಂತ್ರಣಕ್ಕಾಗಿ ವಿಸಿದ್ದ ವಾರಾಂತ್ಯ ಕಫ್ರ್ಯೂವನ್ನು ಸರ್ಕಾರ ರದ್ದುಗೊಳಿಸಿರುವ ಕ್ರಮದಿಂದ ಜನ ನಿರಾಳರಾಗಿದ್ದಾರೆ. ಕೊರೊನಾ ಕಟ್ಟಿಹಾಕಲು ಸರ್ಕಾರ ವೀಕೆಂಡ್ ಕರ್ಫ್ಯೂ ವಿಧಿಸಿದ್ದರಿಂದ ಜನ ವ್ಯಾಪಾರ-ವಹಿವಾಟು ಇಲ್ಲದೆ ಕಂಗೆಟ್ಟಿದ್ದರು.
ವಾರಾಂತ್ಯದಲ್ಲಿ ವ್ಯಾಪಾರ-ವಹಿವಾಟು ನಡೆಸುವ ಪ್ರವಾಸೋದ್ಯಮ, ಬಾರ್ ಅಂಡ್ ರೆಸ್ಟೋರೆಂಟ್, ಹೊಟೇಲ್ಗಳು ಮತ್ತಿತರ ಉದ್ಯಮಗಳಿಗೆ ಕರ್ಫ್ಯೂನಿಂದ ಸಾಕಷ್ಟು ನಷ್ಟ ಉಂಟಾಗಿತ್ತು. ಇದೇ ಜನವರಿ 31ರ ವರೆಗೆ ವಾರಾಂತ್ಯ ಕರ್ಫ್ಯೂ ಮುಂದುವರೆಸುವುದಾಗಿ ಸರ್ಕಾರ ಹೇಳಿದ್ದರಿಂದ ಈ ವಲಯದವರು ಸರ್ಕಾರದ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದ್ದರು.
ಇದಷ್ಟೇ ಅಲ್ಲದೆ ಬೀದಿಬದಿ ವ್ಯಾಪಾರಿಗಳು, ಸಣ್ಣಪುಟ್ಟ ಅಂಗಡಿ-ಮುಂಗಟ್ಟುಗಳು, ಪಾನಿಪುರಿ ವ್ಯಾಪಾರಿಗಳಿಂದ ಹಿಡಿದು ರಸ್ತೆಬದಿಯಲ್ಲಿ ನಡೆಸುವ ದೊಡ್ಡದೊಡ್ಡ ಹೊಟೇಲ್ಗಳವರಿಗೂ ಭಾರೀ ಹೊಡೆತ ಬಿದ್ದಿತ್ತು.ಮಾಲ್ಗಳಿಗೂ ವೀಕೆಂಡ್ ಕರ್ಫ್ಯೂನಿಂದ ತೀವ್ರ ತೊಂದರೆಯಾಗಿತ್ತು. ವೀಕೆಂಡ್ನಲ್ಲೇ ಮಾಲ್ಗಳ ವಹಿವಾಟು ಕೋಟ್ಯಂತರ ರೂ. ನಡೆಯುತ್ತಿತ್ತು. ಕಫ್ರ್ಯೂನಿಂದ ಇದರ ಮೇಲೆ ಬಹಳ ಹೊಡೆತ ಬಿದ್ದಿತ್ತು.
ಈಗ ಕಫ್ರ್ಯೂ ತೆರವುಗೊಳಿಸಿರುವುದರಿಂದ ಆರ್ಥಿಕ ಚಟುವಟಿಕೆಗಳಿಗೆ ಅನುಕೂಲವಾಗಿದೆ. ಬೆಂಗಳೂರು ನಗರದಲ್ಲಿ 600 ಕಲ್ಯಾಣ ಮಂಟಪಗಳು ಸೇರಿದಂತೆ ರಾಜ್ಯಾದ್ಯಂತ 2 ಸಾವಿರಕ್ಕೂ ಹೆಚ್ಚು ಕಲ್ಯಾಣ ಮಂಟಪಗಳಿವೆ.ಪ್ರಸ್ತುತ ಮದುವೆ ಸೀಜನ್ನಲ್ಲಿ ವೀಕೆಂಡ್ನಲ್ಲೇ ಮದುವೆ ಬುಕ್ ಆಗಿದ್ದವು. ಕಫ್ರ್ಯೂ ತೆರವಾಗಿದ್ದರಿಂದ ಕೊರೊನಾ ನಿಯಮಗಳ ಪಾಲನೆಯೊಂದಿಗೆ ಮದುವೆ ಮಾಡಲು ಅನುಕೂಲವಾಗಿರುವುದರ ಜತೆಗೆ ವಹಿವಾಟಿಗೂ ಸಹಕಾರ ದೊರೆತಿದೆ.
ಅಲ್ಲದೆ, ವೀಕೆಂಡ್ನಲ್ಲಿ ಪ್ರವಾಸಿ ಸ್ಥಳಗಳಿಗೆ ಸಾವಿರಾರು ಜನ ತೆರಳುತ್ತಾರೆ. ಕರ್ಫ್ಯೂ ವಿಸಿದ್ದರಿಂದ ವ್ಯಾಪಾರ-ವಹಿವಾಟು ಸಂಪೂರ್ಣ ಸ್ಥಗಿತವಾಗಿತ್ತು. ಈಗ ತೆರವಾಗಿರುವ ಹಿನ್ನೆಲೆಯಲ್ಲಿ ಪ್ರವಾಸಿ ತಾಣಗಳು ತೆರೆದುಕೊಳ್ಳಲಿವೆ. ಪ್ರವಾಸಿ ತಾಣಗಳಿಗೆ ತೆರಳುವ ಟೆಂಪೊ, ಟ್ಯಾಕ್ಸಿಗಳಿಗೂ ಬಾಡಿಗೆ ದೊರೆಯುತ್ತದೆ.
ಬಾರ್ ಅಂಡ್ ರೆಸ್ಟೋರೆಂಟ್, ಹೊಟೇಲ್, ವೀಕೆಂಡ್ ಪಾರ್ಟಿಗಳ ಆಯೋಜನೆ, ರೆಸಾರ್ಟ್ಗಳಲ್ಲಿ ನಡೆಯುವ ಸಭ-ಸಮಾರಂಭಗಳ ಮೂಲಕ ಆರ್ಥಿಕ ವಹಿವಾಟಿಗೆ ಅನುಕೂಲವಾಗುತ್ತದೆ. ಈ ಮೂಲಕ ಸರ್ಕಾರಕ್ಕೂ ತೆರಿಗೆ ರೂಪದಲ್ಲಿ ಹಣ ಬರುತ್ತದೆ.
ಕರ್ಫ್ಯೂ ತೆರವುಗೊಳಿಸಿದೆ ಎಂದು ಜನ ಮೈ ಮರೆಯಬಾರದು. ಕೊರೊನಾ ಇನ್ನೂ ನಮ್ಮಿಂದ ದೂರವಾಗಿಲ್ಲ. ಎಚ್ಚರಿಕೆಯಿಂದ ಬದುಕು ಸಾಗಿಸಬೇಕಾಗಿದೆ. ಜೀವದ ಜತೆ ಜೀವನವನ್ನೂ ನಡೆಸಬೇಕು. ಸರ್ಕಾರ ರೂಪಿಸಿರುವ ಮಾರ್ಗಸೂಚಿಗಳೊಂದಿಗೆ ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿದೆ.
